ಪರೋಲ್‌ಗಾಗಿ ಕೈದಿಗಳಿಗೆ ಸುಳ್ಳು ದಾಖಲೆ ನೀಡುವ ವೈದ್ಯರ ಬಗ್ಗೆ ಗಮನವಿರಲಿ; ಸರಕಾರಕ್ಕೆ ಹೈಕೋರ್ಟ್ ಮೌಖಿಕ ಸೂಚನೆ

ಬೆಂಗಳೂರು : ಸಜಾಬಂದಿಗಳಿಗೆ ಪರೋಲ್ ಪಡೆಯಲು ಅನುಕೂಲವಾಗುವಂತೆ ಸುಳ್ಳು ವೈದ್ಯಕೀಯ ದಾಖಲೆಗಳನ್ನು ನೀಡುತ್ತಿರುವ ವೈದ್ಯರ ಬಗ್ಗೆ ಸರಕಾರ ಗಮನ ಹರಿಸಬೇಕು ಎಂದು ಹೈಕೋರ್ಟ್ ಮೌಖಿಕ ಸೂಚನೆ ನೀಡಿದೆ.
ಅನಾರೋಗ್ಯಪೀಡಿತ ತಾಯಿಗೆ ಚಿಕಿತ್ಸೆ ಕಲ್ಪಿಸಲು ಪರೋಲ್ ಮಂಜೂರು ಮಾಡುವಂತೆ ಕೋರಿ ಅಪರಾಧ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸಜಾಬಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸೂಚನೆ ನೀಡಿತು. ಇದೇ ವೇಳೆ, ಅರ್ಜಿದಾರನ ತಾಯಿಯ ಅನಾರೋಗ್ಯವನ್ನು ಪರಿಗಣಿಸಿ, ಆತನಿಗೆ ಪರೋಲ್ ಮಂಜೂರು ಮಾಡಿ ಆದೇಶಿಸಿತು.
ಇದಕ್ಕೂ ಮುನ್ನ ವಿಚಾರಣೆ ವೇಳೆ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯ ವೈದ್ಯಕೀಯ ದಾಖಲೆ ಆಧರಿಸಿ ಪರೋಲ್ ನೀಡಬೇಕೆಂದು ಅರ್ಜಿದಾರನ ಪರ ವಕೀಲರು ಮನವಿ ಮಾಡಿದರು. ಆಗ ಸರಕಾರದ ಪರ ವಕೀಲರು, ಹಲವು ಪ್ರಕರಣಗಳಲ್ಲಿ ಪರೋಲ್ ಕೋರುವ ಸಜಾಬಂದಿಗಳು, ತಮ್ಮ ಅರ್ಜಿಯೊಂದಿಗೆ ಸಲ್ಲಿಸಿದ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಒಂದೇ ರೀತಿಯ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿರುವ ಸಂಗತಿ ಗಮನಕ್ಕೆ ಬಂದಿದೆ ಎಂದು ಹೇಳಿದರು.
ಸುಳ್ಳು ದಾಖಲೆ ನೀಡುವ ವೈದ್ಯರ ಬಗ್ಗೆ ಎಚ್ಚರವಹಿಸಿ:
ಸರಕಾರದ ಪರ ವಕೀಲರ ಹೇಳಿಕೆಗೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಒಂದೇ ರೀತಿಯ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಲಾಗುತ್ತಿದೆಯೇ? ಇದು ನಿಜಕ್ಕೂ ಆಘಾತಕಾರಿ ವಿಚಾರ ಎಂದು ಕಳವಳ ವ್ಯಕ್ತಪಡಿಸಿದರಲ್ಲದೆ, ಯಾವೆಲ್ಲ ಪ್ರಕರಣಗಳಲ್ಲಿ ಒಂದೇ ತರಹದ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಲಾಗಿದೆ? ಅಂತಹ ದಾಖಲೆಗಳನ್ನು ಯಾವ ವೈದ್ಯರು ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿಯನ್ನು ಕಲೆಹಾಕಿ ನ್ಯಾಯಾಲಯಕ್ಕೆ ಸಲ್ಲಿಸಿ. ಆ ಕುರಿತು ಸಮಗ್ರ ತನಿಖೆಗೆ ಆದೇಶಿಸಲಾಗುವುದು. ಇಂತಹ ವಿಚಾರದಲ್ಲಿ ಸುಮ್ಮನೆ ಇರಬಾರದು ಎಂದು ತೀಕ್ಷ್ಣವಾಗಿ ನುಡಿದರು.
ಈ ಕುರಿತು ರಾಜ್ಯ ಅಡ್ವೋಕೇಟ್ ಜನರಲ್ ಅವರ ಗಮನಕ್ಕೆ ತರಲಾಗುವುದು ಎಂದು ಸರಕಾರದ ಪರ ವಕೀಲರು ತಿಳಿಸಿದರು. ಆಗ ನ್ಯಾಯಪೀಠ, ಸುಳ್ಳು ವೈದ್ಯಕೀಯ ದಾಖಲೆಗಳ್ಳನ್ನು ಸಲ್ಲಿಸಿ ಪರೋಲ್ ಪಡೆಯವುದು ಸರಿಯಲ್ಲ. ಇದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ. ಇಂತಹ ಬೆಳವಣಿಗೆಗಳ ಮೇಲೆ ರಾಜ್ಯ ಸರಕಾರ ಕಣ್ಣಿಡಬೇಕು. ಸುಳ್ಳು ವೈದ್ಯಕೀಯ ದಾಖಲೆಗಳನ್ನು ವಿತರಿಸುವ ವೈದ್ಯರ ಬಗ್ಗೆ ಎಚ್ಚರಿಸಬೇಕು. ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೌಖಿಕವಾಗಿ ಸೂಚಿಸಿತು.







