ಭವಿಷ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ಅಧಿಕಾರಕ್ಕೆ ಬರಲಿದೆ : ಎಚ್.ಡಿ.ಕುಮಾರಸ್ವಾಮಿ
"ಕಾಂಗ್ರೆಸನ್ನು ಸಂಪೂರ್ಣ ಮನೆಗೆ ಕಳುಹಿಸುವವರೆಗೆ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ"

ಬೆಂಗಳೂರು : ‘ರಾಜ್ಯದಲ್ಲಿ ಭವಿಷ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ಅಧಿಕಾರಕ್ಕೆ ಬರಲಿದೆ. ನನಗೆ ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆ ಹಾಗೂ ಎರಡು ಬಾರಿ ಪಾರ್ಶ್ವ ವಾಯುವಿನ ಸಮಸ್ಯೆ ಎದುರಿಸಿದ್ದೇನೆ. ಜನರಿಗಾಗಿಯೇ ಬದುಕಿರುವೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ರವಿವಾರ ಇಲ್ಲಿನ ಜೆಡಿಎಸ್ ಭವನದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ನಾನು ಶಾಸಕನಾಗಿ ವಿಧಾನಸೌಧದಲ್ಲಿ ಇದಿದ್ದರೆ ಚೆನ್ನಾಗಿತ್ತು. ಆದರೆ, ಕೇಂದ್ರದಲ್ಲಿ ಸಚಿವನಾಗಿದ್ದೇನೆ. ರಾಜ್ಯದಲ್ಲಿ ಎಂತೆಂತಹ ಸಮಸ್ಯೆಗಳಿವೆ?. ಕಾವೇರಿ ಆರತಿಗೆ 92 ಕೋಟಿ ರೂಪಾಯಿಗಳು ಏಕೆ ಬೇಕು?. ಆ ಹಣದಿಂದ ಇವರ(ಕಾಂಗ್ರೆಸ್‍ನವರ) ಮುಖಕ್ಕೆ ಮಂಗಳಾರತಿ ಎತ್ತಲಿಕ್ಕೆಯೇ ಅಷ್ಟೊಂದು ದೊಡ್ಡ ಮೊತ್ತದ ಹಣ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬೆಂಗಳೂರನ್ನು ಸಿಂಗಾಪುರ ಮಾಡುತ್ತಾರಂತೆ, ನಾವು ನೋಡಿದ್ದೇವಲ್ಲ. ಮಳೆ ಬಂದಾಗ ಸಾಯಿ ಲೇಔಟ್‍ನ ಸ್ಥಿತಿ ಏನಾಗಿತ್ತು?. ಇದೇನಾ ಸಿಂಗಾಪುರ ಅಂದರೆ?. ಈ ಸರಕಾರದ ಬಗ್ಗೆ ಎಷ್ಟು ಹೇಳಿದರೂ ಸಾಲುವುದಿಲ್ಲ. ಎಷ್ಟು ಜನರಿಗೆ ಕೆಲಸ ಕೊಟ್ಟಿದ್ದಾರೆ?. ಇವರು ವಿಧಾನಸೌಧದ ಮೆಟ್ಟಿಲಿಗೆ ಮಾತ್ರ ಮುಖ್ಯಮಂತ್ರಿಯಂತೆ’ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
‘ನಮ್ಮ ತಂದೆ-ತಾಯಿಯವರು ಮಾಡಿರುವ ಒಳ್ಳೆಯ ಕಾರ್ಯ, ಅವರ ಆಶೀರ್ವಾದ, ನಾಡಿನ ಜನರ ಆಶೀರ್ವಾದದಿಂದ ಆರೋಗ್ಯವಾಗಿದ್ದೇನೆ. ಬಿಜೆಪಿ ಜೊತೆಯಲ್ಲಿ ಹೋಗೋಣ, ನಾವು ತಪ್ಪು ಮಾಡೋದು ಬೇಡ. ನಾವು ತಗ್ಗಿಬಗ್ಗಿ ನಡೆಯೋಣ, ಮುಂದೇನು ಆಗುತ್ತದೆಯೋ ಭಗವಂತನ ಇಚ್ಚೆ ಎಂದು ನುಡಿದರು.
ಮೈತ್ರಿಯಲ್ಲಿ ಗೊಂದಲ ಇಲ್ಲ :
ಜೆಡಿಎಸ್ ಮುಗಿದು ಹೋಗಿದೆ, ಬನ್ನಿ ನಮ್ಮ ಜೊತೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಇಂತಹ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಇಲ್ಲಿ ಜನ ಸೇರಿರುವುದು ನೋಡಿದರೆ ಅವರಿಗೆ ಇಂದು ಉತ್ತರ ಸಿಕ್ಕಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಗೊಂದಲ ಇಲ್ಲ. ಸೀಟ್ ತರೋದು ನನ್ನ ಜವಾಬ್ದಾರಿ. ಕ್ಷೇತ್ರ ಗಟ್ಟಿ ಮಾಡಿಕೊಳ್ಳಿ, ಎಲ್ಲವೂ ಕೇಂದ್ರದಲ್ಲಿ ನಿರ್ಧಾರವಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ಅನಿವಾರ್ಯವಾಗಿ ನಾನು ಕೇಂದ್ರ ಸಚಿವನಾಗಿ ಹೋಗಿದ್ದೇನೆ. ಪಕ್ಷ ಸಂಘಟನೆ ಕುಂಠಿತ ಆಗಿದೆ. ಪಕ್ಷ ಉಳಿಸಿ ಬೆಳೆಸಲು ಛಲ ಇಟ್ಟುಕೊಂಡು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೊರಟಿದ್ದಾರೆ. ನಾನೇನು ಪಕ್ಷ ಸಂಘಟನೆ ಮಾಡು ಎಂದಿಲ್ಲ. ಮೊದಲು ಕ್ಷೇತ್ರಕ್ಕೆ ಕರೆದಾಗ ಬರಲು ಹಿಂದೇಟು ಹಾಕುತ್ತಿದ್ದರು. ಈಗ ನಿಖಿಲ್ ಖುದ್ದಾಗಿ ನಿಮ ಕ್ಷೇತ್ರಕ್ಕೆ ಬರುತ್ತಿದ್ದಾರೆ ಎಂದು ಅವರು ತಿಳಿಸಿದರು.
ಮನೆಗೆ ಕಳುಹಿಸುವೆ: ‘ಜೆಡಿಎಸ್ ಅನ್ನು ಕುಟುಂಬದ ಪಕ್ಷ ಎನ್ನುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆ ಮುಂದೆ ಬಡವರು ಬರುತ್ತಾರೆಯೇ?. ನಾವು ಗೆದ್ದಾಗ ಹಿಗ್ಗಿಲ್ಲ, ಸೋತಾಗ ಕುಗ್ಗಿಲ್ಲ. ಕಾಂಗ್ರೆಸನ್ನು ಸಂಪೂರ್ಣ ಮನೆಗೆ ಕಳುಹಿಸುವವರೆಗೆ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದರು.







