ಹೋಟೆಲ್-ರೆಸ್ಟೋರೆಂಟ್ಗಳಿಗೆ ವಾಣಿಜ್ಯ ಬಳಕೆ ಎಲ್ಪಿಜಿ ಪೂರೈಕೆ ಸ್ಥಗಿತ; ಕೇಂದ್ರ, ರಾಜ್ಯ ಸರಕಾರಗಳಿಗೆ ಹೈಕೋರ್ಟ್ ನೋಟಿಸ್

ಸಾಂದರ್ಭಿಕ ಚಿತ್ರ | PC : judiciary.karnataka.gov.in
ಬೆಂಗಳೂರು : ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಿಗೆ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಸರಬರಾಜು ನಿಲ್ಲಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಇದೇ ವೇಳೆ, ರಾಜ್ಯವಾರು ಎಲ್ಪಿಜಿ ಸಿಲಿಂಡರ್ಗಳ ಹಂಚಿಕೆ ಪ್ರಕ್ರಿಯೆ, ಮಾರ್ಚ್ ತಿಂಗಳಲ್ಲಿ ಹಂಚಿಕೆಯಲ್ಲಿ ಕರ್ನಾಟಕದ ಪಾಲು ಎಷ್ಟು? ಮತ್ತು ರಾಜ್ಯದಲ್ಲಿ ಪ್ರಸ್ತುತ ಸಿಲಿಂಡರ್ ದಾಸ್ತಾನು ಎಷ್ಟಿದೆ? ಎಂಬ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ಬೆಂಗಳೂರು ಹೋಟೆಲ್ಗಳ ಸಂಘ ಮತ್ತದರ ಪದಾಧಿಕಾರಿಗಳು ಸಲ್ಲಿಸಿರುವ ರಿಟ್ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿ ವಿಚಾರಣೆಯನ್ನು ಮಾರ್ಚ್ 23ಕ್ಕೆ ಮುಂದೂಡಿತಲ್ಲದೆ, ಅರ್ಜಿಯಲ್ಲಿ ಹೋಟೆಲ್ ಉದ್ಯಮದವರು ಎತ್ತಿರುವ ಎಲ್ಲ ವಿಚಾರಗಳ ಬಗ್ಗೆ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ.
ಇದಕ್ಕೂ ಮುನ್ನ ಅರ್ಜಿದಾರ ವಕೀಲ ಕೆ. ಸತೀಶ್ ಭಟ್ ವಾದ ಮಂಡಿಸಿ, ಬೆಂಗಳೂರು ನಗರದಲ್ಲಿ 40 ಸಾವಿರಕ್ಕೂ ಅಧಿಕ ಹೋಟೆಲ್-ರೆಸ್ಟೋರೆಂಟ್ಗಳಿದ್ದು, ಅಲ್ಲಿ ಸುಮಾರು 6 ಲಕ್ಷ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಏಕಾಏಕಿ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ಗಳ ಸರಬರಾಜನ್ನು ನಿಲ್ಲಿಸಲಾಗಿದೆ. ಇದರಿಂದ, ಹೋಟೆಲ್ಗಳು ಮುಚ್ಚುಲ್ಪಡುತ್ತಿವೆ, ಅವುಗಳ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಇಡೀ ರಾಜ್ಯಕ್ಕೆ ನಿತ್ಯ 1 ಸಾವಿರ ಸಿಲಿಂಡರ್ ಸರಬರಾಜು ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಹೀಗಾದಾರೆ ಸಿಲಿಂಡರ್ ಸರಬರಾಜು ಬಿಕ್ಕಟ್ಟು ಪರಿಹಾರ ಹೇಗೆ ಮಾಡಲಾಗುತ್ತದೆ ಎಂಬುದೇ ತಿಳಿಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ ಪರ ವಕೀಲರು, ಈ ಅರ್ಜಿಯಲ್ಲಿ ಎತ್ತಲಾಗಿರುವ ವಿಚಾರದ ಬಗ್ಗೆ ಮುಂಬೈ ಹೈಕೋರ್ಟ್ ನಿನ್ನೆಯಷ್ಟೇ ವಿಚಾರಣೆ ಮಾಡಿದೆ ಎಂದು ತಿಳಿಸಿ ಆ ಕುರಿತ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಮುಂದುವರಿದು, ಸಿಲಿಂಡರ್ ಪೂರೈಕೆಯು ಸರಕಾರದ ನೀತಿ-ನಿಯಮದ ವಿಚಾರವಾಗಿದೆ. ಪ್ರಕರಣದ ಕುರಿತು ಕೇಂದ್ರ ಸರಕಾರದಿಂದ ಅಗತ್ಯ ಮಾಹಿತಿ-ಸೂಚನೆಗಳನ್ನು ಪಡೆದು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಸೋಮವಾರವಷ್ಟೇ ಅಗತ್ಯ ಮಾಹಿತಿ ನಮಗೆ ಲಭ್ಯವಾಗಲಿದೆ. ಆದ್ದರಿಂದ, ಅರ್ಜಿ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಬೇಕು ಎಂದು ಕೋರಿದರು. ರಾಜ್ಯ ಸರಕಾರದ ಪರ ವಕೀಲರು ಸಹ ಅರ್ಜಿಗೆ ವಿವರಣೆ ನೀಡಲಾಗುವುದು ಎಂದು ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಎಲ್ಪಿಜಿ ಹಂಚಿಕೆ ಕುರಿತ ವಿವರವಾದ ಮಾಹಿತಿ ಒದಗಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.







