ಆರೋಗ್ಯ ಇಲಾಖೆ | 400 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ, 400 ಫಾರ್ಮಸಿ ಅಧಿಕಾರಿಗಳ ನೇಮಕಾತಿಗೆ ಆದೇಶ

ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮಂಜೂರಾಗಿ ಖಾಲಿ ಇರುವ ಹುದ್ದೆಗಳಲ್ಲಿ 400 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಹಾಗೂ 400 ಫಾರ್ಮಸಿ ಅಧಿಕಾರಿಗಳ ಸೇರಿ ಒಟ್ಟು 800 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುವಂತೆ ರಾಜ್ಯ ಸರಕಾರವು ಆದೇಶ ಹೊರಡಿಸಿದೆ.
ಯಾವುದೇ ಅರ್ಜಿ ಶುಲ್ಕವಿಲ್ಲದೆ, ಆಯಾ ಜಿಲ್ಲಾ ಮಟ್ಟದಲ್ಲಿ ನೇರ ಸಂದರ್ಶನದ ಮೂಲಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಆಯಾ ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ಹಾಗೂ ರಾಜ್ಯ ಮಟ್ಟದ ದಿನಪತ್ರಿಕೆಗಳಲ್ಲಿ ನೇರ ಸಂದರ್ಶನದ ಪ್ರಕಟಣೆ ನೀಡಿ ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 3 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ, 5 ಫಾರ್ಮಸಿ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 22 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ, 11 ಫಾರ್ಮಸಿ ಅಧಿಕಾರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ 27 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ, 23 ಫಾರ್ಮಸಿ ಅಧಿಕಾರಿ, ಉಡುಪಿಯಲ್ಲಿ 5 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ, 13 ಫಾರ್ಮಸಿ ಅಧಿಕಾರಿಗಳು ಸೇರಿ ಒಟ್ಟು 800 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ತಿಳಿಸಿದೆ.
ಇಲಾಖೆಯಲ್ಲಿ ನೇರ ನೇಮಕಾತಿ ಮುಖಾಂತರ ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಹಾಗೂ ಫಾರ್ಮಸಿ ಅಧಿಕಾರಿಗಳ ಹುದ್ದೆಗಳು ಭರ್ತಿಯಾದ ನಂತರ 400 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಹಾಗೂ 400 ಫಾರ್ಮಸಿ ಅಧಿಕಾರಿಗಳ ಹುದ್ದೆಗಳ ಗುತ್ತಿಗೆ ಸೇವೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.






