ʼರಾಜ್ಯ ರಾಜಕಾರಣಕ್ಕೆ ಬರುವ ವಿಚಾರʼ : ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?

ಬೆಂಗಳೂರು: ನಮ್ಮನ್ನು ನಾಯಕರನ್ನಾಗಿ ಬೆಳೆಸಿ-ಉಳಿಸಿದ ರಾಮನಗರವನ್ನು ಬಿಡುವ ಪ್ರಶ್ನೆಯೇ ಇಲ್ಲ. ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣಕ್ಕೆ ವಾಪಸ್ ಬರುವ ಬಗ್ಗೆ ಸೂಕ್ತ ಸಮಯದಲ್ಲಿ ತೀರ್ಮಾನ ಮಾಡುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ರವಿವಾರ ಇಲ್ಲಿನ ಬೆಂಗಳೂರುದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಶ್ರೀ ನಾಗಮಲೆ ಮಹದೇಶ್ವರಸ್ವಾಮಿ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ರಾಮನಗರವನ್ನು ನಿರ್ಲಕ್ಷಿಸುವ ಪ್ರಶ್ನೆಗೆ ಬರುವುದಿಲ್ಲ. ಪಕ್ಷವನ್ನು ಬಲಪಡಿಸುವುದು ಹಾಗೂ ಸಂಘಟನೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸಮಯವನ್ನು ಜಿಲ್ಲೆಗೆ ಮೀಸಲಿಡಲಾಗುವುದು ಎಂದರು.
ಕಾರ್ಯಕರ್ತರಿಗೆ ಹಾಗೂ ಅವರ ಭಾವನೆಗಳಿಗೆ ನಾನು ನಿರಾಶೆ ಉಂಟು ಮಾಡುವುದಿಲ್ಲ. ಪಕ್ಷದ ಹಿತಕ್ಕಾಗಿ, ಕಾರ್ಯಕರ್ತರ ಸಲುವಾಗಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಎಂದ ಅವರು, ನಾನು ರಾಷ್ಟ್ರ ರಾಜಕಾರಣದಲ್ಲಿ ಎಷ್ಟೇ ಬ್ಯುಸಿ ಇದ್ದರೂ ರಾಮನಗರದ ನಾಲ್ಕು ಕ್ಷೇತ್ರಗಳಿಗೆ ಸಮಯ ಕೊಡಲು ನಿರ್ಧಸಿದ್ದೇನೆ ಎಂದರು.
ಈ ಜಿಲ್ಲೆಯ ಜನತೆಯಿಂದ ನಾವು ನಾಯಕರಾಗಿದ್ದೇವೆ. ನಮ್ಮನ್ನು ಸೃಷ್ಟಿ ಮಾಡಿರುವ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ನನಗೆ ನನ್ನ ಕಾರ್ಯಕರ್ತರು ಮುಖ್ಯ. ನನ್ನನ್ನು ನಾಯಕನನ್ನಾಗಿ ಸೃಷ್ಟಿಸಿದವರು ಈ ಜಿಲ್ಲೆಯ ಕಾರ್ಯಕರ್ತರು. ಅವರ ಭಾವನೆಗಳೇ ನನ್ನ ಭಾವನೆಗಳು. ಹೀಗಾಗಿ ಅವರಿಗೆ ನಿರಾಶೆ ಉಂಟು ಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಪಕ್ಷದ ಸಂಘಟನೆಯಲ್ಲಿ ನಾವೆಂದು ಹಿಂದೆ ಬಿದ್ದಿಲ್ಲ. ನನಗೆ ಆರೋಗ್ಯ ಸಮಸ್ಯೆ ಇದ್ದರೂ ನಿಖಿಲ್ ಸುಮಾರು 60 ರಿಂದ 70ಕ್ಷೇತ್ರಗಳನ್ನು ಪ್ರವಾಸ ಮಾಡಿ ಸಂಘಟನೆ ಕೆಲಸ ಮಾಡಿದ್ದಾರೆ. ಮೂರು ಬಾರಿ ಸೋತಿದ್ದರು ಎದೆಗುಂದದೆ ನಿರಂತರವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದು, ಸಂಘಟನೆಗೆ ಶಕ್ತಿ ತುಂಬುತ್ತಿದ್ದಾರೆ. ಇನ್ನೊಂದೆಡೆ ನಾನು ತಿಂಗಳಿಗೆ ಎರಡು-ಮೂರು ದಿನ ಜಿಲ್ಲೆಗೆ ಮೀಸಲು ಇಡುತ್ತೇನೆ ಎಂದು ಅವರು ಹೇಳಿದರು.
ರಾಮನಗರ ಜಿಲ್ಲೆಯಿಂದ ನಮ್ಮನ್ನು ಖಾಲಿ ಮಾಡಿಸುತ್ತೇವೆಂದು ಕೆಲವರು ಭ್ರಮೆಯಲ್ಲಿದ್ದಾರೆ. ಅವರಿಗೆ ಭ್ರಮೆಯಲ್ಲೇ ಇರುವುದು ಬಿಟ್ಟರೆ ಬೇರೆ ದಾರಿ ಇಲ್ಲ. ಜಿಲ್ಲೆಯ ಜನರು ಹಾಗೂ ಕಾರ್ಯಕರ್ತರು ನಮ್ಮ ಜೊತೆ ಗಟ್ಟಿಯಾಗಿ ನಿಂತಿದ್ದಾರೆ. ದೇವೇಗೌಡರಿಂದ ಇದುವರೆಗೆ ಪಕ್ಷವನ್ನು ಪ್ರಬಲವಾಗಿ ಬೆಳೆಸಿ ಉಳಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.






