ಠಾಣೆಗಳಲ್ಲಿ ಸಿಸಿಟಿವಿ ನಿಗಾ ಅಗತ್ಯ : ಹೈಕೋರ್ಟ್

ಸಾಂದರ್ಭಿಕ ಚಿತ್ರ | PC : Image by rawpixel.com on Magnific
ಬೆಂಗಳೂರು : ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾಗಳು ಒಂದು ನಿಮಿಷವೂ ಸ್ಥಗಿತಗೊಳ್ಳದೆ ನಿರಂತರವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಮತ್ತು ರಾಜ್ಯದಾದ್ಯಂತ ಸಿಸಿಟಿವಿ ವ್ಯವಸ್ಥೆಗಳ ಕಾರ್ಯನಿರ್ವಹಣೆಯನ್ನು ಕಡ್ಡಾಯವಾಗಿ ಲೈವ್-ಟ್ರ್ಯಾಕ್ ಮಾಡುವಂತೆ ಪೊಲೀಸ್ ಇಲಾಖೆಗೆ ಹೈಕೋರ್ಟ್ ನಿರ್ದೇಶಿಸಿದೆ.
‘ಮಾಹಿತಿ ಹಕ್ಕು ಕಾಯ್ದೆ 2005ರ ಅಡಿಯಲ್ಲಿ ಮಾಹಿತಿ ನಿರಾಕರಿಸಿ; ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರು ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಿ ಈ ಕುರಿತು ಸೂಕ್ತ ನಿರ್ದೇಶನ ಹೊರಡಿಸಬೇಕು’ ಎಂದು ಕೋರಿ ರಾಮಮೂರ್ತಿ ನಗರದ ವಿ.ಶೈಲಜಾ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಪ್ರಕರಣಕ್ಕೆ ಸಂಬಂಧಿಸಿದ ಕೇಂದ್ರ ಬಿಂದುವಾದ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ 2024ರ ಸೆಪ್ಟಂಬರ್ 4 ಸೇರಿದಂತೆ ಸುಮಾರು ಹನ್ನೊಂದು ತಿಂಗಳು ಯುಪಿಎಸ್ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಸಿಸಿಟಿವಿ ವ್ಯವಸ್ಥೆ ಸ್ಥಗಿತಗೊಂಡಿತ್ತು ಎಂಬ ಪ್ರಾಸಿಕ್ಯೂಷನ್ ಹೇಳಿಕೆ ಯಾವುದೇ ವಿಶ್ವಾಸಾರ್ಹತೆ ಮೂಡಿಸುವುದಿಲ್ಲ. ಸಿಸಿಟಿವಿ ಅಳವಡಿಕೆ ಕೇವಲ ಔಪಚಾರಿಕ ಕ್ರಮವಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
‘ಎಲ್ಲಾ ಸಿಸಿಟಿವಿಗಳು ವರ್ಷದ 365 ದಿವಸ, ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆತಂಕಕಾರಿ ಅಂಶಗಳು ಕಂಡುಬರುತ್ತಿವೆ. ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ವಿದ್ಯುತ್ ಬ್ಯಾಕಪ್ ಇಲ್ಲದ ಸಿಸಿಟಿವಿ ವ್ಯವಸ್ಥೆಯು ವಿದ್ಯುತ್ ವ್ಯತ್ಯಯದ ಸಮಯದಲ್ಲಿ ನಿಷ್ಕ್ರಿಯಗೊಳ್ಳುವ ಸಾಧ್ಯತೆಯಿರುತ್ತದೆ. ಇದರಿಂದ ಕ್ಯಾಮರಾಗಳನ್ನು ಕಡ್ಡಾಯಗೊಳಿಸಿದ ಮೂಲ ಉದ್ದೇಶವೇ ವಿಫಲವಾಗುತ್ತದೆ’ ಎಂದು ಹೇಳಿದೆ.
‘ಈ ನಿಟ್ಟಿನಲ್ಲಿ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು ಈ ವಿಷಯವನ್ನು ಮುತುವರ್ಜಿಯಿಂದ ಪರಿಶೀಲಿಸಬೇಕು’ ಎಂದು ಆದೇಶಿಸಿದ್ದು ರಾಜ್ಯದಾದ್ಯಂತ ಇರುವ ಎಲ್ಲಾ ಪೊಲೀಸ್ ಠಾಣೆಗಳು ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದಂತೆ ಮಧ್ಯಂತರ ಮಾರ್ಗಸೂಚಿ ಬಿಡುಗಡೆ ಮಾಡಿದೆ.






