ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ; ಏಕರೂಪ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸುವಂತೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನ ಪ್ರಮುಖ ಸಮಸ್ಯೆಗಳಲ್ಲೊಂದಾದ ಘನ ತ್ಯಾಜ್ಯ ನಿರ್ವಹಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ವೈಜ್ಞಾನಿಕ ರೀತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ (ಎಸ್‌ಡಬ್ಲ್ಯುಎಂ) ಮಾಡಲು ಏಕರೂಪ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಇದೇ ವೇಳೆ, ಬದಲಾದ ಕಾಲಘಟ್ಟದಲ್ಲಿ ಕಸ ವಿಲೇವಾರಿಗೆ ಹಳೆಯ ಪದ್ದತಿಯನ್ನೇ ಅನುಸರಿಸುವ ಬದಲು ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಹೊಸ ವಿಧಾನವೊಂದನ್ನು ರೂಪಿಸಿ, ಹಂತ ಹಂತವಾಗಿ ಜಾರಿಗೊಳಿಸಬೇಕು ಎಂದು ರಾಜ್ಯ ಸರಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಎಲ್ಲ ಐದು ಪಾಲಿಕೆಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ.
ಬೆಂಗಳೂರು ನಗರದ ಘನ ತ್ಯಾಜ್ಯ ವಿಲೇವಾರಿಗೆ 'ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (ಬಿಎಸ್‌ಡಬ್ಲ್ಯುಎಂಎಲ್)' 2025ರ ಜುಲೈ 30ರಂದು 33 ಪ್ಯಾಕೇಜ್‌ಗಳಿಗೆ ಹೊರಡಿಸಿದ್ದ ಟೆಂಡರ್ ಪ್ರಶ್ನಿಸಿ ಹಲವು ಘನತ್ಯಾಜ್ಯ ನಿರ್ವಹಣೆಯ ಗುತ್ತಿಗೆದಾರರು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.
ಏಕೀಕೃತ ಡಿಜಿಟಲ್ ವೇದಿಕೆ ಅಭಿವೃದ್ಧಿಗೆ ನಿರ್ದೇಶನ:
ಜಿಬಿಎ ಮುಖ್ಯ ಆಯುಕ್ತರು, ಐದು ಪಾಲಿಕೆಗಳ ವಲಯ ಆಯುಕ್ತರು ಮತ್ತು ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನೊಳಗೊಂಡಂತೆ ಸಭೆ ನಡೆಸಿ, ಘನತ್ಯಾಜ್ಯ ನಿರ್ವಹಣೆಗಾಗಿ ಏಕೀಕೃತ ಮತ್ತು ಸಂಯೋಜಿತ ಡಿಜಿಟಲ್ ವೇದಿಕೆಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು. ಅದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಬೇಕೆಂದು ಎಂದು ಹೈಕೋರ್ಟ್ ಆದೇಶಿಸಿದೆ.
ವಿವಿಧ ಎಸ್‌ಡಬ್ಲ್ಯುಎಂ ಸೇವೆಗಳಿಗಾಗಿ ಹಲವು ಅಪ್ಲಿಕೇಷನ್‌ಗಳು ಅಥವಾ ಪೋರ್ಟಲ್‌ಗಳ ರಚನೆಯನ್ನು ತಪ್ಪಿಸಲು ಏಕೀಕೃತ ವೇದಿಕೆ ರೂಪಿಸಬೇಕು. ಘನ ತ್ಯಾಜ್ಯ ನಿರ್ವಹಣೆ ಸಂಬಂಧಿತ ಎಲ್ಲ ಸಂವಹನಗಳಿಗೆ ಆಡಳಿತ ತತ್ವವು 'ಒಂದು ನಗರ, ಒಂದು ವೇದಿಕೆ' ಆಗಿರಬೇಕು. ಅದು ಎಲ್ಲ ನಾಗರಿಕರು, ನಿರ್ವಾಹಕರು ಮತ್ತು ಆಡಳಿತಗಾರರಿಗೆ ಸುಗಮವಾಗಿ ಕಾರ್ಯನಿರ್ವಹಣೆ ಖಾತ್ರಿಪಡಿಸಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಹೈಕೋರ್ಟ್ ನಿರ್ದೇಶನಗಳು:
► ಘನ ತ್ಯಾಜ್ಯ ನಿರ್ವಹಣೆಗಾಗಿ ಡಿಜಿಟಲ್ ಡ್ಯಾಶ್‌ಬೋರ್ಡ್, ಮೊಬೈಲ್ ಅಪ್ಲಿಕೇಷನ್, ಜಿಪಿಎಸ್ ಟ್ರ್ಯಾಕಿಂಗ್, ವೇಯ್ಟ್‌ಬ್ರಿಡ್ಜ್ ಏಕೀಕರಣ ಮತ್ತು ಸಿಸಿ ಕ್ಯಾಮರಾಗಳನ್ನು ನಿರ್ವಹಿಸಬೇಕು. ಅವುಗಳನ್ನು ಪ್ರತ್ಯೇಕ ಅಥವಾ ಸ್ವತಂತ್ರ ಯೋಜನೆಗಳಾಗಿ ನೋಡಬಾರದು, ಸುಸಂಘಟಿತ ಆಡಳಿತ ವ್ಯವಸ್ಥೆಯ ಆಂತರಿಕವಾಗಿ ಸಂಪರ್ಕ ಹೊಂದಿದ ಘಟಕಗಳಾಗಿರಬೇಕು.
► ಸಿಸಿ ಕ್ಯಾಮರಾ ಕಣ್ಗಾವಲು ಜಾಲವು ಪ್ರಾಥಮಿಕ ದತ್ತಾಂಶ ಸಂಗ್ರಹಣೆ ಮತ್ತು ಜಾರಿ ಸಂವೇದಕ ಜಾಲವಾಗಿ ಕಾರ್ಯನಿರ್ವಹಿಸಬೇಕು. ಹೊಸ ವ್ಯವಸ್ಥೆ ವಿಶ್ಲೇಷಣಾತ್ಮಕ ಮತ್ತು ಕಾರ್ಯಾಚರಣೆಯ ಮಾಡ್ಯೂಲ್‌ಗಳಿಗೆ ನಿರ್ಣಾಯಕ ಮತ್ತು ನೈಜ ಸಮಯದ (ರಿಯಲ್ ಟೈಮ್) ಮಾಹಿತಿ ನೀಡಬೇಕು.
► ನಗರದ ನಾಗರಿಕರು ಕಸ ಸುರಿಯುವ ಬ್ಲ್ಯಾಕ್ ಸ್ಪಾಟ್‌ಗಳ ಬಗ್ಗೆ ಅಪ್ಲಿಕೇಷನ್ ಮೂಲಕ ಮಾಹಿತಿ ನೀಡಿದರೆ ಅದರ ಮೇಲೆ ಕಣ್ಗಾವಲು ಇಡುವ ವ್ಯವಸ್ಥೆಯಾಗಬೇಕು. ಸಿಸಿ ಕ್ಯಾಮರಾ ನೆಟ್ವರ್ಕ್ ಸೆರೆಹಿಡಿದ ಚಿತ್ರಗಳ ಆಧಾರದಲ್ಲಿ ಸಾಕ್ಷಿ ಸಂಗ್ರಹಿಸಿ, ಅಂಥವರ ವಿರುದ್ಧ ಡಿಜಿಟಲ್ ಪ್ಲಾಟ್‌ಫಾರ್ಮ್‌ನ ಜಾರಿ ಮಾದರಿಗಳ ಮೂಲಕ ದಂಡ ವಿಧಿಸಬೇಕು ಮತ್ತು ಅಂಥ ಜಾಗಗಳ ಮೇಲೆ ನಿರಂತರ ಕಣ್ಣಿಡಬೇಕು.
ಮೇಲ್ವಿಚಾರಣಾ ಸಮಿತಿ ರಚನೆಗೆ ಸೂಚನೆ:
ಇದೇ ವೇಳೆ, 'ನೋಡಲ್ ಮೇಲ್ವಿಚಾರಣಾ ಮತ್ತು ಅನುಷ್ಠಾನ ಸಮಿತಿ' ರಚಿಸುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿರುವ ಹೈಕೋರ್ಟ್, ಅದರ ಸಂಯೋಜನೆಯು ನ್ಯಾಯವ್ಯಾಪ್ತಿಯ ಸಂಘರ್ಷಗಳನ್ನು ಪೂರ್ವಭಾವಿಯಾಗಿ ನಿವಾರಿಸಲು ಮತ್ತು ಸಂಕೀರ್ಣ ನಗರ ಯೋಜನೆಗಳಿಗೆ ಅಡ್ಡಿಯಾಗುವ ಅಧಿಕಾರಶಾಹಿ ಅಡೆತಡೆಗಳನ್ನು ನಿವಾರಿಸುವಂತಿರಬೇಕು ಎಂದು ಸೂಚಿಸಿದೆ.
ಹೊಸ ಟೆಂಡರ್‌ಗೆ ಹೈಕೋರ್ಟ್ ಅಸ್ತು:
ಬೆಂಗಳೂರು ನಗರದ ಘನ ತ್ಯಾಜ್ಯ ವಿಲೇವಾರಿಗೆ ಸರಕಾರ 2025ರ ಜುಲೈ 30ರಂದು ಹೊಸದಾಗಿ ಕರೆದಿದ್ದ ಟೆಂಡರ್‌ಗೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ.
ಹೊಸ ಟೆಂಡರ್ ನಿಯಮ ಹಾಗೂ ಷರತ್ತುಗಳನ್ನು ಪ್ರಶ್ನಿಸಿ ಹಲವು ಮಂದಿ ಹಾಲಿ ಗುತ್ತಿಗೆದಾರರು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಸರಕಾರಕ್ಕೆ ಟೆಂಡರ್ ಪ್ರಕ್ರಿಯೆಗಳನ್ನು ಮುಂದುವರಿಸಲು ಅವಕಾಶ ನೀಡಿದೆ.
ವಾರ್ಡ್‌ವಾರು ಇದ್ದ ಟೆಂಡರ್ ಪ್ರಕ್ರಿಯೆಯನ್ನು ಹಲವು ವಾರ್ಡ್‌ಗಳಿಗೆ ವಿಸ್ತರಿಸಿರುವ ಕ್ರಮ ಏಕಪಕ್ಷೀಯ ಅಥವಾ ಕಾರಣರಹಿತ ಎಂದು ಹೇಳಲಾಗದು. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಟೆಂಡರ್ ನಿಯಮಗಳಲ್ಲಿ ಹಣಕಾಸು ಮತ್ತು ತಾಂತ್ರಿಕ ಅಗತ್ಯತೆಗಳಲ್ಲಿ ಬದಲಾವಣೆಯು ಅರ್ಜಿದಾರರು ಒಟ್ಟಾಗಿ ಸೇರಿ ಟೆಂಡರ್ ಸಲ್ಲಿಕೆಗೆ ಯಾವುದೇ ಅಡ್ಡಿ ಮಾಡುವುದಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಇದೇ ವೇಳೆ, ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಗುತ್ತಿಗೆದಾರರಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಟೆಂಡರ್‌ಗೆ ನಿಗದಿಪಡಿಸಿರುವ ದಿನಾಂಕವನ್ನು ನವೆಂಬರ್ 10ರವರೆಗೆ ವಿಸ್ತರಣೆ ಮಾಡಬೇಕು ಎಂದು ನ್ಯಾಯಪೀಠ ಸರಕಾರಕ್ಕೆ ನಿರ್ದೇಶಿಸಿದೆ.







