ಅಪರಾಧ ಉಲ್ಲೇಖಿಸದ, ಅಧಿಕಾರಿಯ ಸಹಿ ಇಲ್ಲದ ನೋಟಿಸ್ ನೀಡಿದ್ದ ಪೊಲೀಸರಿಗೆ ಹೈಕೋರ್ಟ್ ತರಾಟೆ

ಬೆಂಗಳೂರು : ಯಾವ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಹಾಜರಾಗಲು ಸೂಚಿಸಲಾಗುತ್ತಿದೆ ಎಂಬುದನ್ನು ಪೊಲೀಸ್ ನೋಟಿಸ್‌ನಲ್ಲಿ ಉಲ್ಲೇಖಿಸದ ಹಾಗೂ ನೋಟಿಸ್‌ನಲ್ಲಿ ಸಂಬಂಧಿತ ಅಧಿಕಾರಿಯ ಹೆಸರು ಮತ್ತು ಪದನಾಮ ಕೈಬಿಟ್ಟಿದ್ದ ಅತ್ತಿಬೆಲೆ ಠಾಣೆ ಪೊಲೀಸರ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ನಿರ್ದಿಷ್ಟ ಸೆಕ್ಷನ್ ಉಲ್ಲೇಖಿಸದೇ, ಅಧಿಕಾರಿಯ ಸಹಿ ಇಲ್ಲದೆಯೇ ತನಿಖೆಗೆ ಹಾಜರಾಗುವಂತೆ ಸೂಚಿಸಿ ಅತ್ತಿಬೆಲೆ ಠಾಣೆ ಪೊಲೀಸರು ನೀಡಿದ್ದ ನೋಟಿಸ್ ಪ್ರಶ್ನಿಸಿ ಬೆಂಗಳೂರಿನ ವರುಣ್ ಜ್ಯುವೆಲ್ಲರ್ಸ್‌ನ ಸ್ಥಾಪಕರಾದ ನರೇಶ್ ಕುಮಾರ್ ಸಿಯಾಲ್ ಹಾಗೂ ಪ್ರಕಾಶ್ ಚಾಂದ್ ಸಿಯಾಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಅರ್ಜಿ ಆಲಿಸಿದ ನ್ಯಾಯಪೀಠ, ಯಾವ ಅಪರಾಧಕ್ಕೆ ನೋಟಿಸ್ ನೀಡಲಾಗುತ್ತಿದೆ ಎಂಬುದನ್ನು ನೋಟಿಸ್‌ನಲ್ಲಿ ಏಕೆ ಉಲ್ಲೇಖಿಸಿಲ್ಲ? ಅಧಿಕಾರಿಯ ಹೆಸರು ಮತ್ತು ಪದನಾಮವೂ ಇಲ್ಲ. ಯಾವ ನಿಬಂಧನೆಯಡಿ ಈ ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ. ಕಾನೂನಿನ ಅಡಿ ಮಾತ್ರ ಅಧಿಕಾರ ಚಲಾಯಿಸಬಹುದು. ಕಾನೂನಿನಲ್ಲಿ ಅವಕಾಶವಿಲ್ಲ ಎಂದಾದರೆ ಜನರನ್ನು ಪೊಲೀಸರು ಠಾಣೆಗೆ ಕರೆಯಲಾಗದು. ಯಾವ ಅಪರಾಧ ಕೃತ್ಯದ ಆರೋಪದ ಮೇಲೆ ತಮ್ಮನ್ನು ತನಿಖೆಗೆ ಕರೆಯಲಾಗುತ್ತದೆ ಎಂಬುದನ್ನು ಪೊಲೀಸರು ವಿವರಿಸಬೇಕು. ಇ-ಆಫೀಸ್ ಇರಬೇಕಲ್ಲವೇ. ಡಿಜಿಟಲ್ ಸಹಿ ಹೊಂದಿರುವ ನೋಟಿಸ್ ಅನ್ನು ಏಕೆ ನೀಡಲಾಗಿಲ್ಲ ಎಂದು ಪ್ರಶ್ನಿಸಿತು.
ಇದಕ್ಕೆ ಸರ್ಕಾರದ ಪರ ವಕೀಲರು ಮಾಹಿತಿ ಪಡೆದು ತಿಳಿಸಲಾಗುವುದು ಎಂದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಆಕ್ಷೇಪಾರ್ಹ ನೋಟಿಸ್‌ಗಳನ್ನು ಯಾವ ಸೆಕ್ಷನ್ ಅಡಿಯ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ಮಾಡಲಾಗಿದೆ ಹಾಗೂ ಅದನ್ನು ನೀಡಿರುವ ಅಧಿಕಾರಿಯ ಪದನಾಮ ಮತ್ತು ಹೆಸರನ್ನು ಏಕೆ ಉಲ್ಲೇಖಿಸಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಎರಡು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿತು.
ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ:
ಆಕ್ಷೇಪಾರ್ಹ ನೋಟಿಸ್‌ಗಳನ್ನು ಯಾವ ಸೆಕ್ಷನ್ ಅಡಿಯಲ್ಲಿ ನೀಡಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನೋಟಿಸ್ ನೀಡುವ ಪ್ರಾಧಿಕಾರದ ಹೆಸರು ಹಾಗೂ ಪದನಾಮವೂ ಸ್ಪಷ್ಟವಾಗಿ ಕಾಣೆಯಾಗಿದೆ. ಇದು ನೋಟಿಸ್‌ಗಳನ್ನು ನೀಡುವ ಸತ್ಯಾಸತ್ಯತೆ ಮತ್ತು ನೈಜತೆಯನ್ನು ಅನುಮಾನಿಸುತ್ತದೆ ಎಂದಿರುವ ನ್ಯಾಯಪೀಠ, ಆಪಾದಿತ ಅಪರಾಧವನ್ನು ಹೊರತುಪಡಿಸಿ ಯಾವುದೇ ಕಿರುಕುಳ ಅಥವಾ ಯಾವುದೇ ತನಿಖೆಯನ್ನು ಈ ನ್ಯಾಯಾಲಯಕ್ಕೆ ವರದಿ ಮಾಡಿದರೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚಿಂತಿಸಲಾಗುವುದು ಎಂದು ಎಚ್ಚರಿಸಿದೆ.
ಪ್ರಕರಣವೇನು?
ಮಾರ್ಚ್ ತಿಂಗಳಿನಲ್ಲಿ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ 26 ವರ್ಷದ ಮೋಹನ್ ಎಂಬ ವ್ಯಕ್ತಿ ಚೀಟಿ ವ್ಯವಹಾರದಲ್ಲಿ ನಷ್ಟ ಅನುಭವಿಸಿ, ಸಾಲ ನೀಡಿರುವವರ ಕಿರುಕುಳ ತಾಳಲಾರದೇ ತಾಯಿ, ರೋಗ ಬಾದಿತಳಾದ ಅಕ್ಕನಿಗೆ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದನು. ಅಕ್ಕನ ಮಗನನ್ನು ಕತ್ತು ಕೊಯ್ದು ಕೊಂದು ಕೊಲೆಗೆ ಯತ್ನಿಸಿದ್ದನು. ಅದೃಷ್ಟವಶಾತ್ ಅಕ್ಕನ ಮಗ ಮತ್ತು ಮೋಹನ್ ಬದುಕುಳಿದ್ದರು.
ಕೃತ್ಯವೆಸಗುವ ಮುನ್ನ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದ ಮೋಹನ್, ಸಾಲ ತೀರಿಸಲಾಗದೇ, ಸಾಲಗಾರರ ಕಿರುಕುಳದಿಂದ ಸಾವಿಗೆ ಮುಂದಾಗಿರುವುದಾಗಿ ವಿಡಿಯೊನಲ್ಲಿ ಹೇಳಿಕೊಂಡಿದ್ದರು. ಈ ಪ್ರಕರಣದ ಸಂಬಂಧ ತನಿಖೆಯಲ್ಲಿ ಭಾಗವಹಿಸುವಂತೆ ಅರ್ಜಿದಾರರಿಗೆ ಪೊಲೀಸರು ಸೂಚಿಸಿದ್ದರು.
ಅರ್ಜಿದಾರರ ಪರ ವಕೀಲರು, ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಆರೋಪಿಗಳ ವಿರುದ್ಧದ ಪ್ರಕರಣಕ್ಕೆ ಸಮನ್ವಯ ನ್ಯಾಯಪೀಠ ತಡೆ ನೀಡಿದೆ. ಆದರೆ, ಅರ್ಜಿದಾರರ ವಿರುದ್ಧ ಯಾವುದೇ ಪ್ರಕರಣ ದಾಖಲಾಗದಿದ್ದರೂ ಅವರಿಗೆ ನೋಟಿಸ್ ನೀಡಲಾಗಿದೆ. ನೋಟಿಸ್‌ನಲ್ಲಿ ಯಾವ ಸೆಕ್ಷನ್ ಅಡಿ ಅಪರಾಧಕ್ಕೆ ಅರ್ಜಿದಾರರನ್ನು ಕರೆಯಲಾಗಿದೆ ಎಂದು ಉಲ್ಲೇಖಿಸಲಾಗಿಲ್ಲ. ಜತೆಗೆ, ತನಿಖಾಧಿಕಾರಿಯ ಸಹಿ ಮತ್ತು ಪದನಾಮವನ್ನೂ ಉಲ್ಲೇಖಿಸಿಲ್ಲ. ಪೊಲೀಸರು ಪ್ರಕರಣದ ತನಿಖೆ ಹೊರತುಪಡಿಸಿ, ಅರ್ಜಿದಾರರ ಉದ್ಯಮದ ಬಗ್ಗೆ ಹೆಚ್ಚು ಆಸಕ್ತರಾಗಿದ್ದಾರೆ ಎಂದು ಆರೋಪಿಸಿದ್ದರು.






