ಕುಡುಪು ಗುಂಪು ಹತ್ಯೆ ಪ್ರಕರಣ | 3ನೇ ಆರೋಪಿಗೆ ಹೈಕೋರ್ಟ್ ಜಾಮೀನು

ಬೆಂಗಳೂರು, ಮೇ 7 : ವ್ಯಕ್ತಿಯೊಬ್ಬನ ಗುಂಪು ಹತ್ಯೆ ನಡೆಸಿದ ಆರೋಪ ಪ್ರಕರಣದ ಮೂರನೇ ಆರೋಪಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಾಮಂಜೂರು-ತಿರುವೈಲ್‌ನ ಮಂಜ ಅಲಿಯಾಸ್ ಮಂಜುನಾಥ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಗುರುವಾರ ಪುರಸ್ಕರಿಸಿದೆ.
ಅರ್ಜಿದಾರ ಆರೋಪಿ ಮಂಜುನಾಥ್ 1 ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಒದಗಿಸಬೇಕು. ವಿಚಾರಣೆಯ ಎಲ್ಲ ದಿನಗಳಂದು ಸಕ್ಷಮ ನ್ಯಾಯಾಲಯಕ್ಕೆ ಹಾಜರಾಗಬೇಕು, ಪ್ರಾಸಿಕ್ಯೂಷನ್ ಸಾಕ್ಷಿ ತಿರುಚುವಂತಿಲ್ಲ. ಅನುಮತಿ ಇಲ್ಲದೆ ದಕ್ಷಿಣ ಕನ್ನಡ ಜಿಲ್ಲೆ ತೊರೆಯುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ಹೈಕೋರ್ಟ್ ಹೇಳಿದ್ದೇನು?: ಕೃತ್ಯದಲ್ಲಿ ಯಾವುದೇ ಮಾರಕಾಸ್ತ್ರಗಳನ್ನು ಬಳಕೆ ಮಾಡಲಾಗಿಲ್ಲ ಹಾಗೂ ಇದು ಪೂರ್ವನಿಯೋಜಿತ ಕೃತ್ಯವಲ್ಲ. ಕ್ಷಣಮಾತ್ರದಲ್ಲಿ ಘಟನೆ ನಡೆದಿದೆ. ಮೃತ ಮುಹಮ್ಮದ್ ಅಶ್ರಫ್ ಅವರ ಗಾಯಗೊಂಡ ಅಂಗಾಂಗಗಳಿಗೆ ಖಾರದ ಪುಡಿ ಹಾಕಲಾಗಿದೆ ಎಂಬುದಕ್ಕೆ ಮರಣೋತ್ತರ ವರದಿ ಅಥವಾ ತನಿಖೆಯ ಮಹಜರ್ ವೇಳೆ ಸ್ಥಳದಲ್ಲಿ ಖಾರದಪುಡಿ ಪತ್ತೆಯಾಗಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ. ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ. ಮೂಲ ಯುಡಿಆರ್ ಆಧರಿಸಿ ವಿಚಾರಣೆ ಮುಂದುವರಿಸಲು ಪೊಲೀಸರು ಮ್ಯಾಜಿಸ್ಟ್ರೇಟ್ ಅನುಮತಿ ಪಡೆಯಬಹುದಿತ್ತು. ಅರ್ಜಿದಾರನೇ ಮೊದಲಿಗೆ ಯುಡಿಆರ್ ಮಾಡಿಸಿದ್ದಾನೆ. ಅದಾಗ್ಯೂ, ಮಂಗಳೂರು ಗ್ರಾಮಾಂತರ ಪೊಲೀಸರು ಹೇಗೆ ಎರಡನೇ ಎಫ್‌ಐಆರ್ ದಾಖಲಿಸಿದರು. ರಾಜ್ಯ ಸರಕಾರ ಗಂಭೀರ ಪ್ರಮಾದ ಎಸಗಿದೆ. ಯುಡಿಆರ್ ಸಂಬಂಧ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಯುಡಿಆರ್‌ಗೆ ಬಿ ರಿಪೋರ್ಟ್ ಸಲ್ಲಿಸಬಹುದೇ? ಎಂದು ಪ್ರಶ್ನಿಸಿತಲ್ಲದೆ, 2025ರ ಎಪ್ರಿಲ್ 29ರಿಂದ ಅರ್ಜಿದಾರರು ಕಸ್ಟಡಿಯಲ್ಲಿದ್ದು, ಆರೋಪ ಪಟ್ಟಿಯಲ್ಲಿ 216 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ. ಆದ್ದರಿಂದ, ಅರ್ಜಿದಾರ ಜೈಲಿನಲ್ಲಿ ಮುಂದುವರಿಯುವುದು ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಜಾಮೀನು ಮಂಜೂರು ಮಾಡಿದೆ.






