ಗೋಸಾಗಣೆ ಪ್ರಕರಣದಲ್ಲಿ ಮಹಿಳೆಯ ಮನೆ ಜಪ್ತಿ; ಧರ್ಮಸ್ಥಳ ಪೊಲೀಸರಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು : ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣದಲ್ಲಿ ಸಜಿಪ ಗ್ರಾಮದಲ್ಲಿ ಮಹಿಳೆಯೊಬ್ಬರ ಮನೆ ಜಪ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆ ಪೊಲೀಸರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಧರ್ಮಸ್ಥಳ ಠಾಣೆ ಪೋಲಿಸರು ನವೆಂಬರ್ 4ರಂದು ನೀಡಿದ್ದ ನೋಟಿಸ್ ರದ್ದುಕೋರಿ ಬಂಟ್ವಾಳ ತಾಲೂಕಿನ ಸಜಿಪ ಗ್ರಾಮದ ನಿವಾಸಿ ಬೀಫಾತುಮ್ಮ (57) ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ, ಧರ್ಮಸ್ಥಳ ಪೊಲೀಸ್ ಠಾಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಗೋಸಾಗಣೆ ಆರೋಪಿಗಳಿಗೂ ಅರ್ಜಿದಾರೆಗೂ ಯಾವುದೇ ಸಂಪರ್ಕವಿಲ್ಲ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಅರ್ಜಿದಾರೆ ಆರೋಪಿಯೂ ಆಗಿಲ್ಲ. ಹೀಗಿದ್ದರೂ, ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-2020ರ ಸೆಕ್ಷನ್ 8(1) ಅಡಿಯಲ್ಲಿ ಅರ್ಜಿದಾರರ ಮನೆ ಜಪ್ತಿಗೆ ಧರ್ಮಸ್ಥಳ ಠಾಣೆ ಪೊಲೀಸರು ನೋಟಿಸ್ ಜಾರಿಗೊಳಿಸಿ, ಜಪ್ತಿ ಮಾಡಿದ್ದರು ಎಂದು ಆಕ್ಷೇಪಿಸಿದರು.
ಅರ್ಜಿದಾರರ ಮನೆ ಜಪ್ತಿಗೆ ಯಾವ ಆಧಾರದಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ ಎಂಬ ಬಗ್ಗೆ ವಿವರಣೆ ನೀಡಲು ಸರಕಾರದ ಪರ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಿತು.
ಪ್ರಕರಣವೇನು?
ನವೆಂಬರ್ 2ರಂದು ಪಟ್ಟೂರಿನಿಂದ ಕೊಕ್ಕಡ ಕಡೆಗೆ ಸಂಶಯಾಸ್ಪದವಾಗಿ ಬರುತ್ತಿದ್ದ ಕಾರೊಂದನ್ನು ತಡೆದು ಪೊಲೀಸರು ಪರಿಶೀಲಿಸಿದ್ದರು. ಈ ವೇಳೆ ಕಾರಿನ ಹಿಂಬದಿಯಲ್ಲಿ ಮೂರು ಕರುಗಳು ಕಂಡು ಬಂದಿದ್ದವು. ಜಾನುವಾರುಗಳ ಸಾಗಣೆಗೆ ಯಾವುದೇ ಪರವಾನಗಿಯೂ ಇರಲಿಲ್ಲ. ಈ ಬಗ್ಗೆ ಕಾರಿನಲ್ಲಿದ್ದ ಮಹಮ್ಮದ್ ಸಿನಾನ್ ಹಾಗೂ ಇಬ್ರಾಹಿಂ ಖಲೀಲ್ ಅವರನ್ನು ವಿಚಾರಿಸಲಾಗಿ ಪಟ್ರಮೆ ಗ್ರಾಮದ ಜೋಹಾರ ಎಂಬ ಮಹಿಳೆಯ ಮನೆಯಿಂದ ಕರುಗಳನ್ನು ಖರೀದಿಸಿದ್ದಾಗಿ ತಿಳಿಸಿದ್ದರು.
ಪ್ರಕರಣ ಸಂಬಂಧ ಮಹಮ್ಮದ್ ಸಿನಾನ್, ಇಬ್ರಾಹಿಂ ಖಲೀಲ್ ಹಾಗೂ ಜೋಹಾರ ವಿರುದ್ಧ ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-2020 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದೇ ಪ್ರಕರಣದಲ್ಲಿ ಆರೋಪಿಯೊಬ್ಬರ ತಾಯಿ ಅರ್ಜಿದಾರೆ ಬೀಫಾತುಮ್ಮ ಅವರಿಗೆ ನವೆಂಬರ್ 4ರಂದು ಮನೆ ಜಪ್ತಿಗೆ ನೋಟಿಸ್ ನೀಡಿ ಮನೆ ಜಪ್ತಿ ಮಾಡಲಾಗಿದ್ದು, ಇದರಿಂದ, ಜಪ್ತಿ ರದ್ದು ಕೋರಿ ಬೀಫಾತುಮ್ಮ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರೆಯ ಪರವಾಗಿ ವಕೀರಲಾದ ಮಹಮ್ಮದ್ ಮುಸ್ತಫಾ, ಅನ್ವರ್ ಕೆ.ಪಿ ಹಾಗೂ ಎಸ್.ಜಿ.ಅಫ್ರೀಝ್ ಸಜಿಪ ವಾದ ಮಂಡಿಸಿದರು.







