ಗೃಹ ಸಚಿವರೇ ಅಸಹಾಯಕರಾದರೆ ಸರ್ಕಾರ ಅಕ್ರಮ ಮರಳು ಗಣಿಗಾರಿಕೆ ತಡೆಯುವುದೆಂಬ ಭರವಸೆ ಉಳಿಯದು : ಹೈಕೋರ್ಟ್

ಬೆಂಗಳೂರು : ಮರಳು ಅಕ್ರಮ ದಂಧೆಗೆ ಕಡಿವಾಣ ಹಾಕಲು ರಾಜ್ಯದ ಗೃಹ ಸಚಿವರೇ ಅಸಹಾಯಕತೆ ವ್ಯಕ್ತಪಡಿಸಿದರೆ ರಾಜ್ಯ ಸರ್ಕಾರವು ಅದಕ್ಕೆ ಕಡಿವಾಣ ಹಾಕಲಿದೆ ಎಂಬ ಭರವಸೆ ಹೊಂದಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ಇದೊಂದು ಗಂಭೀರ ವಿಚಾರವಾಗಿರುವುದರಿಂದ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಕೇಂದ್ರೀಯ ಸಂಸ್ಥೆ ಅಥವಾ ವಿಶೇಷ ತನಿಖಾ ಸಂಸ್ಥೆಯಿಂದ ತನಿಖೆ (ಎಸ್‌ಐಟಿ) ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದೆ.
ಗೃಹ ಸಚಿವ ಜಿ. ಪರಮೇಶ್ವರ್ ಅವರು ಜನವರಿ 27ರಂದು ಅಧಿವೇಶನದಲ್ಲಿ ಮಾತನಾಡುತ್ತಾ, ರಾಜ್ಯದಲ್ಲಿ ಪಕ್ಷಾತೀತವಾಗಿ ಹಲವು ಪ್ರಭಾವಿಗಳು ಮರಳು ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ನೀಡಿರುವ ಹೇಳಿಕೆ ಕುರಿತು ಜನವರಿ 28ರಂದು ಮಾಧ್ಯಮಗಳು ಪ್ರಕಟಿಸಿರು ವರದಿಯನ್ನು ಉಲ್ಲೇಖಿಸಿ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ತಾರಾ ವಿತಾಸ್ತಾ ಗಂಜು ಅವರ ವಿಭಾಗೀಯ ನ್ಯಾಯಪೀಠ, ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲು ರಿಜಿಸ್ಟ್ರಿಗೆ ನಿರ್ದೇಶಿಸಿದೆ.
ಇದೇ ವೇಳೆ, ಪ್ರತಿವಾದಿಗಳಾದ ರಾಜ್ಯ ಗೃಹ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ ಮತ್ತು ಪರಿಸರ ಇಲಾಖೆಯ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಪೀಠ, 3 ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿದೆ. ಜತೆಗೆ, ಪ್ರಕರಣ ದಾಖಲಿಸಿದ ಬಳಿಕ ಸ್ವಯಂಪ್ರೇರಿತ ಪಿಐಎಲ್ ಅನ್ನು ಸೂಕ್ತ ಪೀಠ ವಿಚಾರಣೆ ನಡೆಸಲು ನಿರ್ದೇಶಿಸಲು ಮುಖ್ಯ ನ್ಯಾಯಮೂರ್ತಿಗಳ ಮುಂದಿಡುವಂತೆ ನಿರ್ದೇಶಿಸಿದೆ.
ಗೃಹ ಸಚಿವ ಜಿ ಪರಮೇಶ್ವರ್ ಅವರು, ಮರಳು ಅಕ್ರಮ ಸಾಗಣೆಯು ದೊಡ್ಡ ರ್ಯಾಕೆಟ್ ಆಗಿದ್ದು, ಅದರಲ್ಲಿ ಹಲವು ಪ್ರಭಾವಿಗಳು ಭಾಗಿಯಾಗಿದ್ದಾರೆ. ಇಲ್ಲಿ ನಾನು ಯಾರ ಹೆಸರನ್ನೂ ಹೇಳುತ್ತಿಲ್ಲ. ಏಕೆಂದರೆ ಅದು ಮುಜುಗರ ಉಂಟು ಮಾಡುತ್ತದೆ. ಸೀಮಿತ ಉತ್ತರ ನೀಡಿದ್ದು, ಈ ದಂಧೆಯಲ್ಲಿ ಹಲವು ಪ್ರಭಾವಿಗಳಿದ್ದಾರೆ. ಈ ಕುರಿತು ಚರ್ಚಿಸಲು ಸಭೆ ನಡೆಸಲಾಗುವುದು ಎಂದು ಹೇಳಿರುವುದನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಮರಳು ಗಣಿಗಾರಿಕೆ ನಡೆಸಲು ಬಿಡ್ ಆಹ್ವಾನಿಸಲಾಗಿದೆ. ಆದರೆ, ಅವುಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಹಣದ ಹೊಳೆ ಹರಿಸುವ ಈ ರ್ಯಾಕೆಟ್‌ನಲ್ಲಿ ದೊಡ್ಡ ತಿಮಿಂಗಿಲಗಳು ಭಾಗಿಯಾಗಿದ್ದು, ಮರಳು ಗಣಿಗಾರಿಕೆಯನ್ನು ಕಾನೂನಾತ್ಮಕಗೊಳಿಸುವುದು ಅವರಿಗೆ ಇಷ್ಟವಿಲ್ಲ. ಮರಳು ಗಣಿಗಾರಿಕೆಯ ಗುತ್ತಿಗೆಗಾರಿಗೆ ನೀಡಿದರೆ, ಹಣವು ಸರ್ಕಾರದ ಬೊಕ್ಕಸಕ್ಕೆ ಹೋಗಲಿದ್ದು, ಮಾಫಿಯಾಗಳಿಗೆ ಅಕ್ರಮ ಹಣ ಸಂದಾಯವಾಗುವುದು ನಿಂತು ಹೋಗಲಿದೆ ಎಂದು ವರದಿ ಮಾಡಲಾಗಿದೆ ಎಂದೂ ಆದೇಶದಲ್ಲಿ ದಾಖಲಿಸಲಾಗಿದೆ.
ರಾತ್ರಿ ವೇಳೆಯಲ್ಲಿ ಕೃಷ್ಣಾ ನದಿ ತೀರದಲ್ಲಿ ಮರಳು ಅಕ್ರಮ ಸಾಗಣೆ ನಡೆಯುತ್ತಿದ್ದು, ಇದರಿಂದ ಬೆಳೆಗಳ ಮೇಲೆ ಧೂಳು ಕುಳಿತು ಫಸಲಿಗೆ ಹಾನಿಯಾಗುತ್ತಿದೆ ಎಂದು ರೈತರು ದೂರುತ್ತಿದ್ದಾರೆ. ವಿಶೇಷ ಕಾರ್ಯಾಚರಣಾ ದಳವು (ಎಸ್‌ಟಿಎಫ್) ನೆಪಮಾತ್ರಕ್ಕೆ ಉಳಿದಿದೆ. ಮರಳು ಅಕ್ರಮ ಗಣಿಗಾರಿಕೆ ನಡೆಯುವ ಜಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸದಿರುವುದು ಹಾಗೂ ಚೆಕ್ ಪೋಸ್ಟ್‌ಗಳು ಇಲ್ಲದೇ ಇರುವುದರಿಂದ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವ ವಾಹನಗಳಿಂದ ಹಲವು ಸಾವುಗಳು ಸಂಭವಿಸಿವೆ. ರಾಯಚೂರು ಜಿಲ್ಲೆಯ ಮಹಿಳಾ ವಿಧಾನಸಭಾ ಸದಸ್ಯರೊಬ್ಬರು ಮರಳು ಮಾಫಿಯಾ ವಿಚಾರದ ಬಗ್ಗೆ ಧ್ವನಿ ಎತ್ತಿದ್ದಕ್ಕೆ ತಮಗೆ ಜೀವ ಬೆದರಿಕೆ ಇರುವುದರ ಕುರಿತು ದೂರಿದ್ದಾರೆ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.







