ಕರ್ನಾಟಕ ಮುಸ್ಲಿಮ್ ಸಮಾವೇಶಕ್ಕೆ ಹೆದರಿ ಹಿಜಾಬ್ ಆದೇಶ ಮಾಡಲಾಗಿದೆ : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಮೇ14 : ಕರ್ನಾಟಕ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ಮುಸ್ಲಿಮ್ ಸಮಾವೇಶಕ್ಕೆ ಹೆದರಿ ರಾಜ್ಯ ಕಾಂಗ್ರೆಸ್ ಸರಕಾರ ಹಿಜಾಬ್ ಕುರಿತ ಆದೇಶ ಮಾಡಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಗುರುವಾರ ನಗರದ ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜಿಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ. ನನ್ನ ಅಭಿಪ್ರಾಯ ಏನು ಎಂಬುದನ್ನು ನೂರಾರು ಬಾರಿ ಅನೇಕ ವೇದಿಕೆಗಳಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ. ಇವರು ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿದೆ. ಆ ಮೂರು ವರ್ಷದಿಂದ ಹಿಜಾಬ್ ವಿಚಾರದಲ್ಲಿ ಏನು ಮಾಡುತ್ತಿದ್ದರು? ಎಂದು ಕೇಳಿದರು.
ಅಲ್ಲದೆ, ಮೇ.16ರಂದು ಬೆಂಗಳೂರಿನ ಪುರಭವನದಲ್ಲಿ ಕರ್ನಾಟಕ ಮುಸ್ಲಿಮ್ ಸಮಾವೇಶ ಇದೆ. ಅದಕ್ಕೆ ಹೆದರಿ ಈ ನಿರ್ಧಾರ ಮಾಡಿದ್ದಾರೆ. ಅಷ್ಟು ಧೈರ್ಯ ಇದ್ದಿದ್ದರೆ ಅಧಿಕಾರಕ್ಕೆ ಬಂದ ಕೂಡಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿತ್ತು. ಮೂರು ವರ್ಷದಿಂದ ಯಾಕೆ ಸುಮ್ಮನೆ ಇದ್ದರು? ಒಂದು ವರ್ಗವನ್ನು ಸಮಾಧಾನ, ಓಲೈಕೆ ಮಾಡುವುದಕ್ಕೆ ಈ ನಿರ್ಧಾರ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಈ ಪ್ರಕರಣ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆಯಲ್ಲಿದೆ. ಹಿಜಾಬ್ ಬಗ್ಗೆ ತಡೆಯಾಜ್ಞೆ ಜಾರಿಯಲ್ಲಿದೆ. ಅದು ತೆರವಾಗದೇ ಇವರು ಈ ರೀತಿಯ ಆದೇಶ ಮಾಡುತ್ತಾರೆ. ನ್ಯಾಯಾಂಗಕ್ಕೂ ಈ ಸರಕಾರ ಅಪಚಾರ ಮಾಡುತ್ತಿದೆ. ಒಟ್ಟಾರೆ, ದಾವಣಗೆರೆ ಉಪ ಚುನಾವಣೆಯ ಫಲಿತಾಂಶ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ದಿಢೀರ್ ಜ್ಞಾನೋದಯವಾಗಿ ಹಿಜಾಬ್ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದಿದೆ ಎಂದು ಅವರು ಟೀಕಿಸಿದರು.






