ಸಿಎಂ ಬದಲಾವಣೆಗೆ ಹೈಕಮಾಂಡ್ ತೀರ್ಮಾನ ಅಂತಿಮ : ಡಾ.ಜಿ.ಪರಮೇಶ್ವರ್

ಡಾ.ಜಿ.ಪರಮೇಶ್ವರ್
ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿದೆ. ಜತೆಗೆ, ಅಂತಹ ಸಂದರ್ಭದಲ್ಲಿ ಸಿಎಲ್ಪಿ ಸಭೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸತೀಶ್ ಜಾರಕಿಹೊಳಿ ಬಗ್ಗೆ ವಿಧಾನ ಪರಿಷತ್ತಿನ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ಸೈದ್ಧಾಂತಿಕವಾಗಿ ಹೇಳಿದ್ದಾರೆ. ಸತೀಶ್ ಅವರು ಅಹಿಂದ ಚಳುವಳಿಯಲ್ಲಿದ್ದರು. ಅವರಿಗೆ ಬದ್ಧತೆ ಇದೆ ಎನ್ನುವ ಕಾರಣಕ್ಕೆ ಹೇಳಿರಬಹುದು. ಆದರೆ, ಸಿಎಂ ಹುದ್ದೆ ಕುರಿತು ಆ ಹೇಳಿಕೆ ನೀಡಿಲ್ಲ ಎಂದು ಹೇಳಿದರು.
ಕಬಡ್ಡಿ ಪಂದ್ಯದಲ್ಲಿ ಬಾಜಿ ಕಟ್ಟಿದ್ದ ವಿಚಾರ ಕುರಿತು ಪ್ರತಿಕ್ರಿಯಿಸಿ, ಅಲ್ಲಿ ಸೋಲು, ಗೆಲುವಿನ ಕುರಿತು ತಮಾಷೆಗೆ ಚರ್ಚೆ ಆಗುತ್ತಿತ್ತು. ನನಗೆ ಅಷ್ಟೂ ಬುದ್ಧಿ ಇಲ್ಲವೇ ಗೃಹ ಸಚಿವನಾಗಿ ಬಾಜಿ ಕಟ್ಟುವ ಮಟ್ಟಕ್ಕೆ ಹೋಗುತ್ತೀನಾ?. ಸುಮ್ಮನೆ ಅನಾವಶ್ಯಕ ವಿವಾದ ಮಾಡಲಾಗುತ್ತಿದೆ. ಅದು ಬಾಜಿ ಅಲ್ಲ. ನಾನೂ ಒಬ್ಬ ಕ್ರೀಡಾಪಟು ಎಂದರು.
ಚಿತ್ತಾಪುರ ಆರೆಸ್ಸೆಸ್ ಪಥ ಸಂಚಲನ ವಿಚಾರವಾಗಿ ಮಾತನಾಡಿ, ಸಂಘ ಸಂಸ್ಥೆಗಳ ಅನುಮತಿ ವಿಚಾರ ಆದೇಶವಾಗಿದೆ. ಅದರಂತೆ ಅನುಮತಿ ಪಡೆಯಬೇಕು. ಸಂಘರ್ಷ ನಡೆದಿರುವ ಬಗ್ಗೆ ಗೊತ್ತಿಲ್ಲ. ಸಂಘದವರು ಅನುಮತಿ ಕೇಳಿದ್ದಾರೆ. ಇದೇ ಮಾದರಿಯಲ್ಲಿ ಬೇರೆ ಸಂಘಟನೆಗಳೂ ಕೇಳಿದ್ದಾರೆ. ಸ್ಥಳೀಯ ಆಡಳಿತ ತೀರ್ಮಾನ ಮಾಡಲಿದೆ. ನಮ್ಮ ಸುತ್ತೋಲೆಯಲ್ಲಿ ಆರೆಸ್ಸೆಸ್ ಪದ ಬಂದಿಲ್ಲ. ಇದು ಎಲ್ಲರಿಗೂ ಅನ್ವಯವಾಗುತ್ತದೆ ಎಂದು ಪರಮೇಶ್ವರ್ ಹೇಳಿದರು.







