‘ನೈಸ್ ವಿಚಾರ’ | ಕುಮಾರಸ್ವಾಮಿ ಆರೋಪಗಳೆಲ್ಲ ಸುಳ್ಳಿನ ಕಂತೆ: ಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು: ನೈಸ್ ಯೋಜನೆ ವಿಚಾರದಲ್ಲಿ ತಮ್ಮ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಗಳೆಲ್ಲ ಸುಳ್ಳಿನ ಕಂತೆ. ನಮ್ಮ ಸರಕಾರದ ಜನಪ್ರಿಯತೆ ಸಹಿಸಲು ಆಗದೆ, ಅಸೂಯೆ, ಹತಾಶೆಯಿಂದ ಈ ರೀತಿ ವರ್ತಿಸುತ್ತಿದ್ದಾರೆ. ಇದಕ್ಕೆಲ್ಲ ಹೆದರುವ ಜಾಯಮಾನ ನನ್ನದಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
ಮಂಗಳವಾರ ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಸ್ ಯೋಜನೆಗೆ ಅವರ ತಂದೆಯೆ ಸಹಿ ಹಾಕಿದ್ದಾರೆ. ಇವರು ಮುಖ್ಯಮಂತ್ರಿ ಆಗಿದ್ದರು. ಟೆಂಡರ್ ಮಾಡಿಸಿದರು. ಬೇನಾಮಿ ಹೆಸರಿನಲ್ಲಿ ವ್ಯವಹಾರಗಳನ್ನು ನಡೆಸಿದ್ದಾರೆ. ಅದನ್ನೆಲ್ಲ ಈಗ ಹೇಳುವುದಿಲ್ಲ ಎಂದರು.
ನನ್ನ ಆಸ್ತಿ 1400 ಕೋಟಿ ರೂ. ಇದೆ. ನಾನೊಬ್ಬ ರೈತನ ಮಗ, ವ್ಯವಹಾರಸ್ಥ, ನನ್ನ ಮಕ್ಕಳು ಆಸ್ತಿ ಖರೀದಿ ಮಾಡಬಾರದೆ?, ಕಾನೂನು ಪ್ರಕಾರ ನಮಗೆ ಅವಕಾಶ ಇರುವಾಗ ನಾವು ಖರೀದಿ ಮಾಡುತ್ತೇವೆ, ಇನ್ನೂ ಖರೀದಿ ಮಾಡುತ್ತೇವೆ. ಇವರೇನು ಆದಾಯ ತೆರಿಗೆ ಅಧಿಕಾರಿಯೆ? ಎಂದು ಶಿವಕುಮಾರ್ ಪ್ರಶ್ನಿಸಿದರು.
ಬೇರೆ ಯಾವುದೋ ಊರಿನಿಂದ ಬಂದು ಇವರು ನಮ್ಮ ಭಾಗದಲ್ಲಿ ಆಸ್ತಿ ಖರೀದಿಸಬಹುದು. ನೈಸ್ ಯೋಜನೆ ಹಾಗೂ ಬಿಡದಿ ಟೌನ್ಶಿಪ್ ಯೋಜನೆ ವ್ಯಾಪ್ತಿಯಲ್ಲಿ ಇವರ ಆಸ್ತಿಗಳು ಹೇಗೆ ಬಂತು? ಇವರ ಅಣ್ಣ ತಮ್ಮಂದಿರ ಆಸ್ತಿಗಳು ಹೇಗೆ ಬಂದವು? ಎಂಬುದನ್ನು ಬಹಿರಂಗಪಡಿಸಲಿ ಎಂದು ಮುಖ್ಯಮಂತ್ರಿ ಆಗ್ರಹಿಸಿದರು.
ಬಂಗಾರಪ್ಪ ನನಗೆ 99 ಸಾವಿರ ರೂ.ಗಳಿಗೆ ನಿವೇಶನ ನೀಡಿದ್ದರು. ಇವತ್ತು ಅದರ ಮೌಲ್ಯ 20 ಕೋಟಿ ರೂ.ಆಗಿದೆ. ನಾನು ಯಾವುದಾದರೂ ಲಂಚದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದೇನೆಯೇ? ಕದ್ದು ಮುಚ್ಚಿ ವ್ಯವಹಾರ ಮಾಡುವ ಅಗತ್ಯ ನನಗಿಲ್ಲ. ನಾನು, ನನ್ನ ಮಕ್ಕಳು ಖರೀದಿ ಮಾಡಿರುವ ಆಸ್ತಿಯನ್ನು ಕಾನೂನು ಪ್ರಕಾರ ಘೋಷಣೆ ಮಾಡಿಕೊಂಡಿದ್ದೇವೆ ಎಂದು ಶಿವಕುಮಾರ್ ಹೇಳಿದರು.
ಚುನಾವಣಾ ಆಯೋಗಕ್ಕೆ ಸಲ್ಲಿಸುವ ನಾಮಪತ್ರದಲ್ಲಿ ನನ್ನ ಆಸ್ತಿಯ ವಿವರಗಳು ಇವೆ. ಅದನ್ನು ಚುನಾವಣಾ ಆಯೋಗ, ಐಟಿ, ಈ.ಡಿ ಎಲ್ಲರೂ ಪರಿಶೀಲಿಸಿದ್ದಾರೆ. ಅದಕ್ಕಿಂತ ದೊಡ್ಡ ಸಂಸ್ಥೆಯಿದ್ದರೆ ಅವರಿಂದಲೂ ಪರಿಶೀಲಿಸಿಕೊಳ್ಳಲಿ ಎಂದ ಅವರು, ಸುಳ್ಳೆ ಕುಮಾರಸ್ವಾಮಿಯ ಮನೆ ದೇವರು. ಸಿನಿಮಾ ನಿರ್ಮಾಪಕ, ನಿರ್ದೇಶಕ, ನಟ, ಹಂಚಿಕೆದಾರರು ಎಲ್ಲರೂ ಅವರಲ್ಲಿ ಇದ್ದಾರೆ. ಎಷ್ಟು ಸಂಚಿಕೆಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತಾರೋ ಮಾಡಲಿ ಎಂದು ತಿಳಿಸಿದರು.
ನೈಸ್ ವಿಚಾರದಲ್ಲಿ ವಿಧಾನಸೌಧದ ಮೆಟ್ಟಿಲು ಮೇಲೆ ಯಾಕೆ ಚರ್ಚೆ ಮಾಡುತ್ತಾರೆ, ಅವರ ಪಕ್ಷದಿಂದ ಯಾರಿಂದಾದರೂ ರಾಜೀನಾಮೆ ಕೊಡಿಸಿ, ವಿಧಾನಸಭೆಯ ಒಳಗೆ ಬಂದು ಚರ್ಚೆ ಮಾಡಲಿ. ಹೊರಗೆ ಚರ್ಚೆ ಮಾಡಲು ಫ್ರೀಡಂ ಪಾರ್ಕ್ ಇದೆ ಎಂದು ಅವರು ಹೇಳಿದರು.
2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇದ್ದರಲ್ಲ, ಆಗ ಯಾಕೆ ನೈಸ್ ವಿಚಾರದಲ್ಲಿ ಧ್ವನಿ ಎತ್ತಿಲ್ಲ. ಈಗಲೂ ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ. ನೈಸ್ ರಸ್ತೆಯ ಟೋಲ್ ಅಷ್ಟೇ ಯಾಕೆ, ಇಡೀ ಬೆಂಗಳೂರು, ದೇಶದಲ್ಲಿರುವ ಟೋಲ್ಗಳಲ್ಲಿ ಶುಲ್ಕ ಸಂಗ್ರಹ ನಿಲ್ಲಿಸಲಿ ಯಾರು ಅವರನ್ನು ತಡೆದವರು. ಈ ಗೊಡ್ಡು ಬೆದರಿಕೆಗಳಿಗೆ ಶಿವಕುಮಾರ್ ಹೆದರುವುದಿಲ್ಲ. ಇವರ ಡ್ರಾಮ, ನಾಟಕ, ಬ್ಲಾಕ್ಮೇಲ್ ಎಲ್ಲ ನೋಡಿದ್ದೇನೆ. ನಾನು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ವೀಡಿಯೊ, ಆಡಿಯೋ, ಎಐ ಎಲ್ಲವನ್ನೂ ಬಳಸಲಿ, ಬಾಲಗಂಗಾಧರನಾಥ ಸ್ವಾಮಿ ಮೇಲೆ ಪ್ರಕರಣ ದಾಖಲು ಮಾಡಿದರು, ನಿರ್ಮಲಾನಂದನಾಥ ಸ್ವಾಮಿ ಫೋನ್ ಕದ್ದಾಲಿಕೆ ಮಾಡಿಸಿದರು, ಅಷ್ಟೇ ಯಾಕೆ ಅವರ ಅಪ್ಪ, ಅಣ್ಣ, ತಮ್ಮಂದಿರನ್ನೆ ಸಹಿಸದವರು ನನ್ನನ್ನು ಬಿಡುತ್ತಾರೆಯೇ? ಸಂಸ್ಕಾರ, ಸಂಸ್ಕೃತಿ ಇಲ್ಲದವರು. ಇವರು ಮುಖ್ಯಮಂತ್ರಿಯಾಗಿದ್ದಾಗಲೆ ನಾನು ಹೆದರಲಿಲ್ಲ. ಇನ್ನೂ ಈಗ ಅವರಿಗೆ ಸೊಪ್ಪು ಹಾಕುತ್ತೇನೆಯೆ ಎಂದು ಶಿವಕುಮಾರ್ ತಿಳಿಸಿದರು.
ರಾಜ್ಯ ಗುತ್ತಿಗೆದಾರರ ಸಂಘದವರು ಬರೆದಿರುವ ಪತ್ರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಏನು ಮಾಡೋದು? ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅನುದಾನ ಇಲ್ಲದಿದ್ದರೂ ಹೆಚ್ಚು ಕೆಲಸಗಳನ್ನು ಕೊಟ್ಟು ಹೋದರು. ನಮ್ಮ ವಿರುದ್ಧ ಪತ್ರಿಕಾಗೋಷ್ಠಿ ಮಾಡುವವರು ಇದಕ್ಕೆ ಪರಿಹಾರವನ್ನು ಸೂಚಿಸಲಿ ನೋಡೋಣ ಎಂದು ಹೇಳಿದರು.






