ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿಗೆ 2.82 ಕೋಟಿ ರೂ. ಪರಿಹಾರ ಪಾವತಿಸಲು ಪಾಲಿಕೆಗೆ ಹೈಕೋರ್ಟ್ ಆದೇಶ

ಬೆಂಗಳೂರು : ಅಪಾಯಕಾರಿ ಮರದ ಕೊಂಬೆ ರಸ್ತೆ ಮೇಲೆ ಬೀಳುವ ಸಾಧ್ಯತೆಯ ಬಗ್ಗೆ ಮುಂಚಿತವಾಗಿ ಮಾಹಿತಿ ಇದ್ದರೂ ತುರ್ತು ಕ್ರಮ ಕೈಗೊಳ್ಳದ ಬಿಬಿಎಂಪಿ (ಹಾಲಿ ಜಿಬಿಎ) ನಿರ್ಲಕ್ಷ್ಯ ಧೋರಣೆಯನ್ನು ತೀವ್ರವಾಗಿ ಖಂಡಿಸಿರುವ ಹೈಕೋರ್ಟ್, ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಜಿ. ಚಂದನ್ ಎಂಬಾತನಿಗೆ 2.82 ಕೋಟಿ ರೂ. ಪರಿಹಾರ ಘೋಷಿಸಿದೆ.
ಗಾಯಾಳು ಚಂದನ್ (38) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿದಾರನಿಗೆ ಶೇ.6 ಬಡ್ಡಿಯೊಂದಿಗೆ ಪರಿಹಾರ ಧನ ಪಾವತಿಸುವಂತೆ ಆದೇಶಿಸಿದೆ. ಇದೇ ವೇಳೆ, ಬೆಂಗಳೂರು ನಗರದಲ್ಲಿನ ಅಪಾಯಕಾರಿ ಮರಗಳ ತೆರವು ಸೇರಿದಂತೆ ಸಾರ್ವಜನಿಕ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಹಲವು ನಿರ್ದೇಶನಗಳನ್ನು ನೀಡಿದೆ.
ಅಪಾಯದ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಬಂದ ಬಳಿಕವೂ ಮರ ಖಾಸಗಿ ಜಾಗದಲ್ಲಿದ್ದರೂ ಸಾರ್ವಜನಿಕ ರಸ್ತೆ ಮತ್ತು ಜನರ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಳ್ಳುವುದು ಬಿಬಿಎಂಪಿಯ ಕಾನೂನುಬದ್ಧ ಕರ್ತವ್ಯ. ಅಪಾಯ ತಿಳಿದಿದ್ದ ಸಂದರ್ಭದಲ್ಲಿ ಪ್ರಕೃತಿ ಕಾರಣವನ್ನು ನೆಪವಾಗಿ ಬಳಸಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪರಿಹಾರ ಮೊತ್ತದಲ್ಲಿ ಬಿಬಿಎಂಪಿ ಈಗಾಗಲೇ ಪಾವತಿಸಿರುವ 5 ಲಕ್ಷ ರೂ.ಗಳನ್ನು ಕಡಿತಗೊಳಿಸಿ, ಉಳಿದ 2,77,29,695 ರೂ. ಗಳನ್ನು ಅರ್ಜಿದಾರರಿಗೆ ಪಾವತಿಸಬೇಕು. ಅಪಘಾತ ಸಂಭವಿಸಿದ 2024ರ ಮಾರ್ಚ್ 7ರಿಂದ ಪರಿಹಾರ ಪಾವತಿಸುವ ದಿನದವರೆಗೆ ಶೇ.6 ವಾರ್ಷಿಕ ಬಡ್ಡಿ ಅನ್ವಯಿಸುತ್ತದೆ. ಬಿಬಿಎಂಪಿ ಮತ್ತು ಸಂಬಂಧಿತ ನಗರ ಸ್ಥಳೀಯ ಸಂಸ್ಥೆಗಳು ತೀರ್ಪಿನ ಪ್ರತಿ ದೊರೆತ 12 ವಾರಗಳೊಳಗೆ ಆರ್‌ಟಿಜಿಎಸ್ ಮೂಲಕ ಪರಹಾರದ ಮೊತ್ತ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಶಾಲೆ ಈಗಾಗಲೇ 3 ಲಕ್ಷ ಪಾವತಿಸಿದ್ದು, ಚಂದನ್ ಅವರ ಮಗಳಿಗೆ 12ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡುವುದಾಗಿ ನೀಡಿರುವ ಭರವಸೆಯನ್ನು ಪಾಲಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನಗಳು:
* ಮರಗಳಷ್ಟೇ ಅಲ್ಲದೆ ಸಾರ್ವಜನಿಕರಿಗೆ ಅಪಾಯ ತಂದೊಡ್ಡಬಹುದಾದ ಎಲ್ಲ ಅಂಶಗಳ ಕುರಿತು ರಾಜ್ಯ ಸರ್ಕಾರ ಸಮಗ್ರ ಸುರಕ್ಷತಾ ವ್ಯವಸ್ಥೆ ರೂಪಿಸಬೇಕು.
* ಗುಂಡಿಗಳು, ತೆರೆದ ಮ್ಯಾನ್ ಹೋಲ್‌ಗಳು ಮತ್ತು ಚರಂಡಿಗಳು, ವಿದ್ಯುತ್ ಅಪಾಯ, ಅಪಾಯಕಾರಿ ಕಟ್ಟಡಗಳು ಮತ್ತು ನಿರ್ಮಾಣ ಕಾಮಗಾರಿಗಳನ್ನು ಗುರುತಿಸಬೇಕು. ಅವುಗಳ ಕುರಿತು ನಾಗರಿಕರು ಫೋಟೋ, ವಿಡಿಯೊ ಮತ್ತು ಸ್ಥಳದ ಮಾಹಿತಿಯೊಂದಿಗೆ ದೂರು ಸಲ್ಲಿಸಲು ಸಾಮಾನ್ಯ ಡಿಜಿಟಲ್ ವ್ಯವಸ್ಥೆ ರೂಪಿಸಬೇಕು.
* ಪ್ರತಿ ದೂರಿಗೆ ವಿಶಿಷ್ಟ ಗುರುತು ಸಂಖ್ಯೆ ನೀಡಿ, ದೂರು ಸ್ವೀಕೃತಿಯಿಂದ ಪರಿಹಾರವಾಗುವವರೆಗೆ ಅದರ ವಸ್ತುಸ್ಥಿತಿ ಪರಿಶೀಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಬೇಕು.
* ಅಪಾಯಗಳನ್ನು ತುರ್ತು, ಹೆಚ್ಚು, ಮಧ್ಯಮ ಮತ್ತು ಸಾಮಾನ್ಯ ಎಂದು ವರ್ಗೀಕರಿಸಿ, ತಕ್ಷಣದ ರಕ್ಷಣಾತ್ಮಕ ಕ್ರಮಗಳನ್ನು ಶಾಶ್ವತವಾಗಿ ಕೈಗೊಳ್ಳಬೇಕು.
* ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ವ್ಯವಸ್ಥೆಗಳನ್ನು ಅಪಾಯ ಗುರುತಿಸಲು ಬಳಸಬಹುದಾದರೂ, ಕಾನೂನು ಉಲ್ಲಂಘನೆ ಅಥವಾ ಹೊಣೆಗಾರಿಕೆ ನಿರ್ಧರಿಸುವ ಅಧಿಕಾರವನ್ನು ಅವುಗಳಿಗೆ ನೀಡಬಾರದು.
* ಬೆಂಗಳೂರು ನಗರದಲ್ಲಿ ಮೊದಲು ಈ ವ್ಯವಸ್ಥೆ ಜಾರಿಗೆ ತರಬೇಕು ಮತ್ತು ಮುಖ್ಯ ನಿರ್ದೇಶನಗಳನ್ನು ಆರು ತಿಂಗಳೊಳಗೆ ಅನುಷ್ಠಾನಗೊಳಿಸಬೇಕು.
* ಅಪಾಯಕಾರಿ ಮರಗಳ ನಿರ್ವಹಣಾ ಕ್ರಮಗಳನ್ನು ಮೂರು ತಿಂಗಳೊಳಗೆ ಪರಿಶೀಲಿಸಿ ಸುಧಾರಣಾ ಕ್ರಮ ಜರುಗಿಸಬೇಕು.
ಪ್ರಕರಣವೇನು?
ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಚಂದನ್ 2024ರ ಮಾರ್ಚ್ 7ರಂದು ಬೆಳಗ್ಗೆ ಸುಮಾರು 10 ಗಂಟೆಗೆ ಕಚೇರಿಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿತ್ತು. ಬೆಂಗಳೂರಿನ ಶಾಂತಲಾ ನಗರದ ಗುಡ್ ಶೆಫರ್ಡ್ ಕಾನ್ವೆಂಟ್ ಶಾಲೆಯ ಆವರಣದಲ್ಲಿದ್ದ ಮರದ ದಪ್ಪ ಕೊಂಬೆ ಚಂದನ್ ಕುತ್ತಿಗೆಯ ಮೇಲೆ ಬಿದ್ದಿತ್ತು. ಇದರಿಂದ, ಅವರ ಬೆನ್ನುಹುರಿಗೆ ಗಂಭೀರ ಗಾಯವಾಗಿದ್ದು, ತಕ್ಷ ಣ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ನಂತರ ಅವರು ಟ್ರಾಮಾಟಿಕ್ ಪ್ಯಾರಾಪ್ಲೀಜಿಯಾ ಸಮಸ್ಯೆಗೆ ಒಳಗಾಗಿದ್ದರು.
ಅಪಾಯಕಾರಿ ಕೊಂಬೆಯ ಬಗ್ಗೆ ಗುಡ್ ಶೆಫರ್ಡ್ ಕಾನ್ವೆಂಟ್ ಶಾಲೆ 2024ರ ಫೆಬ್ರವರಿ 16ರಂದು ಬಿಬಿಎಂಪಿಗೆ ಪತ್ರ ಬರೆದಿತ್ತು. ಆ ಪತ್ರವನ್ನು ಫೆಬ್ರವರಿ 22ರಂದು ಬಿಬಿಎಂಪಿಗೆ ಸಲ್ಲಿಸಲಾಗಿತ್ತು. ಕೊಂಬೆ ಯಾವಾಗ ಬೇಕಾದರೂ ಮುರಿದು ಬೀಳಬಹುದು ಮತ್ತು ಮಕ್ಕಳು, ನಿವಾಸಿಗಳು ಹಾಗೂ ವಾಹನಗಳಿಗೆ ತುಂಬಾ ಅಪಾಯಕಾರಿ ಎಂದು ಶಾಲೆಯ ಪತ್ರದಲ್ಲಿ ವಿವರಿಸಲಾಗಿತ್ತು. ಆದರೆ, ಅಪಘಾತ ಸಂಭವಿಸಿದ ದಿನ ಅಂದರೆ ಮಾರ್ಚ್ 7ರಂದು ಬಿಬಿಎಂಪಿ ಕೊಂಬೆ ಕತ್ತರಿಸಲು ಅನುಮತಿ ನೀಡಿತ್ತು.






