ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಪ್ರಶ್ನಿಸಿದ ಅರ್ಜಿ; ಕೇಂದ್ರ ಸರ್ಕಾರವನ್ನು ಪ್ರತಿವಾದಿಯಾಗಿಸಲು ಅರ್ಜಿದಾರರಿಗೆ ಹೈಕೋರ್ಟ್ ಸೂಚನೆ

ಬೆಂಗಳೂರು : ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿಸುವಂತೆ ಕರ್ನಾಟಕ ಉದ್ಯೋಗದಾತರ ಸಂಘಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ರಾಜ್ಯ ಕಾರ್ಮಿಕ ಇಲಾಖೆ 2026ರ ಮೇ 22ರಂದು ಕನಿಷ್ಠ ವೇತನ ಪರಿಷ್ಕರಿಸಿ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ಉದ್ಯೋಗದಾತರ ಸಂಘ ಹಾಗೂ ಎತಿರಿಯಲ್ ಮಷೀನ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಈ ವೇಳೆ ನ್ಯಾಯಪೀಠ ಅರ್ಜಿದಾರರನ್ನು ಕುರಿತು, ನೀವು ಕೇಂದ್ರ ಸರ್ಕಾರದ ಕಾಯ್ದೆಯನ್ನು ಉಲ್ಲೇಖಿಸುತ್ತಿರುವುದರಿಂದ ಕೇಂದ್ರ ಸರ್ಕಾರವನ್ನು ಅರ್ಜಿಯಲ್ಲಿ ಪಕ್ಷಕಾರರನ್ನಾಗಿ ಮಾಡಬೇಕು. ಕೇಂದ್ರ ಸರ್ಕಾರ ಏನು ಹೇಳುತ್ತದೆ ಎಂಬುದನ್ನು ನೋಡಬೇಕಿದೆ ಎಂದು ಹೇಳಿತು. ಅರ್ಜಿದಾರರ ಪರ ಹಿರಿಯ ವಕೀಲ ಎಸ್.ಎಸ್. ನಾಗಾನಂದ್ ಅವರ ವಾದ ಆಲಿಸಿದ ಬಳಿಕ ಅರ್ಜಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಲು ನಿರ್ದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಜೂನ್ 9ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ವಾದ ಮಂಡಿಸಿದ ನಾಗಾನಂದ್ ಅವರು, ಶೇ.60 ವೇತನ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ನರ್ಸಿಂಗ್ ಹೋಮ್, ಕಾಲೇಜುಗಳು ಮುಚ್ಚುತ್ತವೆ. ಅಷ್ಟು ಸಂಬಳವನ್ನು ಅವರು ಪಾವತಿಸಲಾಗದು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟದಲ್ಲಿ ಅತ್ಯಂತ ಹೆಚ್ಚು ಕನಿಷ್ಠ ವೇತನ ನಿಗದಿಯಾಗಿದೆ. ರಾಜ್ಯದ ಪ್ರತಿಯೊಬ್ಬ ಕಾರ್ಮಿಕನಿಗೂ ಸಮಸ್ಯೆಯಾಗುತ್ತದೆ. ಮಧ್ಯಂತರ ಆದೇಶ ಮಾಡದೇ ಇದ್ದರೆ ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳು, ಸಾವಿರಾರು ಕೈಗಾರಿಕೆಗಳು ತಮ್ಮಲ್ಲಿರುವ ಲಕ್ಷಾಂತರ ಕಾರ್ಮಿಕರಿಗೆ ಹೊಸ ಆದೇಶದ ಅನ್ವಯ ವೇತನ ಪಾವತಿಸಬೇಕಾಗುತ್ತದೆ ಎಂದರು.
ಮುಂದುವರಿದು, ಹಿಂಪಡೆಯಲಾಗಿರುವ ಕಾಯ್ದೆಯನ್ನು ಆಧರಿಸಿ ವೇತನ ಹೆಚ್ಚಿಸಲು ಅಧಿಸೂಚನೆ ಹೊರಡಿಸಬಹುದೇ? ಎಂದು ಪ್ರಶ್ನಿಸಿದರು.
ಅಖಿಲ ಭಾರತ ಕಾರ್ಮಿಕ ಸಂಘಗಳ ಕೇಂದ್ರೀಯ ಒಕ್ಕೂಟದ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ವಾದ ಮಂಡಿಸಿ, 2017ರಲ್ಲಿ ಕೊನೆಯ ಬಾರಿಗೆ ವೇತನ ಪರಿಷ್ಕರಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಕೋವಿಡ್ 19 ಸಾಂಕ್ರಾಮಿಕ ಬಂದು ಹೋಗಿದೆ. ವಿಶ್ವದ ಬೇರೆ ಕಡೆ ಯುದ್ಧಗಳು ನಡೆಯುತ್ತಿರುವುದರಿಂದ ವಿವಿಧ ವಸ್ತುಗಳ ಬೆಲೆ ಹೆಚ್ಚಾಗಿದೆ. ಆದರೆ, ಕಾರ್ಮಿಕರಿಗೆ ಅದೇ ವೇತನ ಪಾವತಿಸಬೇಕೆ ಎಂದರು.
ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶ ಕೋರಿದರು.
ಅರ್ಜಿಯಲ್ಲೇನಿದೆ?
ಕೆಲ ಕ್ಷೇತ್ರಗಳಲ್ಲಿ ಶೇ. 60 ಪ್ರಮಾಣದಲ್ಲಿ ವೇತನ ಹೆಚ್ಚಳವಾಗಿದ್ದು, ಉದ್ಯೋಗದಾತರ ಮೇಲೆ ಆರ್ಥಿಕ ಹೊರೆ ಬಿದ್ದಿದೆ. 84 ನಿಗದಿತ ಉದ್ಯೋಗಗಳ ಪೈಕಿ 34 ಉದ್ಯೋಗಗಳಲ್ಲಿ 2022–23ರಿಂದ ವೇತನ ಪರಿಷ್ಕರಣೆಯಾಗಿದೆ. ಈ ಪರಿಷ್ಕರಣೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಕೈಗಾರಿಕಾ ಕೇಂದ್ರಿತ ವಿಚಾರಗಳನ್ನು ಪರಿಗಣಿಸದೆ ಎಲ್ಲ ಉದ್ಯೋಗಗಳಲ್ಲಿ ವೇತನ ಪರಿಷ್ಕರಣೆ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ನ್ಯಾಯಾಲಯದ ಅನುಮತಿ ಇಲ್ಲದೆ ಸಲಹಾ ಮಂಡಳಿಯ ಶಿಫಾರಸುಗಳನ್ನು ಜಾರಿಗೊಳಿಸಬಾರದು ಎಂದು ಈಗಾಗಲೇ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ. ಹೀಗಿದ್ದರೂ, 2026 ಮೇ 22ರಂದು ರಾಜ್ಯ ಸರ್ಕಾರ ಆಕ್ಷೇಪಾರ್ಹ ಅಂತಿಮ ಅಧಿಸೂಚನೆ ಹೊರಡಿಸಿದೆ. ವೇತನ ಪರಿಷ್ಕರಣೆ ಅಳವಡಿಸಿರುವ ನಿಯಮ ಕನಿಷ್ಠ ವೇತನ ಕಾಯ್ದೆ ಹಾಗೂ ಸುಪ್ರೀಂಕೋರ್ಟ್ ರೂಪಿಸಿರುವ ಮಾನದಂಡಗಳಿಗೆ ಪೂರಕವಾಗಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.






