ವಸತಿ ಶಾಲೆಗಳ ಶಿಕ್ಷಕರ ನೇಮಕಾತಿ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಡಲಿದೆ : ಹೈಕೋರ್ಟ್

ಬೆಂಗಳೂರು: ಮುರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸೇರಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಅಧೀನದ ವಸತಿ ಶಾಲೆಗಳಲ್ಲಿನ ವಿವಿಧ ವಿಷಯಗಳ ಒಟ್ಟು 767 ಶಿಕ್ಷಕರ ನೇಮಕಾತಿಯು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಡಲಿದೆ ಎಂದು ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ಶಿಕ್ಷಕರ ನೇಮಕಾತಿಗೆ 2026ರ ಜುಲೈ 10ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಚಿಕ್ಕಮಗಳೂರಿನ ಸರಪನಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಆರ್. ಜ್ಯೋತಿ ಸೇರಿ ರಾಜ್ಯದ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಇಂದಿರಾಗಾಂಧಿ ವಸತಿ ಶಾಲೆಗಳಲ್ಲಿ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ 55 ಮಂದಿ ಶಿಕ್ಷಕರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ, 2026ರ ಜುಲೈ 10 ಅಧಿಸೂಚನೆಯಂತೆ ನಡೆಯುವ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು ಅರ್ಜಿ ಕುರಿತು ನ್ಯಾಯಾಲಯ ನೀಡುವ ಅಂತಿಮ ತೀರ್ಪಿಗೆ ಒಳಪಡಲಿದೆ ಎಂದು ಮಧ್ಯಂತರ ಆದೇಶ ಮಾಡಿತು.
ಜತೆಗೆ, ಪ್ರತಿವಾದಿಗಳಾದ ರಾಜ್ಯ ಸಮಾಜ ಕಲ್ಯಾಣ ಇಲಾಖೆ, ಕ್ರೈಸ್ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು.




