ಸದ್ಯಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ : ಎಚ್.ಡಿ.ಕುಮಾರಸ್ವಾಮಿ

ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಅ. 23: ಜೆಡಿಎಸ್ ಪಕ್ಷದಲ್ಲಿ ಸದ್ಯಕ್ಕೆ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಯಾವುದೇ ಚರ್ಚೆ ಇಲ್ಲ. ಸದ್ಯ ನಾನೇ ರಾಜ್ಯಾಧ್ಯಕ್ಷನಾಗಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ಅವರಿಗೆ ಪಕ್ಷದ ಜವಾಬ್ದಾರಿ ಕೊಡಬೇಕು ಎಂಬ ಮನವಿ ಇದೆ. ಆದರೆ, ಇದ್ಯಾವುದರ ಬಗ್ಗೆ ಚರ್ಚೆ ಆಗಿಲ್ಲ. ಸದ್ಯಕ್ಕೆ ಜೆಡಿಎಸ್ನಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಶೀಘ್ರದಲ್ಲೇ ಸಮನ್ವಯ ಸಮಿತಿ ರಚನೆ: ಜೆಡಿಎಸ್-ಬಿಜೆಪಿ ನಡುವೆ ಶೀಘ್ರವೇ ಸಮನ್ವಯ ಸಮಿತಿ ರಚನೆ ಆಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಆ ಪಕ್ಷದ ನಾಯಕರು ಚರ್ಚೆ ಮಾಡಿದ್ದಾರೆ. ಬೆಂಗಳೂರಿಗೆ ಒಂದು, ರಾಜ್ಯಕ್ಕೆ ಒಂದು ಸಮನ್ವಯ ಸಮಿತಿ ರಚನೆ ಮಾಡಲು ತೀರ್ಮಾನ ಆಗಿದೆ. ಇನ್ನೊಂದು ವಾರ ಅಥವಾ ಹತ್ತು ದಿನಗಳಲ್ಲಿ ಅದರ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಜೆಡಿಎಸ್ ಕೋರ್ ಕಮಿಟಿ ಪುನರ್ ರಚನೆ ಬಗ್ಗೆ ನಮ್ಮ ಪಕ್ಷದಲ್ಲಿ ಸಭೆ ಆಗಿದೆ. ಕೋರ್ ಕಮಿಟಿ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಸಂಬಂಧ ಪಕ್ಷ ಸಂಘಟನೆಗೆ ಸಮಿತಿ ಮಾಡುವ ನಿರ್ಧಾರ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.
ಗೊತ್ತಿರಲಿಲ್ಲವೇ?: ಅಧಿಕಾರಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದಿದ್ದು ಇದೇ ಕಾಂಗ್ರೆಸ್ಸಿಗರು. ಅದಕ್ಕೂ ಮೊದಲು ನಾನು ಬಿಜೆಪಿ ಜತೆ ಸೇರಿ ಸರಕಾರ ರಚನೆ ಮಾಡಿದ್ದು ಕಾಂಗ್ರೆಸ್ನವರಿಗೆ ಗೊತ್ತಿರಲಿಲ್ಲವೇ?. ಜೆಡಿಎಸ್ ಬಗ್ಗೆ ಕ್ಷುಲ್ಲಕ ರಾಜಕೀಯಕ್ಕಾಗಿ ಮಾತನಾಡುವುದನ್ನು ಬಿಟ್ಟು, ಕಲಬುರಗಿ ಜಿಲ್ಲೆಯಲ್ಲಿ ಆಗಿರುವ ನೆರೆ ಅನಾಹುತವನ್ನು ಸರಿ ಮಾಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ಎಚ್ಡಿಕೆ ತಿರುಗೇಟು ನೀಡಿದರು.
ಆರೆಸ್ಸೆಸ್ ಕುರಿತು ಈ ಹಿಂದೆ ನಾನು ಟೀಕೆ ಮಾಡಿದ್ದೇನೆ. ಇಲ್ಲ ಎಂದು ಹೇಳುವುದಿಲ್ಲ. ಕಾಂಗ್ರೆಸ್ನವರು ನೀವೇನು ಮಾಡಿದ್ದೀರಾ?. ರಾಜ್ಯದಲ್ಲಿ 136 ಸ್ಥಾನ ಕೊಟ್ಟಿದ್ದಾರೆ. ಜನರ ಸಮಸ್ಯೆ ಕೇಳುತ್ತಿಲ್ಲ. ಕಲಬುರ್ಗಿಯಲ್ಲಿ ಜನ ಬೀದಿಯಲ್ಲಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನೀವು ಏನು ನೆರವು ನೀಡಿದ್ದೀರಿ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
‘ದೇಶದಲ್ಲಿ 50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಒಂದೇ ಆಡಳಿತ ನಡೆಸಿದೆ. ಸ್ವಾತಂತ್ರ್ಯ ಬಂದ ನಂತರ ಎಲ್ಲ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಂಸದರನ್ನೇ ಜನ ಗೆಲ್ಲಿಸುತ್ತಿದ್ದರು. ಆಗ ಕೇಂದ್ರದಲ್ಲೂ, ರಾಜ್ಯದಲ್ಲೂ ಕಾಂಗ್ರೆಸ್ ಸರಕಾರ ಇತ್ತು. ಅವತ್ತಿನ ಅ ಸಂಸತ್ ಸದಸ್ಯರು ಏನೇನು ತಂದಿದ್ದರು?. ಅಂದು ಕರ್ನಾಟಕ ರಾಜ್ಯಕ್ಕೆ ಎಷ್ಟು ಹಣ ತಂದರು?. ಯಾವ ನೀರಾವರಿ ಸಮಸ್ಯೆ ಬಗೆಹರಿಸಿದರು. ಯಾವ ಅಭಿವೃದ್ಧಿಗೆ ಹಣ ತಂದಿದ್ದರು? ನಮ್ಮ ಬಗ್ಗೆ ಚರ್ಚೆ ಮಾಡುವ ಬದಲು ಅವರೇ ಕುಳಿತು ಚರ್ಚೆ ಮಾಡಿಕೊಳ್ಳಲಿ’
-ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ







