ರಾಜ್ಯಸಭೆ ಸ್ಥಾನದ ಬಗ್ಗೆ ನನಗೆ ವ್ಯಾಮೋಹವಿಲ್ಲ, ಅದರ ಬಗ್ಗೆ ನಾನು ಬೇಡಿಕೆ ಇಟ್ಟಿರಲಿಲ್ಲ: ಎಚ್.ಡಿ.ದೇವೇಗೌಡ

ಬೆಂಗಳೂರು : ನನ್ನ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಬಾಂಧವ್ಯವು ರಾಜ್ಯಸಭೆ ಸ್ಥಾನವನ್ನು ಮೀರಿದ್ದು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡ ಹೇಳಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪ್ಪತ್ತು ವರ್ಷಗಳ ಸುದೀರ್ಘ ರಾಜಕೀಯ ಜೀವನ ಸವೆಸಿರುವ ನನಗೆ ರಾಜ್ಯಸಭೆ ಸದಸ್ಯನಾಗಬೇಕು ಎಂಬ ವ್ಯಾಮೋಹವಿಲ್ಲ. ಸುದೀರ್ಘ ರಾಜಕೀಯ ಜೀವನದಲ್ಲಿ ಅಧಿಕಾರಕ್ಕಿಂತ ಜನಸೇವೆಯೇ ಮುಖ್ಯವಾಗಿತ್ತು ಎಂಬುದನ್ನು ಅತ್ಯಂತ ವಿನಯಪೂರ್ವಕವಾಗಿ ಹೇಳಲು ಬಯಸುತ್ತೇನೆ ಎಂದರು.
ಕಳೆದೆರಡು ದಿನಗಳಿಂದ ರಾಜ್ಯಸಭೆ ಸ್ಥಾನದ ವಿಚಾರದಲ್ಲಿ ತಮ್ಮ ಬಗ್ಗೆ ನಡೆಯುತ್ತಿರುವ ಚರ್ಚೆಗೆ ತೆರೆ ಎಳೆದ ಮಾಜಿ ಪ್ರಧಾನಿಗಳು; ಈ ಚರ್ಚೆ ಅನಗತ್ಯ. ಕೆಲವರು ಸುಖಾಸುಮ್ಮನೆ ಮಾತಾಡುತ್ತಿದ್ದಾರೆ. ಈ ವಿಚಾರದಲ್ಲಿ ನನಗೆ ಅಪಮಾನವಾಗಿದೆ ಎಂಬ ಹೇಳಿಕೆಗಳಿಗೆ ಯಾವುದೇ ಮಹತ್ವವನ್ನು ನಾನು ನೀಡುವುದಿಲ್ಲ. ಅದರಲ್ಲಿ ಯಾವುದೇ ಅರ್ಥವೂ ಇಲ್ಲ ಎಂದು ಹೇಳಿದರು.
ನನ್ನ ಮತ್ತು ಪ್ರಧಾನಿ ಮೋದಿ ಅವರ ನಡುವೆ ಉತ್ತಮ ಬಾಂಧವ್ಯ ಇದೆ. ಒಂದು ರಾಜ್ಯಸಭೆ ಸ್ಥಾನ ಇಂತಹ ಉತ್ತಮ ಬಾಂಧವ್ಯವನ್ನು ಹಾಳು ಮಾಡುತ್ತದೆ ಎಂದು ಯಾರಾದರೂ ಭಾವಿಸಿದ್ದರೆ ಅದು ಅವರ ಮೂರ್ಖತನ. ಒಂದು ಕಾಲದಲ್ಲಿ ನಾನು ಮೋದಿಯವರನ್ನು ಕಟುವಾಗಿ ಟೀಕಿಸಿದ್ದೆ ಎಂಬುದು ನಿಜ. ಆದರೆ ಕಳೆದ ಹಲವು ವರ್ಷಗಳಿಂದ ನಾನು ಅವರನ್ನು ಬಹಳಷ್ಟು ಅರ್ಥ ಮಾಡಿಕೊಂಡಿದ್ದೇನೆ. ಅವರಲ್ಲಿ ವಿಶ್ವಾಸ ಇರಿಸಿದ್ದೇನೆ. ಅವರ ಒಳ್ಳೆಯ ಕೆಲಸಗಳನ್ನು ಹೃದಯಪೂರ್ವಕವಾಗಿ ಶ್ಲಾಘಿಸಿದ್ದೇನೆ ಎಂದು ಹೇಳಿದರು.
ನಾನು ಸುಮ್ಮನೆ ಕೂರುವುದಿಲ್ಲ. ಪಕ್ಷದ ಬಲವರ್ಧನೆಗೆ ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ರಾಜ್ಯ ಮತ್ತು ದೇಶದ ವಿಚಾರಗಳನ್ನು ಸಂಸತ್ತಿನ ಒಳಗೆ ಮತ್ತು ಹೊರಗೆಯು ನೇರವಾಗಿ ಮಾತನಾಡಿದ್ದೇನೆ ಎಂದು ಹೇಳಿದರು.
ನರೇಂದ್ರ ಮೋದಿ ಅವರ ಬಗ್ಗೆ ಭಾರತ ಅಷ್ಟೇ ಅಲ್ಲ ಜಗತ್ತಿನ ಎಲ್ಲಾ ಭಾಗಗಳಲ್ಲಿಯೂ ಗೌರವಭಾವ ಇದೆ. ಅದರಿಂದ ರಾಷ್ಟ್ರಕೂ ಒಳ್ಳೆಯದಾಗುತ್ತಿದೆ. ಅವರ ಮಟ್ಟಕ್ಕೆ ಯಾವ ನಾಯಕನು ಬೆಳೆಯಲು ಸಾಧ್ಯವಿಲ್ಲ. ಅವರೊಂದಿಗೆ ನಾನು ಹೊಂದಿರುವ ಬಾಂಧವ್ಯ ವೈಯಕ್ತಿಕ ಮಟ್ಟದ್ದು. ಅದನ್ನು ರಾಜಕೀಯ ಕಾರಣಕ್ಕಾಗಿ ಕಳೆದುಕೊಳ್ಳಲು ಬಯಸುವುದಿಲ್ಲ. ನಾನು ಸಂಸತ್ತಿನಲ್ಲಿ ಇರಲಿ ಇಲ್ಲದಿರಲಿ ಮೋದಿ ಅವರ ನಡುವಿನ ಸಂಬಂಧಕ್ಕೆ ದಕ್ಕೆ ಬರುವುದಿಲ್ಲ. ಕೊನೆಯವರೆಗೂ ನಮ್ಮ ಸಂಬಂಧ ಹೀಗೆ ಇರುತ್ತದೆ ಎಂದರು.
'ನಾನು ರಾಜಕಾರಣಕ್ಕೆ ಬಂದು ಎಷ್ಟು ವರ್ಷವಾಯಿತು ಎಂದು ಒಮ್ಮೆ ಯೋಚಿಸಿ. 1954-55 ರಿಂದಲೇ ನಾನು ಸಕ್ರಿಯ ರಾಜಕಾರಣದಲ್ಲಿದ್ದೇನೆ. ಅಂದು ಕೇವಲ ಗುತ್ತಿಗೆ ಕೆಲಸ ಮಾಡುತ್ತಿದ್ದ ನಾನು, ಅದರ ಜೊತೆಜೊತೆಗೆ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ರಾಜಕೀಯಕ್ಕೆ ಬಂದವನು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಜನರ ಮಧ್ಯೆಯೇ ಇದ್ದೇನೆ. ಹಾಗಾಗಿ, ಇಂದು ಒಂದು ಸ್ಥಾನಕ್ಕಾಗಿ ನಾನು ಹಾತೊರೆಯುವ ಅಗತ್ಯವಿಲ್ಲ ಎಂದರು.
ರಾಜ್ಯಸಭೆ ಸ್ಥಾನ ತಪ್ಪಿಸಿ ಬಿಜೆಪಿ ದೇವೇಗೌಡರಿಗೆ ಅಪಮಾನ ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಪದೇಪದೇ ದೂರುತ್ತಿದ್ದಾರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು; ಮೋದಿ ಅವರ ವಿಶ್ವಾಸದ ಮುಂದೆ ಇವರೆಲ್ಲರ ಹೇಳಿಕೆಗಳು ಟೀಕೆ ಟಿಪ್ಪಣಿಗಳು ಬಹಳ ಸಣ್ಣವು ಎಂದರು.
ಕೆಲವರು ನನ್ನ ಬಗ್ಗೆ ಕಾಳಜಿಯಿಂದ ಮಾತನಾಡುತ್ತಿದ್ದಾರೆ. ಬಹಳ ಅಪಮಾನವಾಯಿತು ಎಂದು ನೋವು ವ್ಯಕ್ತಪಡಿಸುತ್ತಿದ್ದಾರೆ. ಆದರೆ, ನನ್ನ ಹೆಸರು ಪರಿಗಣನೆಗೆ ಬರುತ್ತದೆ ಎಂದು ಮಾಧ್ಯಮಗಳಲ್ಲಿ ಪ್ರಚಾರವಾಗಿದ್ದು ಬಿಟ್ಟರೆ, ನಾನು ಆ ಬಗ್ಗೆ ಎಲ್ಲಿಯೂ ನನಗೆ ರಾಜ್ಯಸಭೆ ಸ್ಥಾನ ಬೇಕೆಂದು ಬೇಡಿಕೆ ಇಟ್ಟಿರಲಿಲ್ಲ. ಈ ಬಗ್ಗೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಚಿವರು ಆಗಿರುವ ಕುಮಾರಸ್ವಾಮಿಯವರು ಸ್ಪಷ್ಟವಾಗಿಯೇ ಹೇಳಿದ್ದಾರೆ. ಇದರಲ್ಲಿ ಮತ್ತೊಮ್ಮೆ ನಾನು ಹೇಳುವಂಥದ್ದು ಏನು ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಗ್ರೇಟರ್ ಬೆಂಗಳೂರು ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ಮಾಜಿ ಶಾಸಕರಾದ ಕೆ.ಎ.ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ, ದೊಡ್ಡನಗೌಡ ಪಾಟೀಲ್, ಜೆಡಿಎಸ್ ರಾಜ್ಯ ಕಾನೂನು ವಿಭಾಗದ ಅಧ್ಯಕ್ಷ ಎ.ಪಿ. ರಂಗನಾಥ್, ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಚಂದನ್ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಹಾಜರಿದ್ದರು.






