ನಾನು ಯಾವತ್ತೂ ಕೇಂದ್ರ ಸರಕಾರದ ಮುಂದೆ ಕೈಕಟ್ಟಿ ನಿಂತವನಲ್ಲ : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ನಾನು ಯಾವತ್ತೂ ಕೇಂದ್ರ ಸರಕಾರದ ಮುಂದೆ ಕೈಕಟ್ಟಿ ನಿಂತವನಲ್ಲ. ಮುಖ್ಯಮಂತ್ರಿಯಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದೇನೆ. ಆದರೆ, ಈಗಿನ ರಾಜ್ಯ ಸರಕಾರಕ್ಕೆ ಕೆಲಸ ಮಾಡುವ ಯೋಗ್ಯತೆ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಶನಿವಾರ ಕೆಂಗೇರಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾತ್ಯತೀತ ಜನತಾದಳದ ವತಿಯಿಂದ ಹಮ್ಮಿಕೊಂಡಿದ್ದ ಜನತಾ ಸಮಾವೇಶ ಹಾಗೂ ಪಕ್ಷದ ಬೆಳ್ಳಿಹಬ್ಬದ ಸಂಭ್ರಮ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಮನೆಗೆ ಸೂಟುಬೂಟು ಹಾಕುವವರು ಯಾರು ಬರುವುದಿಲ್ಲ. ಕಷ್ಟಜೀವಿಗಳು, ಬಡವರು, ದೀನರು ನನ್ನನ್ನು ಹುಡುಕಿಕೊಂಡು ಬರುತ್ತಾರೆ ಎಂದರು.
ನಾನು ಆರೂವರೆ ಕೋಟಿ ಕನ್ನಡಿಗರ ಆಶೀರ್ವಾದದಿಂದ ಮುಖ್ಯಮಂತ್ರಿ ಆಗಲಿಲ್ಲ. ಆದರೆ ಕನ್ನಡಿಗರು ಯಾವತ್ತೂ ತಲೆತಗ್ಗಿಸುವಂತೆ ಆಡಳಿತ ನಡೆಸಲಿಲ್ಲ. ಅನುದಾನ ಬರಲಿಲ್ಲ ಎಂದು ಕೇಂದ್ರ ಜೊತೆ ಕಾಲು ಕೆರೆದು ಜಗಳಕ್ಕೆ ಹೋಗಲಿಲ್ಲ. ನಿಮ್ಮನ್ನು ಎದುರು ಹಾಕಿಕೊಂಡೆ ರೈತರ ಸಾಲ ಮನ್ನಾ ಮಾಡಿದೆ. ಕೇವಲ ಗ್ಯಾರಂಟಿಗಳಿಂದ ಜನರ ಬದುಕು ಸರಿ ಹೋಗುವುದಿಲ್ಲ ಎಂದು ಅವರು ಪ್ರತಿಪಾದಿಸಿದರು
ಸಮಾಜಗಳನ್ನು ಒಡೆದುಕೊಂಡು ಬರುತ್ತಿದ್ದೀರಿ. ಆಯೋಗದ ಮೇಲೆ ಆಯೋಗ ರಚನೆ ಮಾಡಿದ್ದೀರಿ. ನಿಮ್ಮ ಕಾಂತರಾಜು ವರದಿ ಎಲ್ಲಿ ಹೋಯಿತು? ಜಯಪ್ರಕಾಶ್ ಹೆಗಡೆ ಅವರಿಂದ ಪಡೆದುಕೊಂಡ ವರದಿಯನ್ನು ಎಲ್ಲಿ ಇಡಲಾಗಿದೆ ಎಂದು ರಾಜ್ಯ ಸರಕಾರವನ್ನು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.
ಅಭಿವೃದ್ಧಿ ವಿಷಯದಲ್ಲಿ ಪದೇಪದೇ ಅಡ್ಡಿ ಮಾಡುತ್ತಿದ್ದೀರಿ. ಕುದುರೆಮುಖ ಕಂಪೆನಿಯನ್ನು ಪುನರಾರಂಭ ಮಾಡಲು ಬಿಡುತ್ತಿಲ್ಲ. ಅದಕ್ಕೆ ಸ್ವತಃ ನೀವೇ ಹಂಚಿಕೆ ಮಾಡಿರುವ ಗಣಿಯಿಂದ ಕಬ್ಬಿಣದ ಅದಿರು ತೆಗೆಯಲು ಬಿಡುತ್ತಿಲ್ಲ. ಎಚ್‍ಎಂಟಿ ಕಾರ್ಖಾನೆಗೆ ಮರುಜೀವ ಕೊಡಲು ಪ್ರಯತ್ನ ಮಾಡುತ್ತಿದ್ದೇನೆ. ಅದಕ್ಕೂ ಅಡ್ಡಗಾಲು ಹಾಕುತ್ತಿದ್ದೀರಿ. ನಿಮಗೆ ಏನಾಗಿದೆ? ಯಾಕೆ ಇಷ್ಟೊಂದು ಅಸಹನೆ? ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನಾವು ಬಿಜೆಪಿ ಮೈತ್ರಿಯಲ್ಲಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಸರಕಾರದಲ್ಲಿ ನನಗೆ ಉತ್ತಮ ಅವಕಾಶ ಸಿಕ್ಕಿದೆ. ಮೈತ್ರಿ ಧರ್ಮಕ್ಕೆ ನಾವು ಸದಾ ಬದ್ಧರು. ಅದರ ಬಗ್ಗೆ ಚರ್ಚೆ ಮಾಡಲು ನನಗೆ ಬಿಡಿ. ಹಾದಿಬೀದಿಯಲ್ಲಿ ಯಾರು ಮಾತನಾಡುವುದು ಬೇಡ. ಕಾರ್ಯಕರ್ತರಿಗೆ ರಕ್ಷಣೆ ಕೊಡುವುದು ನನ್ನ ಜವಾಬ್ದಾರಿ, ಪಕ್ಷವನ್ನು ಉಳಿಸಿಕೊಳ್ಳುವುದು ನನ್ನ ಹೊಣೆ ಎಂದು ಕುಮಾರಸ್ವಾಮಿ ಹೇಳಿದರು.
ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಯುವ ಜನತಾದಳ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಸೇರಿದಂತೆ ಜೆಡಿಎಸ್ ಮುಖಂಡರು ಇದ್ದರು.







