ಸಿನಿಮಾಗಳಲ್ಲಿ ನಟರು ಸಿಗರೇಟ್ ಸೇದುವುದನ್ನು ನೋಡಿ ಯುವಜನತೆ ದಾರಿ ತಪ್ಪಬಾರದು: ಆರೋಗ್ಯ ಸಚಿವ ಯು.ಟಿ.ಖಾದರ್ ಕಿವಿಮಾತು
ರಾಜ್ಯಾದ್ಯಂತ ತಂಬಾಕು ಮುಕ್ತ ಯುವ ಅಭಿಯಾನಕ್ಕೆ ಚಾಲನೆ

ಬೆಂಗಳೂರು : ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟರು, ಕಲಾವಿದರು ಸಿಗರೇಟ್ ಹಿಡಿದು ಪೋಸ್ ಕೊಡುವುದನ್ನು ನೋಡಿ ಯುವಜನತೆ ಪ್ರೇರಣೆಗೊಂಡು ದಾರಿ ತಪ್ಪಬಾರದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಕಿವಿಮಾತು ಹೇಳಿದ್ದಾರೆ.
ಮಂಗಳವಾರ ನಗರದ ಆರೋಗ್ಯ ಸೌಧದಲ್ಲಿ ಆಯೋಜಿಸಲಾಗಿದ್ದ ‘ತಂಬಾಕು ಮುಕ್ತ ಯುವ ಅಭಿಯಾನ 4.0’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಿತ್ರನಟರು ಸಿನಿಮಾಗಳಲ್ಲಿ ಸಿಗರೇಟ್ ಹಿಡಿದುಕೊಂಡು ಪೋಸ್ ಕೊಡುವುದು ಹಾಗೂ ಸೇದುವುದನ್ನು ನೋಡಿ ಅಭಿಮಾನಿಗಳು, ಯುವಜನತೆ ಸಿಗರೇಟ್ ಸೇದಲು ಶುರು ಮಾಡಿದರೆ, ಮುಂದೆ ನೀವು ಆಸ್ಪತ್ರೆಯ ಐಸಿಯು ಸೇರಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಆರೋಗ್ಯ ಇಲಾಖೆಯಿಂದ ರಾಜ್ಯಾದ್ಯಂತ ತಂಬಾಕು ಮುಕ್ತ ಯುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಮಕ್ಕಳು ಮತ್ತು ಯುವಜನರನ್ನು ತಂಬಾಕು ಸೇವನೆಯ ದುಷ್ಪರಿಣಾಮಗಳಿಂದ ರಕ್ಷಿಸುವುದು ಹಾಗೂ ಯುವಜನರಲ್ಲಿ ತಂಬಾಕು ಸೇವನೆಯ ಪ್ರಾರಂಭವನ್ನು ತಡೆಗಟ್ಟುವುದು ಈ ಮಹತ್ವದ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಖಾದರ್ ಹೇಳಿದರು.
ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು. ತಂಬಾಕು ನಿಯಂತ್ರಣ ಕ್ರಮಗಳನ್ನು ಬಲಪಡಿಸುವುದು ಹಾಗೂ ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಗಳು ಮತ್ತು ಸಮುದಾಯಗಳನ್ನು ನಿರ್ಮಿಸುವುದು ಈ ಅಭಿಯಾನದ ಪ್ರಮುಖ ಧ್ಯೇಯವಾಗಿದೆ. ಈ ಅಭಿಯಾನವನ್ನು ರಾಜ್ಯಾದ್ಯಂತ ವಿವಿಧ ಸರಕಾರಿ ಇಲಾಖೆಗಳು, ಶಿಕ್ಷಣಸಂಸ್ಥೆಗಳು, ಜಿಲ್ಲಾ ಆಡಳಿತಗಳು, ಸ್ಥಳೀಯಸಂಸ್ಥೆಗಳು ಹಾಗೂ ಇತರ ಸಂಬಂಧಪಟ್ಟ ಪಾಲುದಾರ ಇಲಾಖೆಗಳ ಸಹಯೋಗದೊಂದಿಗೆ ಅನುಷ್ಠಾ ನಗೊಳಿಸಲಾಗುವುದು ಎಂದು ಖಾದರ್ ವಿವರಿಸಿದರು.
ಈ ಅಭಿಯಾನದಲ್ಲಿ ಆರೋಗ್ಯ ಇಲಾಖೆಯ ಆಯುಕ್ತರು, ಹಿರಿಯ ಅಧಿಕಾರಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಿಂದಿ, ಇಂಗ್ಲಿಷ್ ಸಿನಿಮಾಗಳಲ್ಲಿ ತಂಬಾಕು ಬಳಕೆ ಹೆಚ್ಚು: ನಾನು ಯಾವುದೇ ನಿರ್ದಿಷ್ಟ ಸಿನಿಮಾ ನಟರ ಬಗ್ಗೆ ಮಾತನಾಡಿಲ್ಲ. ಇಲ್ಲಿನ ಕನ್ನಡದ ಯಾವ ನಟರೂ ಆ ರೀತಿ ಮಾಡುತ್ತಿಲ್ಲ, ಕಾಣಿಸುತ್ತಲೂ ಇಲ್ಲ. ಆದರೆ, ಹಿಂದಿ ಅಥವಾ ಇಂಗ್ಲಿಷ್ ಸಿನಿಮಾಗಳು, ನಾಟಕ ಹಾಗೂ ಇತರ ಮಾಧ್ಯಮಗಳಲ್ಲಿ ಕೆಲವೊಮ್ಮೆ ಸೆಲೆಬ್ರಿಟಿಗಳು ತಂಬಾಕು ಬಳಸುವ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಯುವಜನತೆ ಅದನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು, ಅದು ಅಭ್ಯಾಸವಾಗಿ ಆಸ್ಪತ್ರೆ ಸೇರಿದರೆ ಅವರ ಕುಟುಂಬಕ್ಕೆ ಯಾರು ದಿಕ್ಕಾಗುತ್ತಾರೆ? ಸೆಲೆಬ್ರಿಟಿಗಳ ಪ್ರಭಾವದಿಂದ ಯುವಕರು ಹಾಳಾಗಬಾರದು ಎಂಬುದಷ್ಟೇ ನನ್ನ ಕಾಳಜಿ ಎಂದು ಯು.ಟಿ.ಖಾದರ್ ಸ್ಪಷ್ಟಪಡಿಸಿದರು.
ಐಟಿ-ಬಿಟಿಗಳಲ್ಲಿ ಸ್ಮೋಕಿಂಗ್ ಝೋನ್ ಕಡಿವಾಣಕ್ಕೆ ಚಿಂತನೆ: ತಂಬಾಕು, ಸಿಗರೇಟ್ ಕಡಿವಾಣಕ್ಕೆ ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವರು ಹಳೆಯ ಅಭ್ಯಾಸದಿಂದ ಧೂಮಪಾನ ಮಾಡುತ್ತಿರುತ್ತಾರೆ. ಲಕ್ಷಾಂತರ ಉದ್ಯೋಗಿಗಳು ಇರುವ ಕಡೆಗಳಲ್ಲಿ ಸಂಪೂರ್ಣ ನಿಯಂತ್ರಣ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಐಟಿ-ಬಿಟಿ ಕಂಪೆನಿಗಳಲ್ಲಿ ಪ್ರತ್ಯೇಕ ಸ್ಮೋಕಿಂಗ್ ಝೋನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೂ ಸ್ಮೋಕಿಂಗ್ ಝೋನ್‍ಗಳಿಗೆ ಕಡಿವಾಣ ಹಾಕುವ ಬಗ್ಗೆ ಸಲಹೆ ಬಂದಿದ್ದು, ಈ ಕುರಿತು ಪರಿಶೀಲಿಸಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದರು.






