ಭ್ರೂಣ ಹತ್ಯೆ ವಿರುದ್ಧ ಹೊರ ರಾಜ್ಯಗಳಲ್ಲೂ ಆರೋಗ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆ: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಹೆಣ್ಣು ಭ್ರೂಣವನ್ನು ಕೊಲ್ಲುವ ಕಟುಕರ ವಿರುದ್ಧ ಸತತ ಕಾರ್ಯಾಚರಣೆ ನಡೆಸುತ್ತಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, ಹೊರರಾಜ್ಯಕ್ಕೆ ತೆರಳಿ ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ತಾಯಂದಿರು ಆಂಧ್ರದಲ್ಲಿ ಭ್ರೂಣ ಹತ್ಯೆ ಮಾಡಿಸಿಕೊಳ್ಳುವ ಘೋರ ಕಾರ್ಯ ಬೆಳಕಿಗೆ ಬಂದಿದ್ದು, ಕಟುಕರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಭ್ರೂಣ ಹತ್ಯೆ ಎಲ್ಲೇ ಮಾಡಿಸಿಕೊಂಡರೂ, ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಸಮಾಜ ಜಾಗೃತರಾಗಬೇಕು ಎಂದರು.
ರಾಜ್ಯದಲ್ಲಿರುವ ಮಳವಳ್ಳಿಯ 30 ವರ್ಷದ ಮಹಿಳೆಗೆ 3 ಜನ ಹೆಣ್ಣುಮಕ್ಕಳಿದ್ದ ಹಿನ್ನೆಲೆಯಲ್ಲಿ ಅಕ್ರಮವಾಗಿ ಏಜೆಂಟ್ ಮೂಲಕ ಲಿಂಗ ಪತ್ತೆ ಮಾಡಿಸಿದ್ದಾರೆ. ಮಗು ಹೆಣ್ಣು ಎಂದು ಗೊತ್ತಾದಾಗ, ಭ್ರೂಣ ಹತ್ಯೆಗೆ ಮುಂದಾಗಿದ್ದಾರೆ. ಇದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎಂದು ವಿವರಿಸಿದರು.
ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಇಲಾಖೆಯಿಂದ ಏನೆಲ್ಲ ಪ್ರಯತ್ನಗಳನ್ನು ಮಾಡಲು ಸಾಧ್ಯವೋ, ಅದನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆ ಒಂದು ಸಾಮಾಜಿಕ ಪಿಡುಗು. ನಮ್ಮ ಸಮಾಜ ಈ ಬಗ್ಗೆ ಜಾಗ್ರತರಾಗುವುದು ಮುಖ್ಯ. ಸಂಪೂರ್ಣವಾಗಿ ಹೆಣ್ಣು ಭ್ರೂಣ ಹತ್ಯೆ ತೊಡೆದುಹಾಕಲು ಸಾಮಾಜಿಕ ಬದಲಾವಣೆ ಆಗುವುದು ಮುಖ್ಯ ಎಂದು ಅವರು ಹೇಳಿದರು.
ಸೆ.21ರಂದು ಕರ್ನಾಟಕ ರಾಜ್ಯದ ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ರಾಜ್ಯ ನೋಡಲ್ ಅಧಿಕಾರಿ ಡಾ. ವಿವೇಕ್ ದೊರೈ ಹಾಗೂ ತಂಡವು ಮತ್ತು ಆಂಧ್ರಪ್ರದೇಶ ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ರಾಜ್ಯ ನೋಡಲ್ ಅಧಿಕಾರಿ ಡಾ. ಅನಿಲ್ ಕುಮಾರ್ ಹಾಗೂ ಅವರ ತಂಡದ ಸಹಯೋಗದಲ್ಲಿ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕೊಡಮುರು ತಾಲೂಕಿನಲ್ಲಿ ಗುಪ್ತಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಭ್ರೂಣ ಹತ್ಯೆಯನ್ನು ತಡೆದಿದ್ದಾರೆ.







