ರಾಜ್ಯದಲ್ಲಿ ಸಿಎಂ ಬದಲಾವಣೆಯ ಯಾವುದೇ ಪ್ರಸ್ತಾಪವಿಲ್ಲ: ಸಚಿವ ಎಚ್.ಸಿ.ಮಹದೇವಪ್ಪ

ಎಚ್.ಸಿ.ಮಹದೇವಪ್ಪ
ಬೆಂಗಳೂರು : ‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಯಾವುದೇ ಪ್ರಸ್ತಾವ ಸರಕಾರ ಅಥವಾ ಕಾಂಗ್ರೆಸ್ ಪಕ್ಷದ ಮುಂದೆ ಇಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಾಂಗ್ರೆಸ್ ಹೈಕಮಾಂಡ್ ವಿಷಯ ಹೇಗೆ ಗೊತ್ತಾಗುತ್ತದೆ. ರಾಜ್ಯದಲ್ಲಿ ಸದ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಮುಖ್ಯಮಂತ್ರಿ ಮುಂದುವರೆಯುತ್ತಾರೆ ಎಂದು ವಿವರಣೆ ನೀಡಿದರು.
ಸರಕಾರ ಹಾಗೂ ಪಕ್ಷದ ನಡುವೆ ಹೊಂದಾಣಿಕೆ ಇದೆ. ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಇಲ್ಲ ಎಂಬುದಕ್ಕೆ ನಿನ್ನೆ ಯಾದಗಿರಿಯಲ್ಲಿ ನಡೆದ ಕಾರ್ಯಕ್ರಮವೇ ಸಾಕ್ಷಿ. ಲಕ್ಷಾಂತರ ಜನ ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿಯಾಗಿದ್ದರು. ವಿಪಕ್ಷಗಳು ರಾಜಕೀಯಕ್ಕಾಗಿ ಸುಳ್ಳು ಹೇಳುತ್ತಿವೆ ಎಂದು ಮಹದೇವಪ್ಪ ಆರೋಪಿಸಿದರು.
ಜೂ.23ಕ್ಕೆ ರಾಯಚೂರಿನಲ್ಲಿ ಮತ್ತೊಂದು ಸಮಾವೇಶ ನಡೆಯಲಿದೆ. ಅಲ್ಲಿಯೂ ನೂರಾರು ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ ಎಂದ ಮಹದೇವಪ್ಪ, ಭ್ರಷ್ಟಾಚಾರ ನಡೆಯುತ್ತಿದ್ದರೆ ದಾಖಲಾತಿಗಳನ್ನು ತನಿಖಾ ಸಂಸ್ಥೆಗೆ ಕೊಡಲಿ. ಎಚ್.ವಿಶ್ವನಾಥ್ ಹಿರಿಯ ರಾಜಕಾರಣಿ. ಅವರು ಯಾವುದೇ ವಿಚಾರ ಮಾತನಾಡಿದರೂ ಅದರಲ್ಲಿ ಸತ್ಯಾಂಶ ಇರಬೇಕು, ಆಧಾರಗಳಿರಬೇಕು ಎಂದು ತಿಳಿಸಿದರು.







