ಸಾಮಾಜಿಕ ಜಾಲತಾಣದ ಪೋಸ್ಟ್ ವಿರುದ್ಧದ ದೂರು; ಪೊಲೀಸರು ಅನುಸರಿಸಬೇಕಾದ ಕ್ರಮಗಳ ಮಾರ್ಗಸೂಚಿ ರೂಪಿಸಿದ ಹೈಕೋರ್ಟ್

ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್ಗಳ ವಿರುದ್ಧ ದೂರು ಬಂದಾಗ ಅಪರಾಧದ ಅಗತ್ಯ ಅಂಶಗಳಿವೆಯೇ ಎಂಬುದನ್ನು ಪರಿಶೀಲಿಸಬೇಕು. ಟೀಕೆ ಅಥವಾ ಭಿನ್ನಾಭಿಪ್ರಾಯವನ್ನು ಯಾಂತ್ರಿಕವಾಗಿ ಕೋಮು ದ್ವೇಷ ಪ್ರಚೋದನೆಯ ಅಪರಾಧದ ವ್ಯಾಪ್ತಿಗೆ ತರಬಾರದು ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಇಂತಹ ಪ್ರಕರಣಗಳಲ್ಲಿ ಪೊಲೀಸರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಆರು ಅಂಶಗಳ ಮಾರ್ಗಸೂಚಿಯನ್ನು ಹೊರಡಿಸಿದೆ.
ಪುತ್ತೂರಿನಲ್ಲಿ ಮಹಿಳೆಯನ್ನು ಹಿಂಬಾಲಿಸಿ ಬೆದರಿಸಿದ ಘಟನೆಗೆ ಸಂಬಂಧಿಸಿದ ಸುದ್ದಿ ಮರುಹಂಚಿಕೊಂಡಿದ್ದ ಎಕ್ಸ್ ಖಾತೆಯ ನಿರ್ವಾಹಕ ಸಂದೀಪ್ ಕುಮಾರ್ ವಿರುದ್ಧದ ಎಫ್ಐಆರ್ ರದ್ದುಪಡಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಕಾನೂನು ಬಂಧನದ ಅಧಿಕಾರ ನೀಡುತ್ತದೆ; ಆದರೆ ಅದನ್ನು ಬಳಸುವ ಸಮರ್ಥನೆ ವಾಸ್ತವಾಂಶ ಆಧಾರಿತ, ಸಮಂಜಸ ಮತ್ತು ಸಾಂವಿಧಾನಿಕವಾಗಿ ಸಮರ್ಥನೀಯವಾಗಿರಬೇಕು. ಏಳು ವರ್ಷಗಳವರೆಗೆ ಶಿಕ್ಷೆಯಿರುವ ಅಪರಾಧಗಳಲ್ಲಿ ಬಂಧನ ಅಗತ್ಯವಿಲ್ಲದಿದ್ದರೆ ಸಾಮಾನ್ಯವಾಗಿ ನೋಟಿಸ್ ಪ್ರಕ್ರಿಯೆ ಅನುಸರಿಸಬೇಕು. ನೋಟಿಸ್ ಪಾಲಿಸಿಲ್ಲ ಎಂಬ ಕಾರಣದಿಂದಲೂ ಬಂಧನ ಅನಿವಾರ್ಯವಾಗುವುದಿಲ್ಲ; ಅದರ ಅಗತ್ಯವನ್ನು ಪ್ರತ್ಯೇಕವಾಗಿ ನಿರ್ಧರಿಸಿ ಕಾರಣಗಳನ್ನು ಲಿಖಿತವಾಗಿ ದಾಖಲಿಸಬೇಕು ಎಂದು ನ್ಯಾಯಾಲು ಆದೇಶದಲ್ಲಿ ವಿವರಿಸಿದೆ.
ಅರ್ಜಿದಾರರು ಹೊಸ ಘಟನೆ ಸೃಷ್ಟಿಸಿ ಪ್ರಕಟಿಸಿಲ್ಲ; ಈಗಾಗಲೇ ವರದಿಯಾಗಿದ್ದ ಘಟನೆಯನ್ನು ಕಾನೂನು-ಸುವ್ಯವಸ್ಥೆ ಕುರಿತ ಆತಂಕದೊಂದಿಗೆ ಮರುಹಂಚಿಕೊಂಡಿದ್ದಾರೆ. ಆ ಪೋಸ್ಟ್ನಲ್ಲಿ ಕೋಮು-ದ್ವೇಷ ಸೃಷ್ಟಿಸುವ ಅಗತ್ಯ ಅಂಶಗಳಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಒಂದು ಘಟನೆ-ಏಳು ಎಫ್ಐಆರ್:
ಒಂದೇ ಘಟನೆ ಅಥವಾ ಬಹುತೇಕ ಒಂದೇ ರೀತಿಯ ಸಾಮಾಜಿಕ ಜಾಲತಾಣದ ಅಭಿವ್ಯಕ್ತಿಗೆ ಸಂಬಂಧಿಸಿ ಸರಣಿ ಪ್ರಕರಣ ದಾಖಲಿಸುವುದು ಹಾಗೂ ಕಾನೂನು-ಸಾಂವಿಧಾನಿಕ ರಕ್ಷಣೆಗಳನ್ನು ಪಾಲಿಸದೆ ಪೊಲೀಸ್ ಅಧಿಕಾರ ಬಳಸುವ ಬಗ್ಗೆ ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ. ಒಂದೇ ಘಟನೆಗೆ ಸಂಬಂಧಿಸಿದಂತೆ ಅದೇ ಠಾಣೆಯಲ್ಲಿ ಏಳು ಪ್ರಕರಣ ದಾಖಲಾಗಿರುವುದನ್ನು ಗಮನಿಸಿದ ಹೈಕೋರ್ಟ್, ಅಪರಾಧದ ಅಗತ್ಯ ಅಂಶಗಳಿಲ್ಲದಿದ್ದರೂ, ಒಂದೇ ಘಟನೆ ಕುರಿತ ವರದಿಗೆ ಸಂಬಂಧಿಸಿ ಪ್ರಕರಣದ ಮೇಲೆ ಪ್ರಕರಣ ದಾಖಲಿಸಿರುವುದು ಆಘಾತಕಾರಿ. ದೂರಿನಲ್ಲಿ ದಂಡನಾ ಸೆಕ್ಷನ್ನ ಭಾಷೆ ಬಳಸಿರುವುದಷ್ಟೇ ಸಾಕಾಗದು; ಆ ಅಪರಾಧವನ್ನು ರೂಪಿಸುವ ನಿರ್ದಿಷ್ಟ ವಾಸ್ತವಾಂಶಗಳಿರಬೇಕು. ಬಿಎನ್ಎಸ್ ಸೆಕ್ಷನ್ 353(2) ಅನ್ವಯಿಸುವಾಗ ಹೇಳಿಕೆ ಅಥವಾ ವರದಿಯ ಸ್ವರೂಪ, ಅಗತ್ಯ ಅಪರಾಧಿಕ ಉದ್ದೇಶ ಹಾಗೂ ವಿವಿಧ ಗುಂಪು-ಸಮುದಾಯಗಳೊಂದಿಗೆ ಅದರ ಸಂಬಂಧವನ್ನು ಪರಿಶೀಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಹೈಕೋರ್ಟ್ ಮಾರ್ಗಸೂಚಿಗಳು:
* ಸಾಮಾಜಿಕ ಜಾಲತಾಣದ ಪೋಸ್ಟ್, ಹೇಳಿಕೆ ಅಥವಾ ಅಭಿವ್ಯಕ್ತಿ ಕುರಿತು ದೂರು ಬಂದಾಗ, ಅದರಲ್ಲಿನ ಆರೋಪಗಳನ್ನು ಇದ್ದಂತೆಯೇ ಸ್ವೀಕರಿಸಿದರೂ ಸಂಬಂಧಿತ ಅಪರಾಧದ ಅಗತ್ಯ ಅಂಶಗಳು ಕಂಡುಬರುತ್ತವೆಯೇ ಎಂಬುದನ್ನು ಪೊಲೀಸರು ಪರಿಶೀಲಿಸಬೇಕು.
* ಒಂದೇ ಘಟನೆ, ವ್ಯವಹಾರ ಅಥವಾ ಬಹುತೇಕ ಒಂದೇ ಸಾಮಾಜಿಕ ಜಾಲತಾಣದ ಅಭಿವ್ಯಕ್ತಿಗೆ ಸಂಬಂಧಿಸಿ ಈಗಾಗಲೇ ಪ್ರಕರಣ ದಾಖಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಪ್ರಕರಣ ಒಂದೇ ಆದರೂ ದೂರುದಾರರು ಬೇರೆ ಎಂಬ ಕಾರಣಕ್ಕೆ ಹೊಸ ಎಫ್ಐಆರ್ ದಾಖಲಿಸಬಾರದು.
* ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಸೆಕ್ಷನ್ 173(3) ಹಾಗೂ ಸುಪ್ರೀಂಕೋರ್ಟ್ ತೀರ್ಪುಗಳ ಪ್ರಕಾರ ಪ್ರಾಥಮಿಕ ವಿಚಾರಣೆ ನಡೆಸಲು ಅವಕಾಶವಿರುವ ಪ್ರಕರಣಗಳಲ್ಲಿ ಅದರ ಅಗತ್ಯ ಪರಿಗಣಿಸಬೇಕು. ವಿಚಾರಣೆ ಅಗತ್ಯತೆ, ಅನುಮತಿ, ಕಾನೂನಿನ ಷರತ್ತು ಮತ್ತು ಕಾಲಮಿತಿಗೆ ಅನುಗುಣವಾಗಿ ನಡೆಸಬೇಕು.
* ಸೆಕ್ಷನ್ 353(2) ಅನ್ವಯಿಸುವ ಮೊದಲು ನಿರ್ದಿಷ್ಟ ಪರಿಶೀಲನೆ: ಆಕ್ಷೇಪಿತ ಹೇಳಿಕೆ, ವದಂತಿ ಅಥವಾ ವರದಿಯಲ್ಲಿ ಸೆಕ್ಷನ್ 353(2) ಅನ್ವಯಿಸಲು ಅಗತ್ಯ ಉದ್ದೇಶ ಹಾಗೂ ಸಂಬಂಧಿತ ವರ್ಗ-ಸಮುದಾಯಗಳಿಗೆ ಸಂಬಂಧಿಸಿದ ಅಂಶಗಳಿವೆಯೇ ಎಂಬುದನ್ನು ಪರಿಶೀಲಿಸಬೇಕು.
* ಎಫ್ಐಆರ್ ದಾಖಲಿಸುವುದು ಮತ್ತು ಬಂಧಿಸುವುದು ಎರಡು ಪ್ರತ್ಯೇಕ ನಿರ್ಧಾರಗಳು. ಬಂಧನಕ್ಕೆ ಬಿಎನ್ಎಸ್ಎಸ್ ಸೆಕ್ಷನ್ 35ರ ಷರತ್ತುಗಳು ಹಾಗೂ ಸುಪ್ರೀಂಕೋರ್ಟ್ನ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬಂಧನಕ್ಕೆ ಅಗತ್ಯವಾದ ಕಾನೂನು ಷರತ್ತುಗಳು ಈಡೇರದಿದ್ದರೆ ಸೆಕ್ಷನ್ 35(3)ರ ನೋಟಿಸ್ ಪ್ರಕ್ರಿಯೆ ಅನುಸರಿಸಬೇಕು.
* ಪ್ರಕರಣ ದಾಖಲಿಸುವಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ಹಾಗೂ ಅನಗತ್ಯ ಬಂಧನ ತಡೆಯುವ ನಿಯಮಗಳನ್ನು ಸೂಕ್ತ ಆಡಳಿತಾತ್ಮಕ ಸೂಚನೆಗಳ ಮೂಲಕ ಎಲ್ಲ ಸಂಬಂಧಿತ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರುವುದನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು ಖಾತ್ರಿಪಡಿಸಬೇಕು.






