ಬಲವಂತದ ಕ್ರಮ ಬೇಡ ಎಂಬ ಆದೇಶ ಬಂಧನದಿಂದಷ್ಟೇ ರಕ್ಷಣೆ ಒದಗಿಸುತ್ತದೆ, ತನಿಖೆಯನ್ನು ತಡೆ ಹಿಡಿಯುವುದಿಲ್ಲ : ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು : ಆರೋಪಿಯ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ತನಿಖಾ ಸಂಸ್ಥೆಗೆ ನಿರ್ದೇಶಿಸಿ ನ್ಯಾಯಾಲಯ ನೀಡುವ ಮಧ್ಯಂತರ ಆದೇಶವು ಬಂಧನದಿಂದ ವ್ಯಕ್ತಿಯ ಸ್ವಾತಂತ್ರ್ಯವನ್ನಷ್ಟೇ ರಕ್ಷಿಸುತ್ತದೆಯೇ ಹೊರತು ಪ್ರಕರಣದ ತನಿಖೆ ಮುಂದುವರಿಸಲು ಅಥವಾ ಅದರ ನಂತರದ ಕ್ರಮ ಜರುಗಿಸಲು ಅಡ್ಡಿಪಡಿಸುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಹಣ ದುರ್ಬಳಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ತಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಖಾಸಗಿ ಕಂಪನಿಯ ಪವಿತ್ರ ರಾಮಾನುಜಂ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸ್ಪಷ್ಟನೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ನಡೆಸುವ ತನಿಖೆಗೆ ಅರ್ಜಿದಾರರು ಸಹಕರಿಸಿದರೆ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಕೋರ್ಟ್ ಈ ಹಿಂದೆ ಆದೇಶಿಸಿತ್ತು. ಆದರೆ, ತನಿಖಾ ಸಂಸ್ಥೆ ತಮ್ಮ ಆಸ್ತಿಯನ್ನು ಜಪ್ತಿ ಮಾಡಿದ್ದು, ಅದು ಕಾನೂನುಬಾಹಿರ ಕ್ರಮವಾಗಿದೆ. ಆದ್ದರಿಂದ, ಇ.ಡಿ ಆಸ್ತಿ ಜಪ್ತಿ ಮಾಡಿರುವ ಆದೇಶ ರದ್ದುಪಡಿಸಬೇಕೆಂದು ಅರ್ಜಿದಾರರು ಕೋರಿದ್ದರು. ಈ ಅರ್ಜಿ ವಜಾಗೊಳಿಸಿರುವ ನ್ಯಾಯಪೀಠ, 'ಬಲವಂತದ ಕ್ರಮ ಬೇಡ' ಎಂಬ ಆದೇಶವು ಜಾರಿ ನಿರ್ದೇಶನಾಲಯ ತನ್ನ ತನಿಖೆ ಮುಂದುವರಿಸುವುದನ್ನು ಅಥವಾ ಆಸ್ತಿ ಜಪ್ತಿ ಅಥವಾ ಮುಟ್ಟುಗೋಲು ಆದೇಶವನ್ನು ಅಂಗೀಕರಿಸುವುದನ್ನು ತಡೆ ಹಿಡಿಯುವುದಿಲ್ಲ ಎಂದು ಆದೇಶಿಸಿದೆ.
ಜತೆಗೆ, ತನಿಖಾ ಸಂಸ್ಥೆಯು ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ತಡೆಯುವ ಆದೇಶವು ಮೂಲಭೂತವಾಗಿ ತನಿಖೆ ಎದುರಿಸುತ್ತಿರುವ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಕಾಪಾಡಲು ಒದಗಿಸಲಾದ ನ್ಯಾಯಾಂಗ ಗುರಾಣಿಯಾಗಿದೆ. ಅಂತಹ ನಿರ್ದೇಶನವು, ಅದರ ಸಾಮಾನ್ಯ ಕಾನೂನು ಅರ್ಥದಲ್ಲಿ, ತನಿಖಾ ಸಂಸ್ಥೆಯು ಬಂಧನ ಅಥವಾ ವ್ಯಕ್ತಿಯ ಸ್ವಾತಂತ್ರ್ಯದ ಮೇಲೆ ನೇರವಾಗಿ ಪರಿಣಾಮ ಬೀರುವ ಇತರ ಕ್ರಮಗಳನ್ನು ಆಶ್ರಯಿಸುವುದನ್ನು ನಿಷೇಧಿಸುತ್ತದೆ. ಆದರೂ, ತನಿಖೆಯನ್ನು ಮುಂದುವರಿಸಲು, ಸಾಕ್ಷ್ಯ ಸಂಗ್ರಹಿಸಲು, (ಜಾರಿ ನಿರ್ದೇಶನಾಲಯದಿಂದ) ಪ್ರಾಸಿಕ್ಯೂಷನ್ ದೂರು ಸಲ್ಲಿಸಲು ಅಥವಾ ಇತರ ಶಾಸನಬದ್ಧ ಪರಿಹಾರಗಳನ್ನು ಕೋರಲು ಕಾನೂನುಬದ್ಧ ಅಧಿಕಾರವನ್ನು ಅದು ನಿರಾಕರಿಸುವುದಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
ಆದೇಶ ವ್ಯಾಪ್ತಿಯ ಬಗ್ಗೆ ಹೈಕೋರ್ಟ್ ವಿವರಣೆ:
ನ್ಯಾಯಾಲಯ ಹೊರಡಿಸುವ 'ಬಲವಂತದ ಕ್ರಮ ಬೇಡ' ಎಂಬ ಆದೇಶವು ಆರೋಪಿಯ ವಿರುದ್ಧ ಯಾವುದೇ 'ಆತುರದ ಕ್ರಮಗಳನ್ನು' ತೆಗೆದುಕೊಳ್ಳಬಾರದು ಎಂದು ನಿರ್ದೇಶಿಸುವ ಆದೇಶಕ್ಕಿಂತ ಕಿರಿದಾದ ವ್ಯಾಪ್ತಿಯನ್ನು ಹೊಂದಿದೆ ಎಂದಿರುವ ನ್ಯಾಯಪೀಠ, 'ಬಲವಂತದ ಕ್ರಮ ಕೈಗೊಳ್ಳಬಾರದು' ಎಂದು ನಿರ್ದೇಶಿಸುವ ಆದೇಶವು ಆರೋಪಿಯನ್ನು ಅಥವಾ ಅಂತಹ ಆದೇಶವನ್ನು ಜಾರಿಗೊಳಿಸಿದ ಯಾವುದೇ ವ್ಯಕ್ತಿಯನ್ನು ಬಂಧಿಸಬಾರದು ಎಂದರ್ಥ. ಯಾವುದೇ ಪ್ರಚೋದನಕಾರಿ ಕ್ರಮ ತೆಗೆದುಕೊಳ್ಳಬಾರದು ಎಂದು ನಿರ್ದೇಶಿಸುವ ಆದೇಶವು ವ್ಯಾಪಕವಾಗಿದೆ. ಇದು ತನಿಖಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತಡೆಹಿಡಿಯುತ್ತದೆ ಅಥವಾ ಅಮಾನತುಗೊಳಿಸುತ್ತದೆ. ಅಂದರೆ, ಅದಕ್ಕೆ ಅನುಗುಣವಾಗಿ ನಡೆಯುವ ಎಲ್ಲ ಪ್ರಕ್ರಿಯೆಗಳನ್ನು ತಡೆ ಹಿಡಿಯಲಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣವೇನು?
ಹಣ ದುರ್ಬಳಕೆ ಪ್ರಕರಣವೊಂದರ ಸಂಬಂಧ ತಮಿಳುನಾಡು ಮೂಲದ ಕಂಪನಿಯೊಂದರ ನಿರ್ದೇಶಕಿ ಪವಿತ್ರ ರಾಮಾನುಜಂ ಅವರನ್ನು ಇ.ಡಿ ಆರೋಪಿಯನ್ನಾಗಿ ಮಾಡಿತ್ತು. ಜತೆಗೆ, ಅವರು ಸುಮಾರು 7.9 ಕೋಟಿ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಇಸಿಐಆರ್ ದಾಖಲಿಸಿತ್ತು. ತನಿಖೆಗೆ ಆಗಮಿಸುವಂತೆ ಇ.ಡಿ ಆಕೆಗೆ ಸಮನ್ಸ್ ಜಾರಿಗೊಳಿಸಿತ್ತು.
ಇ.ಡಿ ಸಮನ್ಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಪವಿತ್ರಾ, ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ನ್ಯಾಯಾಲಯಕ್ಕೆ ಮುಚ್ಚಳಿಕೆ ನೀಡಿದ್ದರು. ಅದನ್ನು ದಾಖಲಿಸಿಕೊಂಡಿದ್ದ ನ್ಯಾಯಾಲಯ, ಆಕೆಯ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದೆಂದು ಮಧ್ಯಂತರ ಆದೇಶ ನೀಡಿತ್ತು. ಇದರ ನಡುವೆಯೇ ಇ.ಡಿ ಆಕೆಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ನ್ಯಾಯಾಲಯದ ಮಧ್ಯಂತರ ಅದೇಶವಿದ್ದರೂ ಇ.ಡಿ ಆಸ್ತಿ ಮುಟ್ಟುಗೋಲು ಹಾಕಿಕೊಂಡಿರುವುದು ಕಾನೂನುಬಾಹಿರ ಎಂದು ಆಕ್ಷೇಪಿಸಿ ಪವಿತ್ರಾ ರಾಮಾನುಜಂ ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.






