‘ವಿಬಿ- ಜಿ ರಾಮ್ ಜಿ ಯೋಜನೆ’ ಕುರಿತು ಕಾಂಗ್ರೆಸ್ ಸುಳ್ಳಿನ ಸಂಕಥನ ಸೃಷ್ಟಿಸುತ್ತಿದೆ : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ‘ವಿಬಿ: ಜಿ ರಾಮ್ ಜಿ ಯೋಜನೆ’ಯ ಬಗ್ಗೆ ಕಾಂಗ್ರೆಸ್ ಪಕ್ಷ ಸುಳ್ಳಿನ ಸಂಕಥನ ಸೃಷ್ಟಿ ಮಾಡುತ್ತಿದ್ದು, ಆ ಸುಳ್ಳನ್ನು ಎದುರಿಸಲು ನಾವು ದಾಖಲೆ ಸಮೇತ ಬಹಿರಂಗ ಚರ್ಚೆಗೆ ತಯಾರಿದ್ದೇವೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.
ಶನಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಬಿಜೆಪಿ ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ದೇಶದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದೆ. ಯಾವುದಾದರೂ ಪ್ರಮುಖ ಯೋಜನೆಗಳಿಗೆ ಮಹಾತ್ಮ ಗಾಂಧಿ ಅವರ ಹೆಸರನ್ನಿಟ್ಟಿದ್ದಾರೆಯೇ? ಎಲ್ಲ ಯೋಜನೆಗಳಿಗೆ ನೆಹರು ಕುಟುಂಬದ ಸದಸ್ಯರ ಹೆಸರುಗಳನ್ನು ಇಟ್ಟು ಗಾಂಧೀಜಿಗೆ ದ್ರೋಹ ಬಗೆದಿದ್ದಾರೆ. ಇವರಿಗೆ ಗಾಂಧೀಜಿ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ನಕಲಿ ಬಿಲ್ ಸೃಷ್ಟಿಸಿ ಲೂಟಿ ಮಾಡಿದ್ದು ಸಾಲದೇ?: ಹೊರಗೆ ಅಪಪ್ರಚಾರ ಮಾಡುತ್ತಿರುವುದು ಸಾಲದು ಎಂಬಂತೆ ವಿಧಾನಸಭೆ ಅಧಿವೇಶನವನ್ನು ಬೇರೆ ಕರೆಯುತ್ತಿದ್ದಾರೆ. ಪಾದಯಾತ್ರೆಯನ್ನು ಕೂಡ ನಡೆಸುತ್ತಾರಂತೆ. ನರೇಗಾ ಹೆಸರಿನಲ್ಲಿ ನಕಲಿ ಬಿಲ್ ಗಳನ್ನು ಸೃಷ್ಟಿಸಿ ಲೂಟಿ ಮಾಡಿದ್ದು ಸಾಲದೇ? ಎಂದು ಪ್ರಶ್ನಿಸಿದ ಅವರು, ನರೇಗಾ ಯೋಜನೆ ಸ್ಥಗಿತವಾಗಿಲ್ಲ. ಕಳೆದ ಅನೇಕ ವರ್ಷಗಳಿಂದ ಈ ಯೋಜನೆಯಲ್ಲಿ ನಡೆದಿದ್ದ ಅಕ್ರಮಗಳನ್ನು ನರೇಂದ್ರ ಮೋದಿ ಅವರ ಸರಕಾರ ಸರಿಪಡಿಸಿ ಸುಧಾರಣೆಗಳನ್ನು ತಂದಿದೆ ಎಂದು ಹೇಳಿದರು.
ಜಿ ರಾಮ್ ಜಿ ಯೋಜನೆಯಿಂದ ಗ್ರಾಮ ಪಂಚಾಯ್ತಿ ಅಧಿಕಾರಕ್ಕೆ ಆಗಲಿ ಅಥವಾ ರಾಜ್ಯ ಸರಕಾರಗಳ ಅಧಿಕಾರಕ್ಕೆ ಯಾವುದೇ ಧಕ್ಕೆ ಆಗಲ್ಲ. ಈ ಯೋಜನೆಗೆ ಪೂರ್ಣ ಅನುದಾನ ನೀಡುತ್ತಿರುವುದು ಕೇಂದ್ರ ಸರಕಾರ. ಆ ಅನುದಾನವನ್ನು ರಾಜ್ಯ ಸರಕಾರ ಸರಿಯಾಗಿ ಬಳಕೆ ಮಾಡುತ್ತಿಲ್ಲ. ಈ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಶಕ್ತಿ, ಅಧಿಕಾರ ನೀಡಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಗ್ರಾಮ ಪಂಚಾಯಿತಿಗಳೆ ತಮಗೆ ಬೇಕಾದ ಯೋಜನೆಗಳನ್ನು ರೂಪಿಸಲಿವೆ ಹಾಗೂ ಗ್ರಾಮ ಸಭೆಗಳು ಕೆಲಸದ ಆದ್ಯತೆ ಗುರುತಿಸಿ ಅನುಷ್ಠಾನ, ಮೇಲ್ವಿಚಾರಣೆ ಮತ್ತು ಸಾಮಾಜಿಕ ಲೆಕ್ಕಪರಿಶೋಧನೆಯನ್ನು ಕಡ್ಡಾಯಗೊಳಿಸುವ ಮೂಲಕ ಪಾರದರ್ಶಕತೆ ತರಲಾಗಿದೆ. ಜಿ ರಾಮ್ ಜಿ ಯೋಜನೆಯನ್ನು ಶೇ.60:40ರಷ್ಟು ಅನುಪಾತದಲ್ಲಿ ರೂಪಿಸಲಾಗಿದೆ. ರಾಜ್ಯ ಸರಕಾರಕ್ಕೂ ಜವಾಬ್ದಾರಿ ಇರಲಿ ಅಂತ ಶೇ.40ರಷ್ಟು ರಾಜ್ಯದ ಪಾಲು ನಿಗದಿ ಮಾಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕೊಪ್ಪಳದಲ್ಲಿ ನರೇಗಾ ಕೂಲಿ ಕೊಟ್ಟಿಲ್ಲ ಅಂತ ಲಾಠಿ ಚಾರ್ಜ್ ಮಾಡಿದ ಪ್ರಕರಣ ನಡೆದಿತ್ತು. ಕೂಲಿ ನೀಡುವುದಾಗಿ ಕಾರ್ಮಿಕರನ್ನು ಟ್ರಾಕ್ಟರ್ ನಲ್ಲಿ ಕರೆದುಕೊಂಡು ಹೋಗಿದ್ದರು. ದುರದೃಷ್ಟವಶಾತ್ ಆ ಟ್ರಾಕ್ಟರ್ ಅಪಘಾತಕ್ಕೆ ತುತ್ತಾಗಿ ಕೆಲ ಕಾರ್ಮಿಕರು ಸಾವನ್ನಪ್ಪಿದರು. ಅವರಿಗೆ ಪರಿಹಾರ ಕೊಡಬೇಕು ಅಂತ ನೋಡಿದಾಗ ಅವರ ಬಳಿ ಜಾಬ್ ಕಾರ್ಡೇ ಇರಲಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು, ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಪರಿಷತ್ ಮಾಜಿ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಅಶ್ವತ್ಥನಾರಾಯಣ, ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ಯುವ ಘಟಕದ ನಿಖಿಲ್ ಕುಮಾರಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.







