ಎತ್ತಿನಹೊಳೆ, ಮೇಕೆದಾಟು ವಿಳಂಬಕ್ಕೆ ರಾಜ್ಯ ಸರಕಾರವೇ ಕಾರಣ : ಎಚ್.ಡಿ.ದೇವೇಗೌಡ

ಎಚ್.ಡಿ.ದೇವೇಗೌಡ
ಬೆಂಗಳೂರು : ಕರ್ನಾಟಕದಲ್ಲಿ ನೀರಾವರಿ ಯೋಜನೆಗಳನ್ನು ಸಕಾಲಕ್ಕೆ ಕಾರ್ಯಗತ ಮಾಡಲಾಗದೇ ರಾಜ್ಯ ಸರಕಾರವು ಕೇಂದ್ರ ಸರಕಾರವನ್ನು ಅನಗತ್ಯವಾಗಿ ದೂರುತ್ತಿದೆ. ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ದೂರಿದ್ದಾರೆ.
ಸೋಮವಾರ ರಾಜ್ಯಸಭೆಯಲ್ಲಿ ಬಜೆಟ್ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎತ್ತಿನಹೊಳೆ, ಮೇಕೆದಾಟು ಯೋಜನೆಗಳ ವಿಳಂಬಕ್ಕೆ ರಾಜ್ಯ ಸರಕಾರವೇ ಕಾರಣ. ಅದನ್ನು ಮರೆಮಾಚಿಕೊಳ್ಳಲು ಕೇಂದ್ರವನ್ನು ದೂರುತ್ತಿದೆ. ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರಕಾರದ ನಿರ್ಲಕ್ಷದಿಂದ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಟೀಕಿಸಿದರು.
ಎತ್ತಿನಹೊಳೆ ಯೋಜನೆ ಕಾರ್ಯಗತ ಮಾಡುವಲ್ಲಿ ಸರಕಾರ ಪರಿಸರಕ್ಕೆ ಧಕ್ಕೆ ತಂದಿದೆ ಹಾಗೂ ಕಾನೂನು, ನಿಯಮಗಳನ್ನು ಉಲ್ಲಂಘನೆ ಮಾಡಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಆಗ ಶೆಟ್ಟರ್ ಅವರು ರಾಜ್ಯದ ಸಿಎಂ ಆಗಿದ್ದರು, ಆಗ ಆ ಯೋಜನೆಯ ಅಂದಾಜು ವೆಚ್ಚ 8ಸಾವಿರ ಕೋಟಿ ರೂ. ಇದೀಗ ಅದು 33ಸಾವಿರ ಕೋಟಿ ರೂ.ಮೀರಿದೆ.
ಈವರೆಗೂ ಒಂದು ಹನಿ ನೀರು ಹರಿದಿಲ್ಲ. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ತೊಟ್ಟು ನೀರು ಹೋಗಿಲ್ಲ. ಅಲ್ಲದೆ, ಆ ಯೋಜನೆ ಕಾರ್ಯಗತ ಆಗುತ್ತಿರುವ ಹಾಸನ ಜಿಲ್ಲೆಯ ಸಕಲೇಶಪುರಕ್ಕೆ ಹತ್ತಿರದಲ್ಲಿರುವ ಅರಸೀಕರೆಗೆ ನೀರು ಬಂದಿಲ್ಲ. ಈ ಬಗ್ಗೆ ನಾನು ಪುಟಗಟ್ಟಲೆ ಮಾಹಿತಿ ಇಟ್ಟುಕೊಂಡು ಮಾತನಾಡಬಲ್ಲೆ ಎಂದು ಅವರು ಹೇಳಿದರು.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಕೊಡಬೇಕೆಂದು ಸರಕಾರ ಎತ್ತಿಹೊಳೆ ಯೋಜನೆ ಮೂಲಕ ರೂಪಿಸಿತ್ತೋ, ಈಗ ಆ ಯೋಜನೆ ಕಾರ್ಯಗತವಾಗದೇ ಅದೇ ಜಿಲ್ಲೆಗಳಿಗೆ ಬೆಂಗಳೂರಿನ ಕೊಳಚೆ ನೀರನ್ನು 3 ಹಂತಗಳಲ್ಲಿ ಶುದ್ಧೀಕರಿಸದೆ ಮಲೀನ ನೀರನ್ನು ಹರಿಸುತ್ತಿದೆ. ಆ ನೀರು ಮಾನವ ಬಳಕೆ ಯೋಗ್ಯವಲ್ಲದ್ದು. ಇದರ ಪರಿಣಾಮ ಆ ಭಾಗದಲ್ಲಿ ಬೆಳೆಯುತ್ತಿರುವ ಬೆಳೆಗಳು-ತರಕಾರಿಗಳು ವಿಷಕಾರಿಯಾಗುತ್ತಿದ್ದು ಅವು ಸೇವನೆಗೆ ಯೋಗ್ಯವಲ್ಲದ್ದಾಗಿವೆ. ಜನರ ಜೀವದ ಜೊತೆ ಸರಕಾರ ಚೆಲ್ಲಾಟವಾಡುತ್ತಿದೆ ಎಂದು ಅವರು ಟೀಕಿಸಿದರು.







