ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಆಗಿದೆ ಎನ್ನುವುದು ಸರಿಯಲ್ಲ : ಎಚ್.ಡಿ.ಕುಮಾರಸ್ವಾಮಿ

ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ರಾಷ್ಟ್ರೀಯ ಭದ್ರತೆ, ರಾಷ್ಟ್ರ ರಕ್ಷಣೆ ವಿಚಾರದಲ್ಲಿ ನರೇಂದ್ರ ಮೋದಿ ಅವರ ಸರಕಾರವು ದೃಢ ಹೆಜ್ಜೆಗಳನ್ನು ಇಟ್ಟಿದ್ದು, ನಮ್ಮ ಮೇಲೆ ದಾಳಿ ನಡೆಸಿದ ರಾಷ್ಟಕ್ಕೆ ನಮ್ಮ ಸೇನಾಪಡೆಗಳು ತಕ್ಕ ಪಾಠ ಕಳಿಸಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದ ಬಳಿ ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪಹಲ್ಗಾಮ್ನಲ್ಲಿ ಪಾಕಿಸ್ತಾನದ ಭಯೋತ್ಪಾದಕರು ನಮ್ಮ ದೇಶದ ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನಾಪಡೆಗಳು ಆ ದೇಶದಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಿವೆ. ಪಾಕಿಸ್ತಾನದ ಸೇನೆಯು ಉಗ್ರ ಪೋಷಣೆ ಮಾಡುತ್ತಾ ಭಾರತದ ಮೇಲೆ ದಾಳಿ ನಡೆಸಿತ್ತು. ಅದಕ್ಕೆ ಭಾರತ ಪ್ರಬಲ ತಿರುಗೇಟು ನೀಡಿದೆ ಎಂದು ಹೇಳಿದರು.
ನರೇಂದ್ರ ಮೋದಿಯವರ ಧೃಢ ನಾಯಕತ್ವ ಹಾಗೂ ನಮ್ಮ ಹೆಮ್ಮೆಯ ಸೇನಾಪಡೆಗಳ ಶಕ್ತಿಯ ಮುಂದೆ ಪಾಕಿಸ್ತಾನ ಮಂಡಿಯೂರಿದೆ. ಭಾರತ ಎಲ್ಲ ಕಡೆ ಮೇಲುಗೈ ಸಾಧಿಸಿದೆ. ಪಾಕಿಸ್ಥಾನಕ್ಕೆ ನಡುಕ ಉಂಟಾಗಿತ್ತು. ಉಗ್ರರ ಚಟುವಟಿಕೆಗಳಿಗೆ ಇತಿಶ್ರೀ ಹಾಡುವ ದೃಷ್ಟಿಯಿಂದ ದೇಶದ ಪ್ರಧಾನಿ ಅವರು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದರು ಹಾಗೂ ಉಗ್ರರ ಶಿಬಿರಗಳ ಮೇಲೆ ನಮ್ಮ ಸೈನಿಕರು ದಾಳಿ ಮಾಡಿದ್ದರು ಎಂದು ಹೇಳಿದರು.
ಭಾರತ ಕಾಶ್ಮೀರ ವಿಷಯದಲ್ಲಿ 3ನೇ ರಾಷ್ಟ್ರದ ಮಧ್ಯಸ್ಥಿಕೆಗೆ ಒಪ್ಪಿಲ್ಲ :
ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಅನ್ನುವುದು ಸರಿಯಲ್ಲ. ಜಾಗತಿಕ ಮಟ್ಟದಲ್ಲಿ ತನ್ನ ಮುಖ ಉಳಿಸಿಕೊಳ್ಳಲು ಪಾಕಿಸ್ತಾನ ನಾನಾ ಸರ್ಕಸ್ ಮಾಡಿದೆ ಎಂದ ಕೇಂದ್ರ ಸಚಿವರು, ಭಾರತ ಕಾಶ್ಮೀರ ವಿಷಯದಲ್ಲಿ ಮೂರನೇ ರಾಷ್ಟ್ರದ ಮಧ್ಯಸ್ಥಿಕೆಗೆ ಒಪ್ಪಿಲ್ಲ. ಅದಕ್ಕೆ ಅವಕಾಶವನ್ನು ಕೂಡ ಕೊಟ್ಟಿಲ್ಲ. ಪ್ರಧಾನಿಗಳು ಕೂಡ ಇದೇ ಮಾತನ್ನು ಸ್ಪಷ್ಟವಾಗಿ ಹೇಳಿದ್ದಾರೆ. ರಾಷ್ಟ್ರದ ಹಿತಾಸಕ್ತಿ ವಿಷಯದಲ್ಲಿ ಮೋದಿ ಅವರು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.
ಉಗ್ರ ಪೋಷಕ ಪಾಕಿಸ್ತಾನವನ್ನು ಮಟ್ಟ ಹಾಕುವ ದೃಷ್ಟಿಯಿಂದ ಪೂರ್ಣ ಪ್ರಮಾಣದ ಯುದ್ದ ಆಗಲೇಬೇಕಿತ್ತು ಎಂಬ ನಿಲುವು ಒಂದು ಕಡೆ ಇದೆ. ಮತ್ತೊಂದು ಕಡೆ ರಷ್ಯಾ, ಉಕ್ರೇನ್ ಯುದ್ಧದಿಂದ ಇವತ್ತು ಯಾವ ಸ್ಥಿತಿ ಉಂಟಾಗಿದೆ ಎನ್ನುವ ವಾದವೂ ಇನ್ನೊಂದೆಡೆ. ಈ ದೃಷ್ಟಿಯಲ್ಲಿ ಕೇಂದ್ರ ಸರಕಾರ ಆಲೋಚನೆ ಮಾಡುತ್ತಿದೆ. ಆದರೆ, ಈಗಲಾದರೂ ಪಾಕಿಸ್ತಾನ ಎಚ್ಚೆತ್ತುಕೊಳ್ಳದಿದ್ದರೆ ಅದು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ನಾಶವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ದೇಶದ ಹಿತದೃಷ್ಟಿಯಿಂದ ಅನೇಕ ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ :
ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರಗಳನ್ನು ಎಲ್ಲರೂ ಬೆಂಬಲಿಸಬೇಕು. ಪಹಲ್ಗಾಮ್ ದಾಳಿ ನಡೆದಾಗಿನಿಂದ ಪ್ರಧಾನಿಗಳು ಯಾವ ರೀತಿ ಕೆಲಸ ಮಾಡಿದ್ದಾರೆ ಎನ್ನುವುದನ್ನು ಇಡೀ ದೇಶವೇ ನೋಡಿದೆ. ಪ್ರಧಾನಿಗಳು, ರಕ್ಷಣಾ ಸಚಿವರು ಅನೇಕ ಸಭೆಗಳನ್ನು ನಡೆಸಿದ್ದಾರೆ. ದೇಶದ ಹಿತದೃಷ್ಟಿಯಿಂದ ಅನೇಕ ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉಗ್ರ ಚಟುವಟಿಕೆಗಳಿಗೆ ಅಂತಿಮ ಇತಿಶ್ರೀ ಹಾಡಬೇಕು ಎಂಬ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಮೋದಿ ಅವರು ಕೆಚ್ಚೆದೆಯ ತೀರ್ಮಾನಗಳನ್ನು ಮಾಡಿದ್ದಾರೆ. ನಮ್ಮ ದೇಶದ ಪ್ರತಿಷ್ಠೆಗೆ ಧಕ್ಕೆ ಬಾರದಂತೆ ಪ್ರಧಾನ ಮಂತ್ರಿಗಳು ಹಾಗೂ ಸೇನಾಪಡೆಗಳು ಕೈಗೊಂಡಿರುವ ನಿರ್ಧಾರಗಳನ್ನು ನಾವು ನೋಡಿದ್ದೇವೆ. ಕೇವಲ ಎರಡೇ ದಿನಗಳಲ್ಲಿ ಪಾಕಿಸ್ತಾನ ಶರಣಾಗುವಂತೆ ಸೇನಾಪಡೆಗಳು ತಮ್ಮ ಪರಾಕ್ರಮ ಮೆರೆದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.







