ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಮೂವರು ನ್ಯಾಯಾಂಗ ಅಧಿಕಾರಿಗಳ ಹೆಸರು ಶಿಫಾರಸು ಮಾಡಿದ ಕೊಲಿಜಿಯಂ

ಬೆಂಗಳೂರು : ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಮೂವರು ನ್ಯಾಯಾಂಗ ಅಧಿಕಾರಿಗಳನ್ನು ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಗುರುವಾರ ಶಿಫಾರಸು ಮಾಡಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದಲ್ಲಿ ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹಾಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಉಷಾರಾಣಿ, ಕೆ.ಎಸ್. ಭರತ್ ಕುಮಾರ್ ಮತ್ತು ನೆರಳೆ ವೀರಭದ್ರಯ್ಯ ಭವಾನಿ ಅವರ ಹೆಸರನ್ನು ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಬಡ್ತಿ ನೀಡಲು ಶಿಫಾರಸು ಮಾಡಲಾಗಿದೆ.
ಕೊಲಿಜಿಯಂ ಶಿಫಾರಸಿಗೆ ಕೇಂದ್ರ ಸರ್ಕಾರದ ಅನುಮೋದನೆ ದೊರೆತು, ರಾಷ್ಟ್ರಪತಿಗಳು ನೇಮಕಾತಿ ಆದೇಶ ಹೊರಡಿಸಿದ ಬಳಿಕ ಮೂವರೂ ನ್ಯಾಯಾಂಗ ಅಧಿಕಾರಿಗಳು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ರಾಜ್ಯ ಹೈಕೋರ್ಟ್‌ಗೆ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆ ಮಂಜೂರಾಗಿದ್ದು, ಸದ್ಯ 54 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಎಂಟು ಹುದ್ದೆಗಳು ಖಾಲಿ ಇವೆ. ಈ ಮೂವರ ನೇಮಕಾತಿ ಪೂರ್ಣಗೊಂಡರೆ ಕಾರ್ಯನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳ ಸಂಖ್ಯೆ 57ಕ್ಕೆ ಏರಲಿದ್ದು, ಖಾಲಿ ಹುದ್ದೆಗಳ ಸಂಖ್ಯೆ ಐದಕ್ಕೆ ಇಳಿಯಲಿದೆ.






