ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಕಳೆದುಕೊಂಡಾಗ ಭಾವನಾತ್ಮಕ ನಷ್ಟ ಪರಿಹಾರಕ್ಕೂ ಭೂಮಾಲಕರು ಅರ್ಹ : ಹೈಕೋರ್ಟ್

ಬೆಂಗಳೂರು : ಅಭಿವೃದ್ಧಿ ಕಾರ್ಯಗಳಿಗಾಗಿ ಸ್ವಾಧೀನ ಪಡಿಸಿಕೊಳ್ಳಲಾಗುವ ಜಮೀನುಗಳಲ್ಲಿ ರೈತರು ಮೂಲ ಪರಿಹಾರದ ಜತೆಗೆ ಮಾನಸಿಕ ನಷ್ಟಕ್ಕಾಗಿ ಹೆಚ್ಚುವರಿ ಪರಿಹಾರ ಪಡೆದುಕೊಳ್ಳುವ ಹಕ್ಕನ್ನೂ ಹೊಂದಿರುತ್ತಾರೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ವಶಪಡಿಸಿಕೊಳ್ಳಲಾಗಿದ್ದ ಜಮೀನಿನ ಮಾಲೀಕ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಅಮರಾವತಿಯ ಮೃತ ಜಿ. ಸಿದ್ದರಾಮಯ್ಯ ಎಂಬುವರ ವಾರಸುದಾರರು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡುವ ಸಂಬಂಧದ ಆದೇಶಗಳಲ್ಲಿ ಮಾನಸಿಕ ನಷ್ಟಕ್ಕೆ ಪರಿಹಾರ ಹಾಗೂ ಬಡ್ಡಿ ನಮೂದಿಸಿಲ್ಲ ಎಂಬ ಕಾರಣಕ್ಕೆ ಅದನ್ನು ನಿರಾಕರಿಸುವುದು ಸಂವಿಧಾನದ ಪರಿಚ್ಛೇದ 14 ಮತ್ತು 300ಎ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಭೂ ಸ್ವಾಧೀನ ಕಾಯ್ದೆಯ ಸೆಕ್ಷನ್ 23(2)ರ ಅಡಿಯಲ್ಲಿ ಮಾನಸಿಕ ನಷ್ಟ ಅಥವಾ ಭಾವನಾತ್ಮಕ ಪರಿಹಾರ ಹಾಗೂ ಸೆಕ್ಷನ್ 28ರ ಅಡಿಯಲ್ಲಿ ಬಡ್ಡಿ ಪಡೆಯುವ ಕಾನೂನುಬದ್ಧ ಹಕ್ಕು ಇರಲಿದೆ. ಆದ್ದರಿಂದ, ಸಂತ್ರಸ್ತರಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಭಾವನಾತ್ಮಕ ನಷ್ಟ ಮತ್ತು ಬಡ್ಡಿ ಸೌಲಭ್ಯಗಳನ್ನು ಲೆಕ್ಕ ಹಾಕಿ ಸೂಕ್ತ ಆದೇಶ ಹೊರಡಿಸಬೇಕು ಎಂದು ವಿಶೇಷ ಭೂಸ್ವಾಧೀನ ಅಧಿಕಾರಿಗೆ ನ್ಯಾಯಪೀಠ ನಿರ್ದೇಶಿಸಿದೆ.
ಪ್ರಕರಣವೇನು?
ಜಿ. ಸಿದ್ದರಾಮಯ್ಯ ಅವರಿಗೆ ಸೇರಿದ ಜಮೀನನ್ನು 2009ರಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಪರಿಹಾರ ಪಡೆಯುವುದಕ್ಕಾಗಿ ನಡೆಯುತ್ತಿದ್ದ ನ್ಯಾಯಾಂಗ ಹೋರಾಟದ ಮಧ್ಯೆ ಸಿದ್ದರಾಮಯ್ಯ ಮೃತಪಟ್ಟಿದ್ದರು. ಅವರ ವಾರಸುದಾರರು ಕಾನೂನು ಪ್ರಕ್ರಿಯೆ ಮುಂದುವರಿಸಿದ್ದರು. ಸ್ವಾಧೀನಪಡಿಸಿಕೊಂಡ ಜಮೀನಿಗೆ ವಿಶೇಷ ಭೂಸ್ವಾಧೀನ ಅಧಿಕಾರಿ ನಿಗದಿಪಡಿಸಿದ್ದ ಪರಿಹಾರ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಸಿದ್ದರಾಮಯ್ಯ ವಾರಸುದಾರರು, ಭೂ ಸ್ವಾಧೀನಕ್ಕಾಗಿ ಪರಿಹಾರ ನೀಡುವ ಕುರಿತು ಹೊರಡಿಸಲಾಗಿದ್ದ ಆದೇಶ ರದ್ದುಪಡಿಸಬೇಕು ಹಾಗೂ ಮಾರುಕಟ್ಟೆ ಮೌಲ್ಯದ ಪರಿಹಾರದ ಹೊರತಾಗಿಯೂ ಭಾವನಾತ್ಮಕ ಪರಿಹಾರ ಹಾಗೂ ಸ್ವಾಧೀನದ ದಿನದಿಂದ ಬಡ್ಡಿ ಪಾವತಿ ಮಾಡಬೇಕು ಎಂದು ಕೋರಿದ್ದರು.






