2028ರಲ್ಲಿ NDA ಅಧಿಕಾರಕ್ಕೆ ಬಂದರೆ ಪ್ರತಿ ಹೆಣ್ಣುಮಕ್ಕಳಿಗೆ 2 ಹಸು ಉಚಿತ : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಮೈತ್ರಿಕೂಟವಾದ ಎನ್ ಡಿಎ 2028ರಲ್ಲಿ ಅಧಿಕಾರಕ್ಕೆ ಬಂದರೆ ಹಳ್ಳಿಯಲ್ಲಿನ ಪ್ರತಿ ಹೆಣ್ಣುಮಕ್ಕಳಿಗೆ 2 ಹಸು ಉಚಿತವಾಗಿ ನೀಡುವುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಗುರುವಾರ ನಗರದ ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, 2028ಕ್ಕೆ ರಾಜ್ಯದಲ್ಲಿ ಎನ್ ಡಿ ಎ ಸರಕಾರ ಅಧಿಕಾರಕ್ಕೆ ಬಂದರೆ ಹಳ್ಳಿಯಲ್ಲಿನ ಪ್ರತಿ ಹೆಣ್ಣುಮಕ್ಕಳಿಗೆ 2 ಹಸು ಉಚಿತವಾಗಿ ನೀಡುವುದಾಗಿ ಹೇಳಿದರು.
ಆಶಾ ಕಾರ್ಯಕರ್ತೆಯರು ಚಿಕ್ಕಚಿಕ್ಕ ಮಕ್ಕಳೊಂದಿಗೆ ಪ್ರತಿಭಟನೆ ಕೂತಿದ್ದಾರೆ. ಮುಖ್ಯಮಂತ್ರಿಗಳು ಫೋನ್ ಮಾಡಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಬೇಡಿಕೆ ಈಡೇರಿಸುತ್ತೇನೆ ಎನ್ನುತ್ತಾರೆ. ಆದರೆ, ಭಾರತ್ ಜೋಡೋ ಸಂಘಗಳ ಹೆಸರಿನಲ್ಲಿ ಕಾಂಗ್ರೆಸ್ ಪುಢಾರಿಗಳಿಗೆ ಪ್ರತಿ ಪಂಚಾಯತ್‌ಗೆ 10 ಲಕ್ಷದಂತೆ 1000 ಕೋಟಿ ಕೊಡುವುದಕ್ಕೆ ಯಾವ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು.
ಅಷ್ಟು ಹಣ ಕೊಡಿ ಎಂದು ಯಾವ ಅಧಿಕಾರಿ ಸಲಹೆ ಕೊಟ್ಟರು? ಅಲ್ಲಿ 1000 ಕೋಟಿ ಕೊಡಲು ಶಕ್ತಿ ಇರುವವರು ಆಶಾ ಕಾರ್ಯಕರ್ತೆಯರಿಗೆ ನಿಮ್ಮ ಯೋಗ್ಯತೆಗೆ 350 ಕೋಟಿ ಕೊಡಲು ಸಾಧ್ಯ ಇಲ್ಲವೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
2018ರಲ್ಲಿ ರೈತರ ಸಾಲದ ಮನ್ನಾ ನಡುವೆಯೂ ಆಶಾ ಕಾರ್ಯಕರ್ತೆಯರ ಗೌರವಧನವನ್ನು 1,000 ಹೆಚ್ಚಳ ಮಾಡಿದ್ದೆ. ಸಾಕ್ಷಿಗುಡ್ಡೆ ಬಿಟ್ಟು ಹೋಗಬೇಕು ಎಂದು ಮುಖ್ಯಮಂತ್ರಿಗಳು ಕೇಳುತ್ತಾರೆ. ನನ್ನ ಸಾಕ್ಷಿಗುಡ್ಡೆ ಇರಲಿ, ನಿಮ್ಮ ಸಾಕ್ಷಿಗುಡ್ಡೆ ಎಲ್ಲಿ? ಎಂದು ಸಚಿವರು ಪ್ರಶ್ನಿಸಿದರು.






