ಬೆಸ್ಕಾಂನಿಂದ ಸ್ಮಾರ್ಟ್ ಮೀಟರ್ ಕಡ್ಡಾಯ ವಿಚಾರ | ಗ್ರಾಹಕರಿಗೆ ಗೊಂದಲ ಉಂಟುಮಾಡುವ ನೀತಿ ಏಕೆ ರೂಪಿಸಿದ್ದೀರಿ? : ಸರಕಾರಕ್ಕೆ ಹೈಕೋರ್ಟ್ ಪ್ರಶ್ನೆ

ಬೆಂಗಳೂರು : ʼಗ್ರಾಹಕರಿಗೆ ಗೊಂದಲ ಉಂಟುಮಾಡುವ ನೀತಿ ಏಕೆ ರೂಪಿಸಿದ್ದೀರಿ. ನಮ್ಮ ಗ್ರಾಹಕರಿಗೆ ದರ ಏರಿಕೆ ಹೊಡೆತ ಬೀಳಬಾರದು. ಪಕ್ಕದ ರಾಜ್ಯದಲ್ಲಿ 900 ರೂಪಾಯಿ. ಇಲ್ಲಿ ಯಾಕೆ 10 ಸಾವಿರ ರೂಪಾಯಿ ಇದೆʼ ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿದೆ.
ಬೆಸ್ಕಾಂನಿಂದ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಿರುವ ಕ್ರಮ ಪ್ರಶ್ನಿಸಿ ಜಯಲಕ್ಷ್ಮೀ ಎಂಬುವರಿಂದ ರಿಟ್ ಅರ್ಜಿ ಸಲ್ಲಿಯಾಗಿದೆ. ಈ ಅರ್ಜಿಯ ವಿಚಾರಣೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಹೈಕೋರ್ಟ್‌ಗೆ ರಾಜ್ಯ ಸರಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ, ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬೇಕು. ಹೊಸ ವಿದ್ಯುತ್ ಸಂಪರ್ಕಕ್ಕೆ ಪೋಸ್ಟ್ ಪೇಯ್ಡ್ ಸ್ಮಾರ್ಟ್ ಮೀಟರ್ ಅವಕಾಶ ನೀಡಲಾಗಿದೆ. ಹೊಸ ಗ್ರಾಹಕರಿಗೆ ಮಾತ್ರ ಸ್ಮಾರ್ಟ್ ಮೀಟರ್ ಎಂದು ವಾದ ಮಂಡಿಸಿದರು.
ಇದಕ್ಕೆ ಪ್ರತಿವಾದ ಮಂಡಿಸಿ, 3 ಫೇಸ್ ಸ್ಮಾರ್ಟ್ ಮೀಟರ್‌ಗೆ 10 ಸಾವಿರ ವಿಧಿಸಲಾಗುತ್ತಿದೆ. ಪ್ರತಿ ತಿಂಗಳು ಗುತ್ತಿಗೆದಾರ 75 ರೂ. ರಾಜಶ್ರೀ ಎಲೆಕ್ಟ್ರಿಕಲ್ಸ್ ಗೆ ನೀಡಬೇಕಾಗಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್ ಆರೋಪಿಸಿದರು.
ವಾದ ಪ್ರತಿವಾದ ಆಲಿಸಿದ ಪೀಠ, ಗ್ರಾಹಕರಿಗೆ ಗೊಂದಲ ಉಂಟುಮಾಡುವ ನೀತಿಯನ್ನು ಸರಕಾರ ಏಕೆ ರೂಪಿಸಿದ್ದೀರಿ. ನಮ್ಮ ಗ್ರಾಹಕರಿಗೆ ದರ ಏರಿಕೆ ಹೊಡೆತ ಬೀಳಬಾರದು. ಪಕ್ಕದ ರಾಜ್ಯದಲ್ಲಿ 900 ರೂಪಾಯಿ. ಇಲ್ಲಿ ಯಾಕೆ 10 ಸಾವಿರ ಇದೆ ಎಂದು ರಾಜ್ಯ ಸರಕಾರಕ್ಕೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಪ್ರಶ್ನೆಗಳ ಸುರಿಮಳೆ ಗೈದರು.
ಬಳಿಕ ಈ ಬಗ್ಗೆ ಜು.9 ರಂದು ಪ್ರತಿಕ್ರಿಯಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.







