ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ಹೆಲಿಕಾಪ್ಟರ್, ವಿಮಾನ ಸೇವೆ ಪಡೆಯಲು ರಾಜ್ಯ ಸರಕಾರ ತೀರ್ಮಾನ

ಬೆಂಗಳೂರು, ಸೆ. 1: ಸರಕಾರಿ ಕೆಲಸಗಳಿಗೆ ಗಂಟೆಗಳ ಆಧಾರದಲ್ಲಿ ಹೆಲಿಕಾಪ್ಟರ್, ವಿಮಾನ ಸೇವೆ ಗುತ್ತಿಗೆ ಪಡೆಯುವ ಬದಲಿಗೆ ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಪಡೆಯಲು ರಾಜ್ಯ ಸರಕಾರ ತೀರ್ಮಾನ ಮಾಡಿದೆ.
ಸೋಮವಾರ ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಮಾಡಲಾಗಿದ್ದು, ಸರಕಾರಿ ಕೆಲಸ-ಕಾರ್ಯಗಳಿಗೆ ಓಡಾಡಲು ಗಂಟೆಗಳ ಅವಧಿಯಲ್ಲಿ ಹೆಲಿಕಾಪ್ಟರ್ ಹಾಗೂ ವಿಶೇಷ ವಿಮಾನಗಳನ್ನು ಗುತ್ತಿಗೆ ಪಡೆಯಲಾಗುತ್ತಿತ್ತು. ಇದರಿಂದ ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗುತ್ತಿತ್ತು.
ಅಲ್ಲದೆ, ಸಮಯಕ್ಕೆ ಸರಿಯಾಗಿ ಹೆಲಿಕಾಪ್ಟರ್, ವಿಮಾನಯಾನ ಸೇವೆ ಲಭ್ಯವಿರುತ್ತಿರಲಿಲ್ಲ. ಇದರಿಂದ ಗಂಟೆಗಳ ಅವಧಿ ಗುತ್ತಿಗೆಯನ್ನು ಕೈಬಿಟ್ಟು ವಾರ್ಷಿಕವಾಗಿ ಗುತ್ತಿಗೆ ಪಡೆಯಲು ತೀರ್ಮಾನವಾಗಿದೆ. ವಾರ್ಷಿಕ ಗುತ್ತಿಗೆಯಿಂದ ಸಮಯಕ್ಕೆ ಸರಿಯಾಗಿ ಹೆಲಿಕಾಪ್ಟರ್ ಹಾಗೂ ವಿಮಾನ ಸೇವೆ ದೊರೆಯಲಿದೆ ಎಂದು ಹೇಳಲಾಗಿದೆ.
ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಸರಕಾರಿ ಅಧಿಕೃತ ಕೆಲಸಗಳಿಗೆ ಹೆಲಿಕಾಪ್ಟರ್ ಮತ್ತು ವಿಮಾನಗಳನ್ನು ಬಾಡಿಗೆ ಪಡೆಯುವ ಸಂಬಂಧ ನಡೆಸಿದ ಸಭೆಯನ್ನು ನಡೆಸಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ವರ್ಷದಿಂದಲೂ ಸರಕಾರದ ಮುಂದೆ ಹಲವು ವಿಚಾರಗಳು ಬಾಕಿ ಉಳಿದಿದ್ದವು’ ಎಂದರು.
ಇದೀಗ ಸರಕಾರಿ ಕೆಲಸಗಳಿಗೆ ಸಂಬಂಧಿಸಿದಂತೆ ಹೆಲಿಕಾಪ್ಟರ್ ಮತ್ತು ವಿಮಾನ ಸೇವೆಗಳನ್ನು ಪಡೆಯಲು ಟೆಂಡರ್ ಕರೆಯುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನಗೆ ಜವಾಬ್ದಾರಿ ನೀಡಿದ್ದರು. ಬೇರೆ ರಾಜ್ಯಗಳಲ್ಲಿನ ವ್ಯವಸ್ಥೆಯನ್ನು ತಿಳಿದುಕೊಳ್ಳುವಂತೆ ಹಾಗೂ ಎಚ್‍ಎಎಲ್ ಸಂಸ್ಥೆಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು.
‘ಸರಕಾರದ ಕಾರ್ಯಕ್ರಮಗಳಿಗೆ ಸಿಎಂ, ಸಚಿವರು ಹಾಗೂ ಅಧಿಕಾರಿಗಳು ತೆರಳಲು ಹೆಲಿಕಾಪ್ಟರ್ ಮತ್ತು ವಿಮಾನ ಸೇವೆಗಳನ್ನು ಪಡೆಯುತ್ತಾರೆ. ಗಂಟೆ ಲೆಕ್ಕದಲ್ಲಿ ಹಣ ನೀಡಿ ಹೆಲಿಕಾಪ್ಟರ್ ಬಳಕೆ ಮಾಡುತ್ತಿದ್ದರು. ಹೀಗಾಗಿ ಆ ಸಮಯದ ಮಿತಿಯಲ್ಲೇ ಕೆಲಸ ಮುಗಿಸಿಕೊಳ್ಳಬೇಕಿತ್ತು. ಹೀಗಾಗಿ ಕೆಲ ಸಂದರ್ಭದಲ್ಲಿ ಸಭೆ-ಸಮಾರಂಭಗಳನ್ನು ಮೊಟಕುಗೊಳಿಸಬೇಕಾಗುತ್ತಿತ್ತು. ಇನ್ನು ಮುಂದೆ ಆ ಪರಿಸ್ಥಿತಿ ಎದುರಾಗುವುದಿಲ್ಲ. ಹೆಲಿಕಾಪ್ಟರ್-ವಿಮಾನ ಸೇವೆಗಳನ್ನು ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲಾಗುವುದು’
-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ







