ಕೆಎಟಿ ಏಕಸದಸ್ಯ ಪೀಠದ ಕೆಲ ಪ್ರಕರಣಗಳನ್ನು ಪೂರ್ಣಪೀಠಕ್ಕೆ ವರ್ಗಾಯಿಸಿದ ಆದೇಶಕ್ಕೆ ಹೈಕೋರ್ಟ್ ತಡೆ

ಬೆಂಗಳೂರು: ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದ (ಕೆಎಟಿ) ಏಕಸದಸ್ಯ ಪೀಠದ ಮುಂದಿನ ಕೆಲ ಆಯ್ದ ಪ್ರಕರಣಗಳನ್ನು ಪೂರ್ಣಪೀಠಕ್ಕೆ ವರ್ಗಾಯಿಸಿದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಮೇಲ್ಮನವಿ ನ್ಯಾಯಾಧೀಕರಣದ ಏಕಸದಸ್ಯ ಪೀಠದ ಮುಂದಿನ ಕೆಲವು ಪ್ರಕರಣಗಳನ್ನು ಪೂರ್ಣಪೀಠಕ್ಕೆ ವರ್ಗಾಯಿಸಿ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದ ಅಧ್ಯಕ್ಷರು 2026ರ ಜುಲೈ 23ರಂದು ಆದೇಶ ಹೊರಡಿಸಿದ್ದರು.
ಈ ಆದೇಶ ಪ್ರಶ್ನಿಸಿ ಸಹಕಾರ ಪ್ರಕರಣಗಳಲ್ಲಿ ಪ್ರಾಧಿಕಾರದ ಮುಂದೆ ಹಾಜರಾಗುವ ವಕೀಲರಾದ ಟಿ.ಎಂ. ಚೌಡಾರೆಡ್ಡಿ, ಟಿ. ದಾದಾಖಲಂದರ್, ರಕ್ಷಿತ್ ಕುಮಾರ್, ಟಿ.ಬಿ. ಸಂದೇಶ್, ವರುಣ್ ಜೆ. ಪಾಟೀಲ್ ಹಾಗೂ ಎರಡು ಸಹಕಾರ ಸಂಘಗಳು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಏಕಸದಸ್ಯ ಪೀಠದ ಮುಂದಿರುವ ಆಯ್ದ ಪ್ರಕರಣಗಳ ವಿಚಾರಣೆಗೆ ಪೂರ್ಣಪೀಠ ರಚಿಸಿ, ಆ ಪ್ರಕರಣಗಳನ್ನು ಪೂರ್ಣಪೀಠಕ್ಕೆ ವರ್ಗಾಯಿಸಿ ನ್ಯಾಯಾಧೀಕರಣದ ಅಧ್ಯಕ್ಷರರು ಹೊರಡಿಸಿರುವ ಆದೇಶಕ್ಕೆ ಮುಂದಿನ ವಿಚಾರಣೆವರೆಗೆ ತಡೆ ನೀಡಿತಲ್ಲದೆ, ಪ್ರತಿವಾದಿಗಳಾದ ರಾಜ್ಯ ಕಾನೂನು ಇಲಾಖೆ, ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದ ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಿತು.




