ಸಿಇಆರ್ಸಿ ಪರಿಷ್ಕೃತ ನಿಯಮಾವಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

ಸಾಂದರ್ಭಿಕ ಚಿತ್ರ | PC : judiciary.karnataka.gov.in
ಬೆಂಗಳೂರು: ಇದೇ ವರ್ಷ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗ (ಸಿಇಆರ್ಸಿ) 2024ರಲ್ಲಿ ಹೊರಡಿಸಿರುವ ಪರಿಷ್ಕೃತ ನಿಯಮಾವಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ರಾಷ್ಟ್ರೀಯ ಸೌರಶಕ್ತಿ ಫೆಡರೇಷನ್ ಆಫ್ ಇಂಡಿಯಾ, ರಿನ್ಯೂ ವಿಂಡ್ ಎನರ್ಜಿ (ಟಿಎನ್ 2), ಸೆಂಬ್ಕಾರ್ಪ್ ಗ್ರೀನ್ ಇನಾಧ್ರಿ, ಜೆಎಸ್ಡಬ್ಲ್ಯೂ ನಿಯೋ ಎನರ್ಜಿ ಮತ್ತಿತರ ಪವನ ವಿದ್ಯುತ್ ಉತ್ಪಾದನಾ ಕಂಪನಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ. ಇದರಿಂದಾಗಿ ನವೀಕರಿಸಬಹುದಾದ ಇಂಧನ ವಲಯಕ್ಕೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ಅರ್ಜಿಯ ಪರಿಗಣನೆ ಬಾಕಿ ಇದೆ ಮತ್ತು ಅರ್ಜಿದಾರರು ಹಿಂದಿನ ಡಿಎಸ್ಎಂ ಪದ್ಧತಿ ಅಡಿಯಲ್ಲಿ ಮುಂದುವರಿಯಲು ಸಿದ್ಧರಿದ್ದಾರೆ. ಆದ್ದರಿಂದ, ಸದ್ಯಕ್ಕೆ ಸಿಇಆರ್ಸಿ ಪರಿಷ್ಕೃತ ನಿಯಮಗಳನ್ನು ಜಾರಿಗೊಳಿಸಬಾರದೆಂದು ಕೇಂದ್ರ ಸರ್ಕಾರಕ್ಕೆ ಮಧ್ಯಂತರ ನಿರ್ದೇಶನ ನೀಡಿತಲ್ಲದೆ, ಪ್ರತಿವಾದಿಗಳಾದ ಸಿಇಆರ್ಸಿ, ಭಾರತೀಯ ಹವಾಮಾನ ಇಲಾಖೆ, ರಾಷ್ಟ್ರೀಯ ಮಧ್ಯಮ ಶ್ರೇಣಿಯ ಹವಾಮಾನ ಮುನ್ಸೂಚನೆ ಮತ್ತು ಭಾರತದ ಗ್ರಿಡ್ ನಿಯಂತ್ರಣ ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ನವೀಕರಿಸಬಹುದಾದ ಇಂಧನ ಉತ್ಪಾದನೆ (ಸೌರ/ಪವನ) ಸಾಂಪ್ರದಾಯಿಕ ಮೂಲಗಳಿಗಿಂತ ಭಿನ್ನವಾಗಿ ಹವಾಮಾನ ಅವಲಂಬಿತವಾಗಿದೆ ಹಾಗೂ ಅದು ನಿಯಂತ್ರಣಕ್ಕೆ ಸಿಗಲಾರದು. ಆದರೆ, ಸಿಇಆರ್ಸಿ 2003ರ ವಿದ್ಯುತ್ ಕಾಯ್ದೆಯ ಸೆಕ್ಷನ್ 178 (3)ರ ಅಡಿಯಲ್ಲಿ ಕಡ್ಡಾಯ ಪೂರ್ವ ಪ್ರಕಟಣೆಯನ್ನು ಪಾಲಿಸದೆಯೇ ಆಕ್ಷೇಪಾರ್ಹ ನಿಯಮಗಳು 6(2)(ಬಿ) ಮತ್ತು 8 (4)ಗಳ ಅಧಿಸೂಚನೆ ಹೊರಡಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದೇ ಏಪ್ರಿಲ್ 1ರಿಂದ ಜಾರಿಗೆ ಬಂದ ಸಿಇಆರ್ಸಿಯ ಹೊಸ ವಿಚಲನ ಇತ್ಯರ್ಥ ಕಾರ್ಯವಿಧಾನ (ಡಿಎಸ್ಎಂ) ಅಡಿಯಲ್ಲಿ ಪ್ರತಿ ಪೂಲಿಂಗ್ ಸ್ಟೇಷನ್ ಅಥವಾ ಪ್ರತಿ ಉತ್ಪಾದನಾ ಕೇಂದ್ರಕ್ಕೆ ಮುಂದಿನ ದಿನ ಮತ್ತು ಮುಂದಿನ ವಾರ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಯನ್ನು ಪಾಲುದಾರರು ಮುಂಚಿತವಾಗಿ ಘೋಷಿಸಬೇಕಾಗುತ್ತದೆ. ಡಿಎಸ್ಎಂ ಪದ್ಧತಿಯಡಿ ಘೋಷಿತ ಮೌಲ್ಯದಿಂದ ಕೊರತೆ ಅಥವಾ ಹೆಚ್ಚುವರಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಕಠಿಣ ವಿಚಲನ ಬ್ಯಾಂಡ್ಗಳನ್ನು ವಿಧಿಸುತ್ತದೆ ಮತ್ತು ಹೆಚ್ಚಿನ ದಂಡಗಳನ್ನು ಸಹ ಒಳಗೊಂಡಿದೆ ಎಂದರು.






