ಕಸಾಪ ಅಧ್ಯಕ್ಷರಿಂದ ಸಾಲು-ಸಾಲು ಸುಳ್ಳುಗಳು; ಮಹೇಶ್ ಜೋಶಿ ನಡವಳಿಕೆಗೆ ಸರಕಾರದ ಆಕ್ಷೇಪ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಅಧ್ಯಕ್ಷರಾಗಿದ್ದ ಮಹೇಶ್ ಜೋಶಿ ಹೇಳಿರುವುದಲ್ಲೆವೂ ಅಕ್ಷರಶಃ ಸುಳ್ಳು. ಸಾಲು-ಸಾಲು ಸುಳ್ಳುಗಳನ್ನು ಹೇಳಿರುವ ಅವರು ಆ ಸುಳ್ಳುಗಳನ್ನೇ ನ್ಯಾಯಾಲಯದ ಮುಂದೆಯೂ ಪ್ರತಿಪಾದಿಸಿದ್ದಾರೆ. ಅವರ ಈ ನಡವಳಿಕೆ ಆಘಾತಕಾರಿಯಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ನಲ್ಲಿ ಬಲವಾಗಿ ವಾದ ಮಂಡಿಸಿದೆ.
ಕಸಾಪ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸಲು ತನಿಖಾಧಿಕಾರಿ ನೇಮಕ ಮಾಡಿ 2025ರ ಜೂನ್ 26 ಹಾಗೂ 30ರಂದು ಸಹಕಾರ ಸಂಘಗಳ ನೋಂದಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ತಡೆ ಕೋರಿ ಮಹೇಶ್ ಜೋಶಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ರಾಜ್ಯ ಸರಕಾರದ ಪರ ಅಡ್ವೊಕೇಟ್ ಜನರಲ್ (ಎಜಿ) ಕೆ. ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ತನಿಖಾಧಿಕಾರಿ ಮುಂದೆ ಹಾಜರಾಗಲು ನೋಟಿಸ್ ನೀಡಿದ್ದಾಗ ಕುಟುಂಬದಲ್ಲಿ ಸಾವು ಸಂಭವಿಸಿದೆ, ಪ್ರಯಾಣ ಮಾಡಬೇಕಾಗಿರುವುದರಿಂದ 15 ದಿನ ಕಾಲಾವಕಾಶಬೇಕು ಎಂದು ಜೋಶಿ ಮನವಿ ಮಾಡಿದ್ದರು. ಆದರೆ, ಅವರು ಎಲ್ಲಿಗೂ ಪ್ರಯಾಣ ಮಾಡಿಲ್ಲ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ರೈಲು ಟಿಕೆಟ್ ಬುಕ್ ಮಾಡಿ, ನಂತರ ಅದನ್ನು ಕ್ಯಾನ್ಸಲ್ ಮಾಡಿಸಿ, ಟಿಕೆಟ್ ಹಣವನ್ನು ವಾಪಸ್ ಸಹ ಪಡೆದಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಅರ್ಜಿ ವಿಚಾರಣೆಯ ಹಂತದಲ್ಲಿ ಅರ್ಜಿದಾರರು ಕೆಲ ದಾಖಲೆಗಳನ್ನೊಳಗೊಂಡ ಮೆಮೊ ಸಲ್ಲಿಸಿದ್ದರು. ಅದರಲ್ಲಿ, ಸೆಪ್ಟೆಂಬರ್ 15ರಂದು ಬೆಂಗಳೂರಿನಿಂದ ಲಖನೌ ಹಾಗೂ ಲಖನೌನಿಂದ ಬೆಂಗಳೂರಿಗೆ ಹಿಂದಿರುಗಿರುವ ವಿಮಾನ ಟಿಕೆಟ್ ಲಗತ್ತಿಸಿದ್ದರು. ಇದಲ್ಲದೆ, ಸೆಪ್ಟೆಂಬರ್ 19ರಂದು ಬೆಂಗಳೂರಿನಿಂದ ಚೆನ್ನೈಗೆ ಮತ್ತು ಸೆಪ್ಟೆಂಬರ್ 20ರಂದು ಚೆನ್ನೈನಿಂದ ವಾರಾಣಸಿಗೆ ಹೊರಟು ಸೆಪ್ಟೆಂಬರ್ 22ರಂದು ವಾರಾಣಸಿ ತಲುಪಿರುವುದನ್ನು ತಿಳಿಸುವ ರೈಲು ಟಿಕೆಟ್‌ಗಳಿದ್ದವು. ಆದರೆ, ವಾಸ್ತವದಲ್ಲಿ ಅವರು ಪ್ರಯಾಣವನ್ನೇ ಮಾಡಿಲ್ಲ ಎಂದು ಪ್ರತಿಪಾದಿಸಿದರು.
ಪ್ರಯಾಣ ಮಾಡಿರುವುದಾಗಿ ತೋರಿಸಿಕೊಳ್ಳುವುದಕ್ಕಷ್ಟೇ ಟಿಕೆಟ್ ಬುಕ್ ಮಾಡಿಸಿ, ನಂತರ ರೈಲು ಟಿಕೆಟ್ ಬುಕಿಂಗ್ ಕ್ಯಾನ್ಸಲ್ ಮಾಡಿಸಿದ್ದಾರೆ. ರೈಲು ಟಿಕೆಟ್ ಕ್ಯಾನ್ಸಲ್ ಮಾಡಿಸಿದ ವಿವರಗಳನ್ನು ಕೊಡದಂತೆ ರೈಲ್ವೆ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಜತೆಗೆ, ಪ್ರಯಾಣ ಮಾಡಬೇಕಾಗಿದೆ ಎಂದು ಹೇಳಿದ್ದ ದಿನಗಳಲ್ಲಿ ಜೋಶಿ ಕಸಾಪ ಕಚೇರಿಗೆ ಬಂದು, ದೈನಂದಿನ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ ಎಂದು ಅಡ್ವೋಕೇಟ್ ಜನರಲ್ ಕೋರ್ಟ್‌ಗೆ ತಿಳಿಸಿದರು. ಮಹೇಶ್ ಜೋಶಿ ಅವರು ಕಚೇರಿಗೆ ಬಂದಿದ್ದು ಹೇಗೆ ಗೊತ್ತಾಯಿತು ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ಎಜಿ, ಸಿಸಿ ಕ್ಯಾಮರಾ ದೃಶ್ಯಾವಳಿಗಳಿಂದ ತಿಳಿದುಬಂದಿದೆ ಎಂದು ತಿಳಿಸಿದರು.
ಆಗ ನ್ಯಾಯಪೀಠ, ಕಸಾಪ ಅಧ್ಯಕ್ಷರ ಕಚೇರಿಯಲ್ಲಿ ಸಿಸಿ ಕ್ಯಾಮರಾ ಇರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿತು. ವಾದ ಮುಂದುವರಿಸಿದ ಎಜಿ, ಅನಾವಶ್ಯಕವಾಗಿ ಸಿಸಿ ಕ್ಯಾಮರಾ ಅಳವಡಿಸಿದ ಹಾಗೂ ಹಣ ದುರ್ಬಳಕೆಯ ಮಾತುಗಳೂ ಕೇಳಿ ಬಂದಿವೆ. ಸಿಸಿ ಕ್ಯಾಮರಾ ದೃಶ್ಯಾವಳಿ ಕೊಡದಂತೆ ಕಸಾಪ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ. ಕಾನೂನು ಮತ್ತು ನ್ಯಾಯಾಲಯವನ್ನು ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಪ್ರಕರಣದಲ್ಲಿ ಜೋಶಿಯವರನ್ನು ವೈಯುಕ್ತಿಕವಾಗಿ ಗುರಿಯಾಗಿಸಲಾಗಿಲ್ಲ. ತನಿಖೆ ನಡೆಯಲಿ. ನ್ಯಾಯಾಲಯವೇ ಕಾಲಮಿತಿ ನಿಗದಿಪಡಿಸಿ ಮೇಲ್ವಿಚಾರಣೆ ನಡೆಸಲಿ. ಏಕೆಂದರೆ, ವಿಷಯ ಬಹಳ ಗಂಭೀರವಾಗಿದ್ದು, ಅರ್ಜಿದಾರರ ನಡವಳಿಕೆ ಅನುಮಾನಸ್ಪದ ಹಾಗೂ ಆಘಾತಕಾರಿಯಾಗಿದೆ ಎಂದು ಕೋರ್ಟ್‌ಗೆ ವಿವರಿಸಿದರು.
ತನಿಖೆಗೆ ಸಹಕರಿಸುವಂತೆ ಜೋಶಿಗೆ ಕೋರ್ಟ್ ತಾಕೀತು:
ಈ ವೇಳೆ ಅರ್ಜಿದಾರರ ಪರ ವಕೀಲರು ಸ್ಪಷ್ಟನೆ ನೀಡಲು ಮುಂದಾದರೂ ಜೋಶಿಯವರ ನಡವಳಿಕೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಇದು ಕಾನೂನು ಮತ್ತು ನ್ಯಾಯಾಲಯದ ದುರ್ಬಳಕೆ ಆಗಿದೆ. ಆದ್ದರಿಂದ, 30 ದಿನಗಳಲ್ಲಿ ತನಿಖೆ ಮುಗಿಸಬೇಕು. ಅಲ್ಲಿವರೆಗೆ ಯಾವದೇ ಸಭೆ ನಡೆಯುವಂತಿಲ್ಲ. ತನಿಖೆಗೆ ಜೋಶಿ ಸಂಪೂರ್ಣವಾಗಿ ಸಹಕರಿಸಬೇಕು. ಈ ವಿಚಾರದಲ್ಲಿ ಯಾವುದೇ ರಿಯಾಯಿತಿ ಅಥವಾ ಅನುಕಂಪ ಇಲ್ಲ. ಜೋಶಿ ತನಿಖೆಗೆ ಸಹಕರಿಸದಿದ್ದರೆ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಡಿಸೆಂಬರ್ 8ಕ್ಕೆ ಮುಂದೂಡಿತು.







