ಹೈಕೋರ್ಟ್ ಕಟ್ಟಡಕ್ಕೆ ಭೂಮಿ ಮಂಜೂರಾತಿಗೆ ಕೋರಿ ಪಿಐಎಲ್; ರಾಜ್ಯ ಸರಕಾರ, ರಿಜಿಸ್ಟ್ರಾರ್ ಜನರಲ್‌ಗೆ ನೋಟಿಸ್

ಬೆಂಗಳೂರು : ರಾಜ್ಯ ಹೈಕೋರ್ಟ್‌ನ ಹೊಸ ಕಟ್ಟಡ ಸಂಕೀರ್ಣ ನಿರ್ಮಾಣಕ್ಕಾಗಿ ನಗರದ ಕೇಂದ್ರ ಭಾಗದಲ್ಲಿ 30 ಎಕರೆ ಅಥವಾ ಅದಕ್ಕಿಂತ ಅಧಿಕ ಭೂಮಿ ನೀಡಲು ನಿರ್ದೇಶನ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರಕಾರ ಮತ್ತು ರಿಜಿಸ್ಟ್ರಾರ್ ಜನರಲ್‌ಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರಿನ ಶರಣ್ ದೇಸಾಯಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮಾರ್ಚ್ 23ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಖುದ್ದು ವಾದ ಮಂಡಿಸಿದ ಅರ್ಜಿದಾರರು, ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕೋರ್ಟ್‌ನ ನೂತನ ಸಂಕೀರ್ಣ ನಿರ್ಮಾಣ ಮಾಡಲು ನಗರದ ಸೆಂಟ್ರಲ್ ಬಿಸಿನೆಸ್ ಜಿಲ್ಲೆಯಲ್ಲಿ(ಸಿಬಿಡಿ) ಭೂಮಿ ಮಂಜೂರು ಮಾಡುವ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಕಬ್ಬನ್ ಪಾರ್ಕ್‌ನಲ್ಲಿ 2025ರ ಅಕ್ಟೋಬರ್ 26ರಂದು ನಡೆದ 'ವಾಕ್ ವಿತ್ ಬೆಂಗಳೂರು' ನಾಗರಿಕ ಸಂಪರ್ಕ ಕಾರ್ಯಕ್ರಮದ ಸಂದರ್ಭದಲ್ಲಿ ಶಿವಕುಮಾರ್ ಅವರು ಪ್ರಸ್ತುತ ಹೈಕೋರ್ಟ್ ಆವರಣದಲ್ಲಿ ಸ್ಥಳಾವಕಾಶದ ಕೊರತೆ ಇದೆ. ಆದ್ದರಿಂದ, ಕರ್ನಾಟಕ ಹೈಕೋರ್ಟನ್ನು ಹೊಸ ಮತ್ತು ದೊಡ್ಡ ಸ್ಥಳಕ್ಕೆ ಸ್ಥಳಾಂತರಿಸುವ ಸಾಧ್ಯತೆಯನ್ನು ಸರಕಾರ ಪರಿಶೀಲಿಸುತ್ತಿದೆ ಎಂದು ಹೇಳಿದ್ದರೆಂದು ವರದಿಯಾಗಿತ್ತು.







