ಹುಬ್ಬಳ್ಳಿಯಲ್ಲಿ ವಲಸೆ ಕಾರ್ಮಿಕನ ಎನ್ಕೌಂಟರ್; ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದ ಹೈಕೋರ್ಟ್

ಸಾಂದರ್ಭಿಕ ಚಿತ್ರ | PC : judiciary.karnataka.gov.in
ಬೆಂಗಳೂರು: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪ ಎದುರಿಸುತ್ತಿದ್ದ ಬಿಹಾರ ಮೂಲದ ವಲಸೆ ಕಾರ್ಮಿಕ ರಿತೇಶ್ ಕುಮಾರ್ ಎನ್ಕೌಂಟರ್ ಪ್ರಕರಣವನ್ನು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಸ್ವತಂತ್ರ ನ್ಯಾಯಾಂಗ) ತನಿಖೆಗೆ ವಹಿಸಿ ಹೈಕೋರ್ಟ್ ಆದೇಶಿಸಿದೆ.
ರಿತೇಶ್ ಎನ್ಕೌಂಟರ್ ನಡೆಸಿದ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಆದೇಶಿಸಬೇಕು. ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಕೋರಿ ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್ - ಕರ್ನಾಟಕ (ಪಿಯುಸಿಎಲ್) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿತು.
ಪ್ರಕರಣದ ಸಮಗ್ರ ತನಿಖೆ ನಡೆಸಿ ಜೂನ್ 8ರೊಳಗೆ ವರದಿ ಸಲ್ಲಿಸಬೇಕು ಎಂದು ಆದೇಶಿಸಿರುವ ನ್ಯಾಯಪೀಠ, ಒಂದು ವೇಳೆ ಮ್ಯಾಜಿಸ್ಟ್ರೇಟ್ ವರದಿಯಲ್ಲಿ ಪೊಲೀಸರು ಅನುಸರಿಸಿದ ಕಾರ್ಯವಿಧಾನಗಳಲ್ಲಿ ಅಂತರಗಳು ಕಂಡುಬಂದರೆ, ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಕೇಂದ್ರ ತನಿಖಾ ತಂಡಕ್ಕೆ ವಹಿಸಲಾಗುವುದು ಎಂದು ಮೌಖಿಕವಾಗಿ ತಿಳಿಸಿದ ನ್ಯಾಯಪೀಠ ಅರ್ಜಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:
ಬಿಹಾರ ಮೂಲದ ವಲಸೆ ಕಾರ್ಮಿಕ ರಿತೇಶ್ ಕುಮಾರ್, ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದನು. 2025ರ ಏಪ್ರಿಲ್ 13ರಂದು ಆತನನ್ನು ಘಟನಾ ಸ್ಥಳಕ್ಕೆ ಮಹಜರು ಮಾಡಲು ಕರೆದೊಯ್ದಿದ್ದಾಗ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದನೆಂಬ ಕಾರಣಕ್ಕೆ ಪೊಲೀಸರು ಹೊಡೆದ ಗುಂಡಿಗೆ ಬಲಿಯಾಗಿದ್ದನು. ಇದರಿಂದ, ಎನ್ಕೌಂಟರ್ ನಡೆಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಪ್ರಕರಣವನ್ನು ನ್ಯಾಯಾಂಗ ತನಿಖೆ ಅಥವಾ ಕೇಂದ್ರ ತನಿಖಾ ತಂಡಕ್ಕೆ ವಹಿಸಬೇಕು ಎಂದು ಪಿಯುಸಿಎಲ್ ಹೈಕೋರ್ಟ್ ಮೆಟ್ಟಿಲೇರಿತ್ತು. ಸದ್ಯ ಪ್ರಕರಣದ ತನಿಖೆಯನ್ನು ಸಿಐಡಿ ಎಸ್ಐಟಿ ನಡೆಸುತ್ತಿದೆ.






