ಶರಾವತಿ ಜಲವಿದ್ಯುತ್ ಯೋಜನೆ ಕೈಬಿಡಲು ತಜ್ಞರ ಸಮಿತಿ ಶಿಫಾರಸು; ನಿಲುವು ತಿಳಿಸಲು ಕೇಂದ್ರಕ್ಕೆ ಕಾಲಾವಕಾಶ ನೀಡಿದ ಹೈಕೋರ್ಟ್

ಬೆಂಗಳೂರು: ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳಲಿರುವ ಉದ್ದೇಶಿತ 10 ಸಾವಿರ ಕೋಟಿ ರೂ. ವೆಚ್ಚದ 'ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆ' ಜಾರಿಯನ್ನು ಕೈಬಿಡುವಂತೆ ತಜ್ಞರ ಸಮಿತಿ ಮಾಡಿರುವ ಶಿಫಾರಸು ಕುರಿತು ನಿಲುವು ತಿಳಿಸಲು ಕೇಂದ್ರ ಸರಕಾರಕ್ಕೆ ಹೈಕೋರ್ಟ್ ಕಾಲಾವಕಾಶ ನೀಡಿದೆ.
ಜಲವಿದ್ಯುತ್ ಯೋಜನೆಯನ್ನು ಪ್ರಶ್ನಿಸಿ ಸಾಗರದ ಅಖಿಲೇಶ್ ಚಿಪ್ಲಿ, ಉಡುಪಿಯ ಡಾ. ರವೀಂದ್ರನಾಥ ಶಾನಭಾಗ್ ಹಾಗೂ ಶಿವಮೊಗ್ಗದ ಸಿ.ಬಿ. ಮನೋಹರ ಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾ.ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲೆ ಬಿ.ವಿ. ವಿದ್ಯುಲ್ಲತಾ ಅವರು, ರಾಷ್ಟ್ರೀಯ ವನ್ಯಜೀವಿ ಮಂಡಳಿ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಯೋಜನೆಯ ಸಾಧಕ ಬಾಧಕಗಳನ್ನು ಪರಿಶೀಲಿಸಲು ರಚಿಸಿದ ಮೂವರು ಸದಸ್ಯರ ತಜ್ಞರ ಸಮಿತಿ ಶರಾವತಿ ವನ್ಯಜೀವಿ ಅಭಯಾರಣ್ಯದೊಳಗೆ ಪ್ರಸ್ತಾಪಿಸಲಾದ ಶರಾವತಿ ಜಲವಿದ್ಯುತ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ ಎಂದರಲ್ಲದೆ, ತಜ್ಞರ ಸಮಿತಿಯು ಯೋಜನೆಯಿಂದ ಅಭಯಾರಣ್ಯದ ಪರಿಸರ, ಜೀವವೈವಿಧ್ಯ ಮತ್ತು ವನ್ಯಜೀವಿಗಳ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ಯೋಜನೆಗೆ ಅನುಮೋದನೆ ನೀಡಬಾರದು ಎಂದು ಶಿಫಾರಸು ಮಾಡಿದೆ ಎಂದರು.
ಕೇಂದ್ರ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರು, 2025ರ ಡಿಸೆಂಬರ್ 27ರಿಂದ 30ರವೆಗೆ ಸ್ಥಳ ಪರಿಶೀಲನೆ ನಡೆಸಿ ತಜ್ಞರ ಸಮಿತಿ ಸಲ್ಲಿಸಿರುವ ವರದಿಯ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಜತೆಗೆ, ವರದಿ ಆಧರಿಸಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ಇನ್ನೂ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ. ಮಂಡಳಿಯ ನಿಲುವು ತಿಳಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.
ಇದನ್ನು ಆಲಿಸಿದ ನ್ಯಾಯಪೀಠ, ತಜ್ಞರ ಸಮಿತಿ ವರದಿ ಸಲ್ಲಿಸಿರುವುದು ಹಾಗೂ ವರದಿ ಆಧರಿಸಿ ವನ್ಯಜೀವಿ ಮಂಡಳಿ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳದಿರುವುದನ್ನು ದಾಖಲಿಸಿ, ನಿಲುವು ತಿಳಿಸಲು ಕೇಂದ್ರ ಸರ್ಕಾರಕ್ಕೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಅಕ್ಟೋಬರ್ 10ಕ್ಕೆ ಮುಂದೂಡಿತು.
ಅರ್ಜಿಯನ್ನು ಮಾರ್ಚ್ 10ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಯೋಜನೆಯಿಂದ ಅರಣ್ಯ ಹಾಗೂ ಪರಿಸರದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಆತಂಕವಿದ್ದು, ಈ ಕುರಿತು ಪರಿಶೀಲನೆ ನಡೆಸಬೇಕಿದೆ. ಆದ್ದರಿಂದ, ನ್ಯಾಯಾಲಯದ ಮುಂದಿನ ಆದೇಶದವರೆಗೆ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆಸಬಾರದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಮಧ್ಯಂತರ ಆದೇಶ ಹೊರಡಿಸಿತ್ತು.
ತಜ್ಞರ ಸಮಿತಿಯ ವರದಿಯಲ್ಲೇನಿದೆ?
ಉದ್ದೇಶಿತ ಯೋಜನೆಯು ಪರಿಸರ ಸಮಗ್ರತೆಗೆ ಗಣನೀಯ ಮತ್ತು ಬದಲಾಯಿಸಲಾಗದ ಹಾನಿಯನ್ನುಂಟುಮಾಡುವ ಸಾಧ್ಯತೆಯಿದೆ ಹಾಗೂ ರಾಷ್ಟ್ರೀಯ ಆರ್ಥಿಕತೆಯ ದೀರ್ಘಕಾಲೀನ ಸುಸ್ಥಿರತೆಗೆ ಗಂಭೀರ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂದು ಸಮಿತಿ ಹೇಳಿದೆ. ಸಮಗ್ರವಾಗಿ ನಿರ್ಣಯಿಸಿದಾಗ, ಯೋಜನೆಯು ನೀಡುವ ಸೀಮಿತ ಕಾರ್ಯಾಚರಣೆಯ ಪ್ರಯೋಜನವು ಒಳಗೊಂಡಿರುವ ಬದಲಾಯಿಸಲಾಗದ ಪರಿಸರ ಮತ್ತು ಸಾಮಾಜಿಕ ವೆಚ್ಚಗಳಿಗಿಂತ ಹೆಚ್ಚಾಗಿರುತ್ತದೆ. ಜೀವವೈವಿಧ್ಯ ಸಂರಕ್ಷಣೆ ಮತ್ತು ಪಶ್ಚಿಮ ಘಟ್ಟಗಳ ಸಂರಕ್ಷಿತ ಪ್ರದೇಶದೊಳಗಿನ ಅಪರೂಪದ ಮತ್ತು ಸ್ಥಳೀಯ ಪ್ರಭೇದಗಳ ಉಳಿವಿಗೆ ದೀರ್ಘಕಾಲೀನ ಪರಿಣಾಮಗಳಾಗಲಿವೆ ಎಂದು ತಜ್ಞರ ಸಮಿತಿಯ ವರದಿಯಲ್ಲಿ ವಿವರಿಸಲಾಗಿದೆ.
ಅರ್ಜಿದಾರರ ಮನವಿ ಏನು?
ಉದ್ದೇಶಿತ ಯೋಜನೆಗೆ ಒಟ್ಟು 142.763 ಹೆಕ್ಟೇರ್ ಭೂಮಿಯ ಅಗತ್ಯವಿದ್ದು, ಅದರಲ್ಲಿ 102 ಹೆಕ್ಟೇರ್ ಪ್ರದೇಶವು ಭೌಗೋಳಿಕವಾಗಿ ಅಭಯಾರಣ್ಯದೊಳಗೆ ಮತ್ತು 39.715 ಹೆಕ್ಟೇರ್ ಪರಿಸರ ಸೂಕ್ಷ್ಮ ವಲಯದಲ್ಲಿ ಇದೆ. ಇಂತಹ ಬೃಹತ್ ಅಭಯಾರಣ್ಯ ಮತ್ತು ಪರಿಸರ ಸೂಕ್ಷ್ಮ ವಲಯದೊಳಗೆ ಜಲವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮೋದನೆ ನೀಡುವುದರಿಂದ ಬೃಹತ್ ಕಂಬಗಳನ್ನು ನೆಡುವುದು, ಕಂಬಗಳ ನಡುವೆ ಹೆಚ್ಚಿನ ವೋಲ್ಟೇಜ್ ತಂತಿಗಳನ್ನು ಎಳೆಯುವುದೂ ಸೇರಿದಂತೆ ಉತ್ಪಾದಿಸುವ ಜಲವಿದ್ಯುತ್ ರವಾನಿಸಲು ಪ್ರಸರಣ ಮಾರ್ಗಗಳ ನಿರ್ಮಾಣದಿಂದ ಅಮೂಲ್ಯ ವೃಕ್ಷ ಸಂಪತ್ತು ನಾಶವಾಗುವ ಜತೆಗೆ, ವನ್ಯಜೀವಿಗಳ ಆವಾಸಸ್ಥಾನಕ್ಕೆ ಧಕ್ಕೆಯಾಗಲಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ವನ್ಯಜೀವಿ ರಕ್ಷಣಾ ಕಾಯ್ದೆ–1972ರ ಸೆಕ್ಷನ್ 29ರ ಅಡಿಯಲ್ಲಿ ವಿಧಿಸಲಾದ ನಿರ್ಬಂಧವನ್ನು ಗಮನದಲ್ಲಿ ಇರಿಸಿಕೊಂಡು ಶರಾವತಿ ಕಣಿವೆಯ ಅಭಯಾರಣ್ಯ ಮತ್ತು ಅದರ ಪರಿಸರ ಸೂಕ್ಷ್ಮ ವಲಯದಲ್ಲಿ ಕೈಗೆತ್ತಿಕೊಳ್ಳಲಿರುವ ಉದ್ದೇಶಿತ ಯೋಜನೆಗೆ ಯಾವುದೇ ಅನುಮೋದನೆ ನೀಡದಂತೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.






