ಅಮಾನತು ಪ್ರಶ್ನಿಸಿ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ಅರ್ಜಿ; ಮಧ್ಯಂತರ ರಕ್ಷಣೆ ಒದಗಿಸಲು ಹೈಕೋರ್ಟ್ ನಕಾರ

ಬೆಂಗಳೂರು : ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿರುವ ಶಿವಶಂಕರಪ್ಪ ಸಾಹುಕಾರ್ ಅವರಿಗೆ ಯಾವುದೇ ಮಧ್ಯಂತರ ರಕ್ಷಣೆ ಒದಗಿಸಲು ಹೈಕೋರ್ಟ್ ನಿರಾಕರಿಸಿದೆ.
ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಳಿಸಿ ರಾಜ್ಯಪಾಲರು ಹೊರಡಿಸಿರುವ ಆದೇಶ ಪ್ರಶ್ನಿಸಿ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ನಿಗದಿಯಾಗಿತ್ತಾದರೂ, ನ್ಯಾಯಾಲಯ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸಾಧ್ಯವಾಗಲಿಲ್ಲ.
ಇದರಿಂದ ದಿನದ ಕಲಾಪ ಮುಕ್ತಾಯಗೊಳ್ಳುವ ವೇಳೆ ಶಿವಶಂಕರಪ್ಪ ಸಾಹುಕಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಹಾಜರಾಗಿ, ಇದು ಕೆಪಿಎಸ್‌ಸಿಗೆ ಸಂಬಂಧಿಸಿದ ಪ್ರಕರಣವಾಗಿದ್ದು, ಮಂಗಳವಾರ ಅರ್ಜಿ ಆಲಿಸಲಾಗಿದೆ ಎಂದರು. ಸಮಯದ ಅಭಾವದ ಹಿನ್ನೆಲೆಯಲ್ಲಿ ಗುರುವಾರ ಅರ್ಜಿ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿತು.
ಈ ವೇಳೆ ಅರುಣ್ ಶ್ಯಾಮ್ ಅವರು, ಅಲ್ಲಿಯವರೆಗೆ ಅರ್ಜಿದಾರರಿಗೆ ಮಧ್ಯಂತರ ರಕ್ಷಣೆ ಒದಗಿಬೇಕು. ಅರ್ಜಿದಾರರ ಅನುಪಸ್ಥಿತಿಯಲ್ಲಿ ಅನುಮೋದನೆಗೆ ಮುಂದಾದರೆ, ಅವರ ಹಕ್ಕುಗಳಿಗೆ ಧಕ್ಕೆಯುಂಟಾಗುತ್ತದೆ. ಆದ್ದರಿಂದ, ಅವರಿಗೆ ಮಧ್ಯಂತರ ರಕ್ಷಣೆ ಒದಗಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಈ ಮನವಿ ತಳ್ಳಿಹಾಕಿದ ನ್ಯಾಯಪೀಠ, ಪ್ರಕರಣದಲ್ಲಿ ಸಂವಿಧಾನದ ವಿಧಿ 317(1) ಹಾಗೂ 317(2) ಪಾಲನೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮಾತ್ರ ನ್ಯಾಯಾಲಯ ಪರಿಗಣಿಸಲಿದೆ. ಅದಕ್ಕೆ ಸಂಬಂಧಿಸಿದ ತೀರ್ಪುಗಳನ್ನು ಪರಿಶೀಲಿಸಬೇಕಿದ್ದು, ನ್ಯಾಯಾಲಯ ವಿವೇಚನೆ ಬಳಸಬೇಕಾಗುತ್ತದೆ. ಹೀಗೆಲ್ಲ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ. ಅರ್ಜಿಯನ್ನು ನಾಳೆ ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿ, ಗುರುವಾರಕ್ಕೆ ವಿಚಾರಣೆ ಮುಂದೂಡಿತು.






