ರಾಜ್ಯದಲ್ಲಿರುವುದು ರಬ್ಬರ್ ಸ್ಟ್ಯಾಂಪ್ ಗೃಹ ಸಚಿವರೇ? : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಎಚ್.ಡಿ. ಕುಮಾರಸ್ವಾಮಿ
ಹೊಸದಿಲ್ಲಿ : ‘ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾರು?. ಅವರಿಗೆ ಆ ಅಧಿಕಾರ ಯಾರು ಕೊಟ್ಟರು?. ರಾಜ್ಯದಲ್ಲಿರುವುದು ರಬ್ಬರ್ ಸ್ಟ್ಯಾಂಪ್ ಗೃಹ ಸಚಿವರಾ?’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ದಿಲ್ಲಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತಾಡಿದ ಅವರು, ‘ಮಂಗಳವಾರ ಬಳ್ಳಾರಿಯಲ್ಲಿ ಡಿಸಿಎಂ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅದಕ್ಕೆ ಗೃಹ ಸಚಿವರು ಇಲ್ಲವೇ? ರಾಜ್ಯದಲ್ಲಿ ಇರುವ ಗೃಹ ಸಚಿವರು ಹೆಬ್ಬೆಟ್ಟು ಸಚಿವರಾ?. ನನಗೆ ಹಲವು ಮಾಹಿತಿಗಳು, ನೈಜ ಘಟನೆಗಳ ಬಗ್ಗೆ ಮಾಹಿತಿ ಕೊಡುವವರು ಇದ್ದಾರೆ. ಅದರ ಸತ್ಯಾಸತ್ಯತೆ ಪರಿಶೀಲಿಸಿ ಆ ಬಳಿಕ ನಾನು ಮಾಧ್ಯಮಗಳಿಗೆ ವಿವರಿಸಿದ್ದೇನೆ. ಜನತೆಗೆ ಸತ್ಯ ತಿಳಿಯಬೇಕಲ್ಲವೇ?’ ಎಂದು ಹೇಳಿದರು.
‘ಡಿಸಿಎಂ, ಯಾವ ಅಧಿಕಾರದ ಮೇಲೆ ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ?. ಗೃಹ ಇಲಾಖೆಯಲ್ಲಿ ಇವರ ಹಸ್ತಕ್ಷೇಪ ಯಾಕೆ? ಡಿಸಿಎಂ ಎಂದರೆ ಅವರು ಮಂತ್ರಿ ಅಷ್ಟೇ. ಕಾಂಗ್ರೆಸ್ ಸತ್ಯ ಶೋಧನಾ ಸಮಿತಿಗೆ ಅಧಿಕಾರಿಗಳು ಯಾವ ಮಾಹಿತಿ ಕೊಡುತ್ತಾರೆ?. ಕಾರ್ಯಕರ್ತರು, ಕಾಂಗ್ರೆಸ್ ನಾಯಕರು ಘಟನೆಗೆ ಕಾರಣರಾದ ಶಾಸಕರ ವಿರುದ್ದವೇ ಸತ್ಯಶೋಧನೆ ಸಮಿತಿಯ ಮುಂದೆ ದೂರು ನೀಡಿದ್ದಾರೆ. ಹಾಗಾದರೆ ನಿಮ್ಮ ತನಿಖೆಯ ಹಣೆಬರಹ ಏನು ಎಂದು ಅವರು ಪ್ರಶ್ನಿಸಿದರು.
ಮುಚ್ಚಿ ಹಾಕಲು ಪ್ರಯತ್ನ: ಬಳ್ಳಾರಿಯಲ್ಲಿ ನಡೆದ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಸರಕಾರ ಕೆಲಸ ಮಾಡುತ್ತಿದೆ. ಕೇವಲ ಬ್ಯಾನರ್ ಕಟ್ಟುವ ವಿಚಾರಕ್ಕೆ ಬೀದಿಯಲ್ಲಿ ಗುಂಡು ಹಾರಿಸ್ತಾರಾ?. ಮರಣೋತ್ತರ ಪರೀಕ್ಷೆ ನಡೆದ ನಂತರ ಕೊಲೆಯಾದ ಕಾರ್ಯಕರ್ತನ ಮೃತದೇಹವನ್ನು ಸುಟ್ಟು ಹಾಕಿದ್ದು ಯಾಕೆ?. ಇದಕ್ಕೆಲ್ಲಾ ಸರಕಾರ ಉತ್ತರ ಕೊಡಬೇಕಲ್ಲವೇ? ಎಂದು ಕುಮಾರಸ್ವಾಮಿ ಕೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಮೊದಲು ತಮ್ಮ ಗುರುಮಿಠಕಲ್ ಕ್ಷೇತ್ರಕ್ಕೆ ನಿಮ್ಮ ಹಾಗೂ ನಿಮ್ಮ ತಂದೆ ಕೊಡುಗೆ ಏನು ಎಂದು ಹೇಳಲಿ. ಕಲ್ಯಾಣ ಕರ್ನಾಟಕ ಬಿಡಿ, ನಿಮ್ಮ ಕ್ಷೇತ್ರ ನೋಡಿದರೆ ನೀವು ಮಾಡಿದ ಅಭಿವೃದ್ಧಿ ಏನು, ಎಂತದ್ದು ಎಂಬುದು ಗೊತ್ತಾಗುತ್ತದೆ ಎಂದು ಟೀಕಿಸಿದ ಅವರು, ಈಗ ನಡೆಯುತ್ತಿರುವುದು ಡಿಜಿಟಲ್ ಯುಗ. ಈ ಪ್ರಕರಣದ ಸರಿಯಾದ ತನಿಖೆ ನಡೆದರೆ ಯಾರ ಯಾರ ತಲೆ ಉರುಳುತ್ತೋ ಗೊತ್ತಿಲ್ಲ ಎಂದು ಪೊಲೀಸ್ ಅಧಿಕಾರಿಗಳೇ ಮಾತಾಡುತ್ತಿದ್ದಾರೆ ಎಂದರು.
ಬಳ್ಳಾರಿ ಬಿಮ್ಸ್ ನಿರ್ದೇಶಕರೇ ಹೇಳುವಂತೆ ಡಾ.ಯೋಗೀಶ್ ಎಂಬುವರು ಮೊದಲು ಮರಣೋತ್ತರ ಪರೀಕ್ಷೆ ಶುರು ಮಾಡಿದರು. ಅವರ ಪರೀಕ್ಷೆ ತಡವಾಯಿತು ಎಂದು ಇನ್ನೊಬ್ಬ ವೈದ್ಯ ಡಾ.ಚೇತನ್ ಎನ್ನುವರನ್ನು ಕರೆಸಿದ್ದಾರೆ. ಆ ವೈದ್ಯರನ್ನು ಕರೆಸಿದ್ದು ಯಾಕೆ? ಯಾರ ಆದೇಶದಂತೆ ಅವರನ್ನು ಕರೆಸಲಾಯಿತು?’ ಎಂದು ಅವರು ಕೇಳಿದರು.







