ಹೊರಗುತ್ತಿಗೆ ನೌಕರರಿಗೆ 5 ಲಕ್ಷ ರೂ.ಗಳ ನಗದು ರಹಿತ ಆರೋಗ್ಯ ಯೋಜನೆಗೆ ಅನುಮೋದನೆ

ಸಾಂದರ್ಭಿಕ ಚಿತ್ರ (credit: Grok)
ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಹಾಗೂ ಗೌರವಧನ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮತ್ತು ಅವರ ಅವಲಂಬಿತರಿಗೆ 5ಲಕ್ಷ ರೂ.ಗಳ ನಗದು ರಹಿತ ಆರೋಗ್ಯ ಭರವಸೆ ಯೋಜನೆಯನ್ನು ಜಾರಿ ಮಾಡಿದ್ದು, ಇದಕ್ಕಾಗಿ ಸಿಬ್ಬಂದಿಯಿಂದ ಮಾಸಿಕ 100 ರೂ. ವಂತಿಗೆ ಪಡೆಯಲಾಗುತ್ತದೆ.
ಮಂಗಳವಾರದಂದು ಸರಕಾರ ಆದೇಶ ಹೊರಡಿಸಿದ್ದು, ವಾರ್ಷಿಕ ಆದಾಯ ರೂ.2.52 ಲಕ್ಷ ರೂ.ಗಿಂತ ಕಡಿಮೆ ಅಥವಾ ಮಾಸಿಕ ಆದಾಯ 21 ಸಾವಿರ ರೂ.ಗಿಂತ ಕಡಿಮೆ ಇರುವ ವರ್ಗದ ಉದ್ಯೋಗಿಗಳು ಯೋಜನೆಯನ್ನು ಪಡೆಯಲಿದ್ದಾರೆ. ಸರಕಾರವು ಸಹ ತಿಂಗಳಿಗೆ 100ರೂ.ಗಳ ಹೊಂದಾಣಿಕೆಯ ಪಾಲನ್ನು ಪಾವತಿಸುತ್ತದೆ. ಅದರಂತೆ ಉದ್ಯೋಗಿಗಳಿಗೆ ಸರಕಾರದ ಕೊಡುಗೆ ಪ್ರತಿ ಕುಟುಂಬಕ್ಕೆ ಸರಾಸರಿ ವಾರ್ಷಿಕ ವೆಚ್ಚದ ಶೇ.50ರಷ್ಟು ಆಗಿರುತ್ತದೆ ಎಂದು ತಿಳಿಸಿದೆ.
ಆದ್ಯತೇತ್ತರ(ಪಿಎಚ್ಎಚ್ ಅಲ್ಲದ) ಕುಟುಂಬಗಳಿಗೆ ಸರಾಸರಿ ವೆಚ್ಚದ ಶೇ.30ರಷ್ಟು ಸರಕಾರವು ಪಾವತಿಸಲಿದೆ. ಉಳಿಕೆ ಮೊತ್ತ ಸಿಬ್ಬಂದಿಯ ವಂತಿಕೆಯಾಗಿರುತ್ತದೆ. ಇಂತಹ ಪ್ರಕರಣಗಳಿಗೆ ಸರಕಾರದ ಕೊಡುಗೆ 60ರೂ. ಆಗಿರುತ್ತದೆ ಮತ್ತು ಗುತ್ತಿಗೆ ಉದ್ಯೋಗಿ 140ರೂ. ಪಾವತಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.
ಈ ಆದೇಶ ಹೊರಡಿಸಿದ ದಿನಾಂಕದಿಂದ 2 ತಿಂಗಳೊಳಗೆ ಅಂದರೆ ಆ.31ರೊಳಗಾಗಿ ಸರಕಾರಿ ಇಲಾಖೆಗಳು/ನಿಗಮಗಳು/ಸ್ಥಳೀಯ ಸಂಸ್ಥೆಗಳು/ಮಂಡಳಿಗಳು(ಪಾಲುದಾರಿಕೆ ಸಂಸ್ಥೆ) ಎಸ್ಎಎಸ್ಟಿಯೊಂದಿಗೆ ಒಪ್ಪಂದ ಮಾಡಿಕೊಂಡು, ಪಟ್ಟಿಯನ್ನು ಆರೋಗ್ಯ ಇಲಾಖೆಗೆ ಒದಗಿಸಬೇಕು. ನಂತರದ ವರ್ಷಗಳಲ್ಲಿ, ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ಅಂದರೆ ಮಾ.31ರೊಳಗಾಗಿ ಪಟ್ಟಿಯನ್ನು ಒದಗಿಸಬೇಕು ಎಂದು ಹೇಳಿದೆ.
ಅನುಮತಿಸಲಾದ ಪಟ್ಟಿಯನ್ನು ಹೊರತುಪಡಿಸಿ ಯಾವುದೇ ಹೊಸ ಸೇರ್ಪಡೆಗಳನ್ನು ಪರಿಗಣಿಸುವುದಿಲ್ಲ. ಪಾಲುದಾರಿಕೆ ಸಂಸ್ಥೆಯು ಸಿಬ್ಬಂದಿಗಳಿಂದ ಕೊಡುಗೆಯನ್ನು ಸಂಗ್ರಹಿಸಿ ಮಾಸಿಕವಾಗಿ ಎಸ್ಎಎಸ್ಟಿಗೆ ವರ್ಗಾಯಿಸಬೇಕು. ಹಾಗೆಯೇ ಪಾಲುದಾರಿಕೆ ಸಂಸ್ಥೆಗಳು ಶೇ.2ರಷ್ಟು ನಿರ್ವಹಣಾ ವೆಚ್ಚವನ್ನು ಎಸ್ಎಎಸ್ಟಿಗೆ ಪಾವತಿಸಬೇಕು ಎಂದು ಉಲ್ಲೇಖಿಸಿದೆ.
►ಯೋಜನೆಯಡಿ ಪ್ರತಿ ನೌಕರರು ತಿಂಗಳಿಗೆ 100 ರೂಪಾಯಿ ಪಾವತಿಸಬೇಕು.
►ರಾಜ್ಯ ಸರಕಾರವು ಪ್ರತಿ ಕುಟುಂಬಕ್ಕೆ ತಿಂಗಳಿಗೆ 100 ರೂಪಾಯಿ ಹಣವನ್ನು ನೀಡುತ್ತದೆ.
ಯೋಜನೆಯ ಫಲಾನುಭವಿಗಳು
►ಮಾಸಿಕ 21 ಸಾವಿರ ರೂ.ಗಿಂತ ಕಡಿಮೆ ಸಂಪಾದನೆ ಮಾಡುವ ಗುತ್ತಿಗೆ ನೌಕರರು
►ಹೊರಗುತ್ತಿಗೆ ಸಿಬ್ಬಂದಿ
►ಗೌರವಧನದ ಆಧಾರದ ಮೇಲೆ ಕೆಲಸ ಮಾಡುವವರು
►ಇಎಸ್ಐಎಸ್, ಆಯುಷ್ಮಾನ್ ಭಾರತ್ ಅಥವಾ ಇತರ ಯಾವುದೇ ಸರಕಾರಿ ಆರೋಗ್ಯ ಯೋಜನೆಗಳಿಂದ ಹೊರಗೆ ಉಳಿದವರು