ಎಸ್‌ಸಿ-ಎಸ್‌ಟಿ ಮೀಸಲಾತಿ | ಶೇ.50ರ ಮೀಸಲಾತಿ ಅನ್ವಯ ನೇಮಕಾತಿಗೆ ಆಕ್ಷೇಪವಿಲ್ಲ : ಹೈಕೋರ್ಟ್

ಬೆಂಗಳೂರು : ಚಾಲ್ತಿಯಲ್ಲಿರುವ ಶೇ.50ರ ಮೀಸಲಾತಿಯ ಅನ್ವಯ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಸುವ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಮೀಸಲಾತಿ ಹೆಚ್ಚಿಸಿರುವುದರ (ಶೇ.56) ಅನುಸಾರ ಹೊಸದಾಗಿ ಅಧಿಸೂಚನೆ ಹೊರಡಿಸಕೂಡದು ಎಂದು ಪುನರುಚ್ಚರಿಸಿರುವ ಹೈಕೋರ್ಟ್, ಮಧ್ಯಂತರ ವ್ಯವಸ್ಥೆಗೆ ಸಂಬಂಧಿಸಿದಂತೆ ಮತ್ತು ಅಗತ್ಯಬಿದ್ದರೆ ಸೂಕ್ತ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಅನುಮತಿಸಿದೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ, ಎಸ್‌ಟಿ) ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ ಒಟ್ಟು ಮೀಸಲು ಪ್ರಮಾಣವನ್ನು ಶೇ. 50ರಿಂದ 56ಕ್ಕೆ ಹೆಚ್ಚಿಸಿರುವುದನ್ನು ಆಕ್ಷೇಪಿಸಿ ಡಾ. ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರ ಕುಮಾರ್ ಮಿತ್ರಾ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಮೀಸಲಾತಿ ಹೆಚ್ಚಿಸಿರುವ ಮಧ್ಯಪ್ರದೇಶ ಸರಕಾರದ ಆದೇಶ ಪ್ರಶ್ನಿಸಿರುವ ಅರ್ಜಿ ಸುಪ್ರೀಂಕೋರ್ಟ್‌ಗೆ ವರ್ಗಾವಣೆಯಾಗಿದ್ದು, ಅದರ ವಿಚಾರಣೆಯು ಈ ತಿಂಗಳು ನಡೆಯಲಿದೆ. ಇಲ್ಲಿ ಸುಪ್ರೀಂಕೋರ್ಟ್ ಆದೇಶಕ್ಕಾಗಿ ಕಾಯಲಾಗುತ್ತಿದೆ ಎಂದು ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ತಿಳಿಸಿದ್ದಾರೆ. ಮಧ್ಯಂತರ ವ್ಯವಸ್ಥೆಗೆ ಸಂಬಂಧಿಸಿದಂತೆ ಅಡ್ವೊಕೇಟ್ ಜನರಲ್ ಅವರು ಸೂಚನೆ ಪಡೆಯಲು ಮತ್ತು ಅಗತ್ಯಬಿದ್ದರೆ ಸೂಕ್ತ ಅರ್ಜಿ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಇದಕ್ಕೆ ಅನುಮತಿಸಲಾಗಿದೆ ಎಂದು ತಿಳಿಸಿದ ನ್ಯಾಯಪೀಠ, ವಿಚಾರಣೆಯನ್ನು ಫೆಬ್ರವರಿ 12ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ವಾದ ಮಂಡಿಸಿದ ಅಡ್ವೊಕೇಟ್ ಜನರಲ್, ಮೀಸಲಾತಿ ಹೆಚ್ಚಿಸಿರುವ ಮಧ್ಯಪ್ರದೇಶದ ರಿಟ್ ಅರ್ಜಿಯು ಸುಪ್ರೀಂಕೋರ್ಟ್‌ಗೆ ವರ್ಗಾವಣೆಯಾಗಿದೆ. ಇದರ ವಿಚಾರಣೆಯನ್ನು ಇದೇ ಜನವರಿಯಲ್ಲಿ ನಡೆಸಲಾಗುವುದು ಎಂದು ಸುಪ್ರೀಂಕೋರ್ಟದ ಹೇಳಿದೆ. ಶೇ.50ರ ಮೀಸಲಾತಿಯಲ್ಲಿ ನೇಮಕಾತಿ ಮುಂದುವರಿಸುತ್ತೇವೆ. ನ್ಯಾಯಾಲಯ ಹಾಲಿ ಅರ್ಜಿಗಳನ್ನು ನಿರ್ಧರಿಸುವವರೆಗೆ ಹೆಚ್ಚುವರಿ ಶೇ. 6 ಮೀಸಲಾತಿ ಅನ್ವಯಿಸುವುದಿಲ್ಲ. ಆಯ್ಕೆ ಪ್ರಕ್ರಿಯೆ ಮುಂದುವರಿಸಲು ಅವಕಾಶ ನೀಡಬೇಕು. ಶೇ.56ರ ಮೀಸಲಾತಿ ಪ್ರಕಾರ ನೇಮಕಾತಿ ನಡೆಸುತ್ತೇವೆ. ಶೇ.50ಕ್ಕೆ ಮಾತ್ರ ನೇಮಕಾತಿ ಆದೇಶ ನೀಡಿ, ಉಳಿದ ಶೇ.6ಕ್ಕೆ ನ್ಯಾಯಾಲಯ ನಿರ್ಧಾರ ಮಾಡಿದ ಬಳಿಕ ಆದೇಶ ನೀಡಲಾಗುವುದು ಎಂದರು.
ಆಗ ನ್ಯಾಯಪೀಠ, ಹಿಂದಿನ ಅಧಿಸೂಚನೆಯಡಿ ನೇಮಕಾತಿ ನಡೆಸಬಹುದು. ಶೇ.50 ಮೀಸಲಾತಿ ನೇಮಕಾತಿಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಮೀಸಲಾತಿ ಹೆಚ್ಚಿಸಿ, ನೇಮಕಾತಿ ನಡೆಸುವುದಾದರೆ ನೇಮಕಾತಿಯನ್ನೇ ಮಾಡಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ. ಅದು ಸರ್ಕಾರಕ್ಕೆ ಇರುವ ಆಯ್ಕೆಯಾಗಿದೆ. ಶೇ.50 ಮೀರಿದ ಹೆಚ್ಚುವರಿ ಮೀಸಲಾತಿ ಅನ್ವಯ ನೇಮಕಾತಿಗೆ ಅನುಮತಿಸುವುದಿಲ್ಲ. ಆದರೆ, ಸರ್ಕಾರ ನೇಮಕಾತಿ ನಡೆಸಲೇಬೇಕಿದೆ ಎಂದು ಹೇಳಿತು.
ಒಂದು ಹಂತದಲ್ಲಿ ನ್ಯಾಯಪೀಠ, ಶೇ.94 ನೇಮಕಾತಿಗೆ ಅಧಿಸೂಚನೆ ಹೊರಡಿಸುತ್ತೇವೆ. ಶೇಕಡ 6ರಷ್ಟು ನೇಮಕಾತಿ ಮಾಡುವುದಿಲ್ಲ. ಅಂತಿಮ ತೀರ್ಪಿನ ನಂತರ ಶೇ. 6% ನೇಮಕಾತಿಯನ್ನು ನ್ಯಾಯಾಲಯದ ಆದೇಶದಂತೆ ಕೈಗೊಳ್ಳುವುದಾಗಿ ಅಫಿಡವಿಟ್ ಸಲ್ಲಿಸಿದಲ್ಲಿ ಪರಿಶೀಲಿಸಲಾಗುವುದು ಎಂದು ಹೇಳಿತು. ಈ ಕುರಿತು ಸರ್ಕಾರದಿಂದ ಸೂಚನೆ ಪಡೆಯಲಾಗುವುದು ಎಂದು ಅಡ್ವೊಕೇಟ್ ಜನರಲ್ ತಿಳಿಸಿದರು.
ಅರ್ಜಿದಾರರ ಪರ ವಕೀಲ ರಂಗನಾಥ್ ಜೋಯಿಷ್ ವಾದ ಮಂಡಿಸಿ, ಶೇ.50 ಮೀಸಲಾತಿ ಮೀರಿರುವುದಕ್ಕೆ ಈ ಹಿಂದೆ ಸುಪ್ರೀಂಕೋರ್ಟ್ ಅನುಮತಿಸಿಲ್ಲ. ಶೇ.50 ಮೀರಿ ಮೀಸಲಾತಿ ನೀಡುತ್ತೇವೆ. ಆನಂತರ ಅದನ್ನು ಸರಿಪಡಿಸಲಾಗುವುದು ಎಂದು ಸರ್ಕಾರ ಹೇಳುತ್ತಿದೆ. ಅಕ್ರಮ ನೇಮಕಾತಿ ಮಾಡಿ, ಆನಂತರ ಅದನ್ನು ಸರಿಪಡಿಸುವ ಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಆಕ್ಷೇಪಿಸಿದರಲ್ಲದೆ, ಕಾಯ್ದೆ ಸೆಕ್ಷನ್ 6ರ ಅಡಿ ನಿಯಮ ರೂಪಿಸಬೇಕು. ಕಾಯ್ದೆ ಅನ್ವಯ ಮೀಸಲಾತಿ ಹೆಚ್ಚಿಸಿದರೂ ಅದನ್ನು ಜಾರಿಗೊಳಿಸಲು ನಿಯಮ ರೂಪಿಸಲೇಬೇಕು. ನಿಯಮ ರೂಪಿಸದೇ ಅಧಿಸೂಚನೆ ಹೇಗೆ ಪ್ರಕಟಿಸಲಾಗುತ್ತದೆ? ಎಂದರು.
ಅರ್ಜಿದಾರರ ಪರ ಮತ್ತೊಬ್ಬ ವಕೀಲ ನಚಿಕೇತ್ ಜೋಶಿ ವಾದ ಮಂಡಿಸಿ, ಹಾಲಿ ಅರ್ಜಿ ಇತ್ಯರ್ಥವಾಗುವವರೆಗೆ ಮೀಸಲಾತಿ ಹೆಚ್ಚಿಸಿರುವುದನ್ನು ಆಧರಿಸಿ ನೇಮಕಾತಿ, ಆಯ್ಕೆ ಮಾಡುವ ಸಂಬಂಧ ಯಾವುದೇ ಅಧಿಸೂಚನೆ ಹೊರಡಿಸಕೂಡದು ಎಂದು ಹೈಕೋರ್ಟ್ ಈ ಹಿಂದೆಯೇ ಆದೇಶ ಮಾಡಿತ್ತು. ಇದರ ಮರುಪರಿಶೀಲನೆ, ಮಾರ್ಪಾಡು ಅಥವಾ ಅದನ್ನು ಪ್ರಶ್ನಿಸಲಾಗಿಲ್ಲ. ಈಗ ಮಧ್ಯಂತರ ಅರ್ಜಿಯ ಮೂಲಕ ಇದರ ಮಾರ್ಪಾಡು ಕೋರಲಾಗಿದೆ. ಶೇ.50ರ ಮೀಸಲಾತಿಯ ಪ್ರಕಾರ ನೇಮಕಾತಿ ನಡೆಯಲಿ, ಉಳಿದ ಶೇ.6-7ಕ್ಕೆ ನ್ಯಾಯಾಲಯ ರಿಟ್ ನಿರ್ಧರಿಸಿದ ಬಳಿಕ ನೇಮಕಾತಿ ನಡೆಸಬಹುದು ಎಂದರು.







