ಪ್ರದೂಷ್ ಮಾಫಿ ಸಾಕ್ಷಿಯಾಗಿ ಪರಿಗಣಿಸಿದ ಕ್ರಮ ಪ್ರಶ್ನಿಸಿ ದರ್ಶನ್ ಅರ್ಜಿ; ಬುಧವಾರ ಆದೇಶ ಪ್ರಕಟಿಸಲಿರುವ ಹೈಕೋರ್ಟ್

ದರ್ಶನ್/ರೇಣುಕಾಸ್ವಾಮಿ
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ (ಎ14) ಪ್ರದೂಷ್ ಎಸ್. ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದ ನಗರದ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ರದ್ದು ಕೋರಿ ನಟ ದರ್ಶನ್ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್ ಬುಧವಾರ ಬೆಳಗ್ಗೆ ಪ್ರಕಟಿಸಲಿದೆ.
ಪ್ರಕರಣದ 2ನೇ ಆರೋಪಿ ದರ್ಶನ್ ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಬೆಳಗ್ಗೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿತು.
ಇದೇ ವೇಳೆ, ಪ್ರದೂಷ್ ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಮುನ್ನ ಪ್ರೊಬೇಷನ್ ಅಧಿಕಾರಿಯಿಂದ ವರದಿ ಪಡೆದಿರುವ ಕ್ರಮಕ್ಕೆ ಸೀಮಿತವಾಗಿ ವಿಚಾರಣಾ ನ್ಯಾಯಾಲಯದ (ಸೆಷನ್ಸ್ ಕೋರ್ಟ್) ಆದೇಶವನ್ನು ರದ್ದುಪಡಿಸಲಾಗುವುದು. ಪ್ರದೂಷ್ ಅವರ ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಕೋರಿಕೆಯನ್ನು ಮತ್ತೆ ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಲಾಗುವುದು. ಎರಡು ದಿನದಲ್ಲಿ ಹೊಸದಾಗಿ ಆದೇಶ ಹೊರಡಿಸುವಂತೆ ನಿರ್ದೇಶಿಸಲಾಗುವುದು ಎಂದು ನ್ಯಾಯಪೀಠ ಮೌಖಿಕವಾಗಿ ತಿಳಿಸಿದೆ.
ಇದಕ್ಕೂ ಮುನ್ನ ವಿಚಾರಣೆ ವೇಳೆ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿ, ಪ್ರಕರಣದ 14ನೇ ಆರೋಪಿಯಾಗಿದ್ದ ಪ್ರದೂಷ್ ರಾವ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಹೊರಡಿಸಿದ ಆದೇಶದಲ್ಲಿ ವಿಚಾರಣಾ ನ್ಯಾಯಾಲಯ ಅಸ್ವಿತ್ವದಲ್ಲಿಲ್ಲದ ಕಾನೂನು ಪ್ರಕ್ರಿಯೆ ಅನುಸರಿಸಿದೆ. ಪ್ರೊಬೇಷನ್ ಅಧಿಕಾರಿಯಿಂದ ಪ್ರದೂಷ್ ಬಗ್ಗೆ ವರದಿ ಪಡೆದಿದೆ. ಪ್ರದೂಷ್ ಒಳ್ಳೆಯ ವ್ಯಕ್ತಿ ಎಂದು ಪ್ರೊಬೇಷನ್ ಅಧಿಕಾರಿ ವರದಿ ನೀಡಿದ್ದಾರೆ. ಆರೋಪಿಯನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಾಗ ಯಾವ ಕಾನೂನು ಪ್ರಕ್ರಿಯೆಯನ್ನು ಅನುಸರಿಸಬೇಕೋ ಅದನ್ನೇ ಅನುಸರಿಸಬೇಕು ಎಂದರು.
ಮುಂದುವರಿದು, ಬೇರೆ ಪ್ರತ್ಯಕ್ಷ ಸಾಕ್ಷಿಗಳೇ ಇಲ್ಲದಿದ್ದಾಗ ಮಾತ್ರ ಮಾಫಿ ಸಾಕ್ಷಿ ಪರಿಗಣಿಸಬೇಕು. ಆದರೆ, ಈ ಪ್ರಕರಣದಲ್ಲಿ ಬೇರೆ ಇಬ್ಬರು ಪ್ರತ್ಯಕ್ಷ ಸಾಕ್ಷಿಗಳಿದ್ದಾರೆ. ಹೀಗಿದ್ದರೂ ಪ್ರದೂಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಈ ಕ್ರಮ ಸರಿಯಲ್ಲ. ವಿಚಾರಣಾ ನ್ಯಾಯಾಲಯ ಸ್ವತಃ ಪ್ರಾಸಿಕ್ಯೂಟರ್ ಪಾತ್ರವನ್ನು ನಿರ್ವಹಿಸಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಕಾಮಾಕ್ಷಿಪಾಳ್ಯ ಠಾಣೆ ತನಿಖಾಧಿಕಾರಿಗಳ ಪರ ವಾದ ಮಂಡಿಸಿದ ಎಸ್ಪಿಪಿ ಪ್ರಸನ್ನ ಕುಮಾರ್, ಪ್ರೊಬೇಷನ್ ಅಧಿಕಾರಿಯ ವರದಿ ಕೇಳಿರುವುದಕ್ಕೆ ವಿಚಾರಣಾ ನ್ಯಾಯಾಲಯ ತನ್ನ ಆದೇಶದಲ್ಲಿ ಕಾರಣ ನೀಡಿದೆ. ಪ್ರೊಬೇಷನ್ ಅಧಿಕಾರಿಯಿಂದ ವರದಿ ಪಡೆಯುವುದು ಕಾನೂನಿನಲ್ಲಿ ಕಡ್ಡಾಯವೇನಿಲ್ಲ. ಪ್ರೊಬೇಷನ್ ಅಧಿಕಾರಿಯಿಂದ ವರದಿ ಪಡೆಯಲು ಪ್ರಾಸಿಕ್ಯೂಷನ್ ಸಹ (ತನಿಖಾಧಿಕಾರಿಗಳು) ವಿಚಾರಣಾ ನ್ಯಾಯಾಲಯವನ್ನು ಕೇಳಿರಲಿಲ್ಲ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರೊಬೇಷನ್ ಅಧಿಕಾರಿಯಿಂದ ವರದಿ ಪಡೆಯಲು ಕಾನೂನು ಎಲ್ಲಿದೆ? ಪ್ರೊಬೇಷನ್ ಅಧಿಕಾರಿಯ ವರದಿ ರದ್ದುಪಡಿಸಬಹುದಲ್ಲವೇ ಎಂದು ಎಸ್ಪಿಪಿ ಅವರನ್ನು ಪ್ರಶ್ನಿಸಿತು.
ಅಂತಿಮವಾಗಿ, ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳ ಕೊರತೆ ವಿಚಾರವು ಮೆರಿಟ್ ಅಂಶಕ್ಕೆ ಸಂಬಂಧಪಟ್ಟಿದೆ. ಮೆರಿಟ್ ಆಧಾರದಲ್ಲಿ ಈ ಅರ್ಜಿಯನ್ನು ಪರಿಣಿಸಲಾಗದು. ಪ್ರೊಬೇಷನ್ ಅಧಿಕಾರಿಯಿಂದ ವರದಿ ಪಡೆದ ಕ್ರಮವನ್ನು ಮಾತ್ರ ಪರಿಗಣಿಸಲಾಗುವುದು ಎಂದು ಮೌಖಿಕವಾಗಿ ನುಡಿದ ನ್ಯಾಯಪೀಠ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.






