ಸ್ಮಾರ್ಟ್ ವಿದ್ಯುತ್ ಮೀಟರ್ ಕಡ್ಡಾಯ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು : ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರು ಕಡ್ಡಾಯವಾಗಿ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುವ ಸಂಬಂಧ ರಾಜ್ಯ ಸರಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರು ಗ್ರಾಮಾಂತರದ ಪಿ.ಎಂ. ಹರೀಶ್ ಹಾಗೂ ದೊಡ್ಡಬಳ್ಳಾಪುರದ ಎಂ. ಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ, ಜುಲೈ 22ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿತು.
ಇಂಥದ್ದೇ ವಿಚಾರ ಹೊಂದಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ವಿಭಾಗೀಯ ನ್ಯಾಯಪೀಠದ ಮುಂದೆ ಬಾಕಿ ಇವೆ. ನ್ಯಾಯಾಂಗ ಶಿಸ್ತು, ಶ್ರೇಣಿ ಮತ್ತು ಔಚಿತ್ಯವು ಈ ನ್ಯಾಯಾಲಯವು ಪ್ರಸ್ತುತ ಅರ್ಜಿಗಳ ವಿಚಾರಣೆಯಿಂದ ಅಂತರ ಕಾಯ್ದುಕೊಳ್ಳುವಂತೆ ಮಾಡಿದೆ. ಆದ್ದರಿಂದ, ಈ ಅರ್ಜಿಗಳು ಊರ್ಜಿತವಾಗುವುದಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಜತೆಗೆ, ಅರ್ಜಿದಾರರು ಹೊಸ ಮೀಟರ್ ಹೊಂದುತ್ತಿಲ್ಲವಾದ್ದರಿಂದ ಅವರನ್ನು ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳುವಂತೆ ಒತ್ತಾಯಿಸುವುದಿಲ್ಲ ಎಂದು ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು ನೀಡಿದ್ದ ಹಿಂದಿನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಅರ್ಜಿದಾರರ ಆಕ್ಷೇಪ:
ಕರ್ನಾಟಕ ವಿದ್ಯುತ್ ನಿಯಂತ್ರಣಾ ಆಯೋಗ (ಪ್ರೀ ಪೇಯ್ಡ್ ಸ್ಮಾರ್ಟ್ ಮೀಟರ್) ನಿಯಮಗಳು-2024ರ ಅನ್ವಯ ಎಲ್ಲ ವರ್ಗದ ಗ್ರಾಹಕರೂ ಪ್ರೀ ಪೇಯ್ಡ್ ಮೀಟರ್‌ಗಳನ್ನು ಪಡೆಯಲು ಅವಕಾಶ ಇದೆ. ಈ ಕ್ರಮ 2025ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ನಿಯಮ ರೂಪಿಸಲಾಗಿದೆ. ಈ ಪ್ರಕ್ರಿಯೆ ತಾತ್ಕಾಲಿಕ ಸಂಪರ್ಕಕ್ಕೆ ಮಾತ್ರ ಎಂದು ತಿಳಿಸಲಾಗಿದೆ. ನಮ್ಮ ಸಂಪರ್ಕ ಶಾಶ್ವತವಾದದ್ದು. ಆದರೆ, ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪತ್ರವೊಂದನ್ನು ನೀಡಿದ್ದಾರೆ. ಈ ಮೀಟರ್‌ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಹೊರ ಭಾಗದ ಏಜೆನ್ಸಿಗಳ ಮೂಲಕ 2 ಸಾವಿರ ರೂ. ಬೆಲೆಯ ಮೀಟರ್‌ಗಳನ್ನು 10 ಸಾವಿರ ರೂ.ಗಳಿಗೆ ಖರೀದಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ಹೊಸದಾಗಿ ವಿದ್ಯುತ್ ಸಂರ್ಪಕ ಪಡೆಯಲು ಕಡ್ಡಾಯವಾಗಿ ಸ್ಮಾರ್ಟ್ ಮೀಟರ್ ಅಳವಡಿಸಬೇಕು ಎಂದು 2025ರ ಫೆಬ್ರವರಿ 13ರಂದು ಹೊರಡಿಸಿರುವ ಮಾರ್ಗಸೂಚಿ ಹಾಗೂ ಆ ಕುರಿತು ಸೂಚಿಸಿ 2025ರ ಏಪ್ರಿಲ್ 25ರಂದು ಬೆಸ್ಕಾಂ ನೀಡಿರುವ ಪತ್ರವನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.
ಸರಕಾರ ಏನು ಹೇಳಿತ್ತು?
ಅರ್ಜಿ ವಿಚಾರಣೆ ವೇಳೆ ರಾಜ್ಯ ಸರಕಾರದ ಪರ ವಾದ ಮಂಡಿಸಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಸ್ಮಾರ್ಟ್ ಮೀಟರ್ ಅಳವಡಿಕೆ ವಿಚಾರದಲ್ಲಿ ಕೆಇಆರ್‌ಸಿ ಮಾರ್ಗಸೂಚಿಗೆ ಅನುಗುಣವಾಗಿಯೇ ರಾಜ್ಯ ಸರಕಾರ ಹಾಗೂ ಬೆಸ್ಕಾಂ ನಡೆದುಕೊಳ್ಳುತ್ತಿದೆ. ಹೊಸದಾಗಿ ಯಾರು ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಿಕೊಳ್ಳುತ್ತಾರೆಯೋ ಅವರಿಗೆ ಮಾತ್ರವೇ ಪರಿಪಾಲನಾ ನಿರ್ದೇಶನಗಳು ಅನ್ವಯವಾಗಲಿವೆ. ಅಷ್ಟಕ್ಕೂ ಇದು ಪೋಸ್ಟ್ ಪೇಯ್ಡ್ ಆಗಿರುತ್ತದೆ ಎಂದು ತಿಳಿಸಿದ್ದರು.







