ಪ್ರಧಾನಿ ಹೇಳಿಕೆ ಬಗ್ಗೆ ಕಾಂಗ್ರೆಸ್ ಸಣ್ಣತನದಿಂದ ಮಾತನಾಡುವುದು ಸರಿಯಲ್ಲ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಮೇ 12: ರಾಷ್ಟ್ರದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಸಣ್ಣತನದಿಂದ ಮಾತನಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಇತರ ಅನೇಕ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದ ಆರ್ಥಿಕ ಪರಿಸ್ಥಿತಿ ಬಹಳ ಉತ್ತಮವಾಗಿದೆ. ಅಂದಮಾತ್ರಕ್ಕೆ ನಾವು ನಮ್ಮ ಹಣಕಾಸು ವ್ಯವಸ್ಥೆಯನ್ನು ಹಾಳು ಮಾಡಿಕೊಳ್ಳಬಾರದಲ್ಲವೇ? ಎಂದರು.
ರಾಷ್ಟ್ರದ ಜನತೆಯ ಹಿತದೃಷ್ಟಿಯಿಂದ ಪ್ರಧಾನಿ ಕಾಳಜಿ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಹಣಕಾಸು ವ್ಯವಸ್ಥೆಗೆ ಹಿನ್ನಡೆ ಉಂಟಾಗಬಾರದು ಎಂದು ಅವರು ರಾಷ್ಟ್ರದ ಜನತೆಗೆ ಕೆಲವು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಇದರಲ್ಲಿ ತಪ್ಪು ಹುಡುಕುವಂಥದ್ದು ಏನಿದೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಸುಮಾರು ಒಂಭತ್ತು ವಿಷಯಗಳ ಬಗ್ಗೆ ಪ್ರಧಾನಿ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಅನಗತ್ಯವಾಗಿ ಗೊಂದಲ ಉಂಟು ಮಾಡುತ್ತಿದ್ದಾರೆ. ಅವರೇ ಇವತ್ತು ಅಧಿಕಾರದಲ್ಲಿದಿದ್ದರೆ ಏನು ಮಾಡುತ್ತಿದ್ದರು? ಹಿಂದೆ ಅನೇಕ ಬಾರಿ ಅಧಿಕಾರದಲ್ಲಿದ್ದಾಗ ಕೈ ಚೆಲ್ಲಿ ಕೂತಿದ್ದರು ಎಂದು ಅವರು ಟೀಕಿಸಿದರು.
ತೈಲ ಬಿಕ್ಕಟ್ಟು ಎಲ್ಲ ದೇಶಗಳನ್ನು ಬಾಧಿಸುತ್ತಿದೆ. ಭಾರತದಲ್ಲಿ ತೈಲ ಉತ್ಪಾದನೆ ಆಗುತ್ತಿಲ್ಲ, ಬದಲಿಗೆ ಬೇರೆ ದೇಶಗಳಿಂದಲೇ ಆಮದು ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಗೊತ್ತಿಲ್ಲವೆ? ರಾಷ್ಟ್ರವು ಹಿಂದೆ ಇಂತಹ ಸಂಕಷ್ಟ ಸಂದರ್ಭಗಳಿಗೆ ಸಿಕ್ಕಿದಾಗೆಲ್ಲ ಕಾಂಗ್ರೆಸ್ ಪಕ್ಷ ಹೇಗೆಲ್ಲಾ ವರ್ತಸಿದೆ ಎಂಬುದನ್ನು ನೋಡಿದ್ದೇವೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಪದೇ ಪದೇ ರಾಜ್ಯದ ಜಿಡಿಪಿಯನ್ನು ಕೇಂದ್ರದ ಜಿಡಿಪಿಗೆ ಹೋಲಿಕೆ ಮಾಡುವುದನ್ನು ಬಿಟ್ಟು ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲಿ. ತಲಾ ಆದಾಯದಲ್ಲಿ ರಾಜ್ಯವು ಮುಂದೆ ಇದೆ ಎಂದು ಮುಖ್ಯಮಂತ್ರಿ ಹೇಳಿಕೊಳ್ಳುತ್ತಾರೆ. ಆ ಮಾನದಂಡದಲ್ಲಿ ನಾವು ರಾಜ್ಯದ ಅಭಿವೃದ್ಧಿಯನ್ನು ಅಳೆಯಲು ಆಗುವುದಿಲ್ಲ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ನೋಡಿದರೆ ಜನ ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ಅನ್ನೋದು ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ಜಿಬಿಎ ಚುನಾವಣೆ ಮಾಡುವ ಯೋಗ್ಯತೆ ಇಲ್ಲ: ಮುಖ್ಯಮಂತ್ರಿ ಕುರ್ಚಿ ಕಿತ್ತಾಟದಲ್ಲಿ ಮೂರು ವರ್ಷ ಹಾಳು ಮಾಡಿಕೊಂಡಿದ್ದಾರೆ. ಆ ತೆರಿಗೆ ಈ ತೆರಿಗೆ ಅಂತ ಹಾಕಿ ಬೆಂಗಳೂರು ಜನರನ್ನು ಕಿತ್ತು ತಿನ್ನುತ್ತಿದ್ದಾರೆ. ಈಗ ಮತ ಕೇಳಲು ಹೋದರೆ ಬೆಂಗಳೂರು ಜನ ಏನು ಮಾಡುತ್ತಾರೆ ಎನ್ನುವುದು ಇವರಿಗೆ ಚೆನ್ನಾಗಿ ಗೊತ್ತಿದೆ, ಹೀಗಾಗಿ ಇವರು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದ ಚುನಾವಣೆ ನಡೆಸಲು ಹೆದರುತ್ತಿದ್ದಾರೆ ಎಂದು ಅವರು ದೂರಿದರು.
ಜಿಬಿಎ ಚುನಾವಣೆ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನಡುವೆ ಆಂತರಿಕ ಸಂಘರ್ಷ ನಡೆಯುತ್ತಿದೆ. ಜಿಬಿಎ ಚುನಾವಣೆ ನಡೆದರೆ ನನ್ನ ಸ್ಥಾನ ಭದ್ರ ಆಗುತ್ತದೆ ಎಂದು ಸಿದ್ದರಾಮಯ್ಯ, ಚುನಾವಣೆ ನಡೆಯದೆ ಇದ್ದರೆ ಮುಖ್ಯಮಂತ್ರಿ ಆಗಬಹುದು ಎಂದು ಡಿ.ಕೆ.ಶಿವಕುಮಾರ್ ಇದ್ದಾರೆ. ಒಬ್ಬರಿಗೆ ತಮ್ಮ ಸ್ಥಾನ ಉಳಿಯಬೇಕು, ಮತ್ತೊಬ್ಬರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು, ಹಾಗಾಗಿ ಜಿಬಿಎ ವಿಚಾರದಲ್ಲಿ ಹಗ್ಗಜಗ್ಗಾಟ ನಡೆದಿದೆ ಎಂದು ಅವರು ಆರೋಪಿಸಿದರು.
ಮೊದಲು ಕೆಪಿಎಸ್‍ಸಿ ಸರಿಪಡಿಸಿ: ನೀಟ್ ಪರೀಕ್ಷೆ ಬಗ್ಗೆ ಮಾತನಾಡುವ ಯೋಗ್ಯತೆ ರಾಜ್ಯ ಸರಕಾರಕ್ಕಿಲ್ಲ. ರಾಜ್ಯದಲ್ಲಿ ಅನೇಕ ಸಲ ಪ್ರಶ್ನೆಪತ್ರಿಕೆಗಳು ಸೋರಿಕೆ ಆಗಿದ್ದವು. ಎಷ್ಟು ಬಾರಿ ಪರೀಕ್ಷೆ ಮುಂದೆ ಹಾಕಿದ್ದರು? ಕಾಂಗ್ರೆಸ್ ಕಾಲದಲ್ಲಿ ಎಷ್ಟು ಅನಾಹುತ ಆಗಿಲ್ಲ? ಕೆಪಿಎಸ್‍ಸಿ ಸಂಸ್ಥೆಯನ್ನು ಸರಿಪಡಿಸಲು ಆಗಲಿಲ್ಲ. ಕೆಪಿಎಸ್‍ಸಿ ಹಾಳಾಗೋಕೆ ಪ್ರಾರಂಭ ಆಗಿದ್ದು ಕಾಂಗ್ರೆಸ್ ನಿಂದಲೇ ಎಂದು ಕುಮಾರಸ್ವಾಮಿ ಟೀಕಿಸಿದರು.
ಎಲ್ಲೋ ರಾಜಸ್ತಾನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಹೇಳಲಾಗುತ್ತಿದೆ. ಯಾರೋ ಮಾಡಿದ ತಪ್ಪಿಗೆ ಸರಕಾರದ ಮೇಲೆ ತಪ್ಪು ಹೊರೆಸಲು ಆಗೋದಿಲ್ಲ. ಕೇಂದ್ರ ಸರಕಾರ ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ತಪ್ಪಿತಸ್ಥರು ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.






