ಹಕ್ಕಿಜ್ವರ ದೃಢ : ಹೆಸರಘಟ್ಟದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರ ‘ನಿಷೇಧಿತ ಪ್ರದೇಶ’ವೆಂದು ಘೋಷಣೆ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ನಗರದ ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಎಚ್5ಎನ್1 ಹಕ್ಕಿಜ್ವರ ದೃಢಪಟ್ಟಿದ್ದು, ಈ ಸ್ಥಳವನ್ನು ಒಂದು ವರ್ಷದ ವರೆಗೆ ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಮುತ್ಕೂರು ಗ್ರಾಮವನ್ನು(3ಕಿ.ಮೀ. ವ್ಯಾಪ್ತಿ) ಎಚ್5ಎನ್1 ಸೋಂಕಿತ ವಲಯ ಮತ್ತು ಸುತ್ತಲಿನ 10ಕಿ.ಮೀ. ಪ್ರದೇಶವನ್ನು ಕಣ್ಗಾವಲು ವಲಯ ಎಂದು ಆರೋಗ್ಯ ಇಲಾಖೆಯು ಘೋಷಿಸಿದೆ.
ಶುಕ್ರವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಕಟನೆ ಹೊರಡಿಸಿದ್ದು, ರಾಜ್ಯ, ಜಿಲ್ಲಾ ಮತ್ತು ಪಿಎಚ್ಸಿಆರ್ ಆರ್ಟಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಎ.15ರಂದು 7,444 ಕೋಳಿಗಳು, 14 ಸಾವಿರಕ್ಕೂ ಅಧಿಕ ಮೊಟ್ಟೆಗಳು, 2,250 ಕೆ.ಜಿ. ಕೋಳಿ ಆಹಾರವನ್ನು ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ಕಲ್ಲಿಂಗ್ ಮಾಡಿ ವಿಲೇವಾರಿ ಮಾಡಲಾಗಿದೆ. ಇದರಲ್ಲಿ ಭಾಗಿಯಾದ 10 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ, ಒಸೆಲ್ಟಾಮಿವಿರ್ ಔಷಧದೊಂದಿಗೆ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ ಎಂದಿದ್ದಾರೆ.
ಆರೋಗ್ಯ ಇಲಾಖೆ ಕಣ್ಗಾವಲು ಪ್ರಗತಿಯಲ್ಲಿದ್ದು, 3 ಕಿ.ಮೀ. ವ್ಯಾಪ್ತಿ ವಲಯದಲ್ಲಿ ಒಟ್ಟು 3,422 ಜನಸಂಖ್ಯೆಯ ಎರಡು ಗ್ರಾಮಗಳಿದ್ದು, 3 ರಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಒಟ್ಟು 22,395 ಜನಸಂಖ್ಯೆ ಇರುವ 17 ಗ್ರಾಮಗಳು ಇವೆ. ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ದಿನನಿತ್ಯ ಮನೆಮನೆ ಭೇಟಿ ನೀಡಿ ಮುಂದಿನ ಹತ್ತು ದಿನಗಳ ಕಾಲ ಜ್ವರ ಕಣ್ಗಾವಲು ನಡೆಸಲಾಗುವುದು. ಶಂಕಿತ ಪ್ರಕರಣಗಳನ್ನು ತಕ್ಷಣ ವರದಿ ಮಾಡಲು ಆಸ್ಪತ್ರೆಗಳಿಗೆ ಸೂಚಿಸಲಾಗಿದ್ದು, ಪಿಪಿಇ ಕಿಟ್, ಮಾಸ್ಕ್, ಒಸೆಲ್ಟಾಮಿವಿರ್, ವಿಟಿಎಂ ಮತ್ತು ಗಂಟಲು ಸ್ವಾಬ್ ಗಳನ್ನು ಅಗತ್ಯ ಪ್ರಮಾಣದಲ್ಲಿ ಹೆಸರಘಟ್ಟ ಮತ್ತು ಸೊನ್ನೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಭ್ಯ ಇರಬೇಕು ಎಂದು ಅವರು ಸೂಚನೆ ನೀಡಿದ್ದಾರೆ.
ಭಯ ಬೇಡ, ಜಾಗರೂಕತೆ ಮುಖ್ಯ: ‘ಈವರೆಗೆ ಯಾವುದೇ ಮನುಷ್ಯರಲ್ಲಿ ಈ ರೋಗ ವರದಿಯಾಗಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ. ಆದರೆ ಜಾಗರೂಕರಾಗಿರಬೇಕು. ಅನಾರೋಗ್ಯ, ಸತ್ತ ಹಕ್ಕಿಗಳ ಸಂಪರ್ಕದಿಂದ ದೂರ ಇರಬೇಕು. ಯಾವುದೇ ರೀತಿಯ ಅನುಮಾನ ಕಂಡುಬಂದರೆ ತಕ್ಷಣ ಪಶುಸಂಗೋಪನೆ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಸರಿಯಾಗಿ ಬೇಯಿಸಿದ ಕೋಳಿ ಮಾಂಸ ಮತ್ತು ಮೊಟ್ಟೆ ಸೇವಿಸಬೇಕು. ಆರೋಗ್ಯ ಇಲಾಖೆ ಎಲ್ಲ ರೀತಿಯ ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ’
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ






