‘ಅಡ್ಡ ಮತದಾನ’ | ಆಣೆ-ಪ್ರಮಾಣದ ಸಮಸ್ಯೆ ನಮ್ಮಲ್ಲಿ ಇಲ್ಲ: ಎಚ್.ಡಿ. ಕುಮಾರಸ್ವಾಮಿ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (File Photo)
ಬೆಂಗಳೂರು: ‘ಜೆಡಿಎಸ್ ಸಭೆಯಲ್ಲಿ ಪಕ್ಷದ 17 ಮಂದಿ ಶಾಸಕರು ಹಾಜರಿದ್ದರು. ನಾವೆಲ್ಲರೂ ನಮ್ಮ ಅಭಿವೃದ್ಧಿಗೆ ಮತ ಹಾಕಿದ್ದೇವೆಂದು ಹೇಳಿದ್ದಾರೆ. ಹೀಗಾಗಿ ನಮ್ಮ ಪಕ್ಷದಲ್ಲಿ ಆಣೆ-ಪ್ರಮಾಣದ ಸಮಸ್ಯೆಯಿಲ್ಲ ಎಂಬುದು ನನ್ನ ನಂಬಿಕೆಯಾಗಿದೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ರವಿವಾರ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನದ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಅಡ್ಡ ಮತದಾನ ಎಂಬುದು ಬೇಸರದ ವಿಷಯ. ಯಾರು ಈ ರೀತಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬುದು ಧರ್ಮಸ್ಥಳದಲ್ಲಿ ಬಯಲಿಗೆ ಬರಬಹುದು ಎಂಬುದು ಬಿಜೆಪಿಯವರ ನಂಬಿಕೆ. ಹೀಗಾಗಿ ಆ ಪಕ್ಷದ ನಾಯಕರು, ಅಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿರಬಹುದು’ ಎಂದರು.
"ನಾನು ಶಾಸಕರಿಂದ ಆಣೆ-ಪ್ರಮಾಣ ಮಾಡಿಸುವುದಿಲ್ಲ. ಎಲ್ಲವನ್ನು ಕಾಲವೇ ನಿರ್ಣಯಿಸುತ್ತದೆ ಎಂದು ನಂಬಿದ್ದೇನೆ. ಮುಂಬರುವ ಕಾಲಕ್ಕೆ ಇದೆಲ್ಲವನ್ನು ಬಿಡುವುದು ಒಳಿತು ಎಂಬುದಾಗಿ ಪಕ್ಷದಲ್ಲಿ ತೀರ್ಮಾನವಾಗಿದೆ’ ಎಂದ ಅವರು, ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಪ್ರೀತಿ-ವಿಶ್ವಾಸದಿಂದ ನಾನು ಸಿಎಂ ಆಗಲಿದ್ದೇನೆಂಬ ಮಾತುಗಳನ್ನಾಡಿದ್ದಾರೆ. ಆದರೆ ‘ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸುವುದು ಬೇಡ’ ಎಂಬುದು ನನ್ನ ಅಭಿಪ್ರಾಯ" ಎಂದರು.
ಈಗಾಗಲೇ ಹಲವಾರು ಬಾರಿ ಹೇಳಿದ್ದೇನೆ. ನನಗೆ ಬೇಕಿರುವುದು ಕರ್ನಾಟಕದಲ್ಲಿ ಅತ್ಯುತ್ತಮ ಆಡಳಿತ ನೀಡುವ ಸರಕಾರ ಬರುವಂತೆ ಮಾಡುವುದು. ಅದಕ್ಕಾಗಿ ನಾನು ಶ್ರಮಿಸುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ತನ್ನ ಕೆಟ್ಟ ಆಡಳಿತದಿಂದ ರಾಜ್ಯದ ಮೇಲಿನ ಒಳ್ಳೆಯ ಅಭಿಪ್ರಾಯವನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ಅದನ್ನು ಸರಿಪಡಿಸುವ ಕೆಲಸ ಆಗಬೇಕಿದೆ. ರಾಜ್ಯದ ಗೌರವ ಪ್ರತಿಷ್ಠೆಗಳನ್ನು ಮರಳಿ ತರಬೇಕಿದೆ. ಇದು ನನ್ನ ಆದ್ಯತೆ ಎಂದು ಅವರು ನುಡಿದರು.
ಅನ್ಯ ಪಕ್ಷಗಳ ಮುಖಂಡರ ಜೆಡಿಎಸ್ ಸೇರ್ಪಡೆ ಬಗ್ಗೆ ನಾನು ಏನು ಹೇಳಲಾರೆ. ಮುಂದೆ ಯಾರು ಸಿಎಂ ಆಗಬೇಕು, ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದನ್ನು ಜನತೆ ತೀರ್ಮಾನಿಸುತ್ತಾರೆ. ತಮಿಳುನಾಡಿನಲ್ಲಿ ಚಿತ್ರನಟ ವಿಜಯ್ ಅಧಿಕಾರಕ್ಕೆ ಬಂದು ಸಿಎಂ ಆಗುತ್ತಾರೆಂದು ಯಾರಾದರೂ ಪೂಜೆ ಮಾಡಿದ್ದರೆ?. ಈ ಕೆಟ್ಟ ಸರಕಾರದಿಂದ ರೋಸಿ ಹೋಗಿರುವ ರಾಜ್ಯದ ಜನರು ಬದಲಾವಣೆ ಬಯಸುತ್ತಾರೆ ಎಂದು ನಂಬಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.






