ಸಿನಿಮಾ ಟಿಕೆಟ್ ದರದ ಮೇಲೆ ಶೇ.2 ಸೆಸ್; ಖಾಸಗಿ ದೂರದರ್ಶನ ಪ್ರಸಾರಕ ಸಂಸ್ಥೆಗಳಿಂದ ಹೈಕೋರ್ಟ್ಗೆ ರಿಟ್

ಬೆಂಗಳೂರು : ಸಿನಿಮಾ ಹಾಗೂ ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಯೋಜನೆಗಳಿಗೆ ಅನುದಾನ ಒದಗಿಸಲು ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ಟಿಕೆಟ್ ದರದ ಮೇಲೆ ಶೇ. 2 ಸೆಸ್ (ಉಪಕರ) ಸಂಗ್ರಹಿಸುವ ಕ್ರಮ ಆಕ್ಷೇಪಿಸಿ ಇದೀಗ ಖಾಸಗಿ ದೂರದರ್ಶನ ಪ್ರಸಾರಕ ಸಂಸ್ಥೆಗಳು (ಬ್ರಾಡ್ಕಾಸ್ಟರ್) ಹೈಕೋರ್ಟ್ ಮೆಟ್ಟಿಲೇರಿವೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ದಿ) ಕಾಯ್ದೆ ಹಾಗೂ ಅದರ ಕೆಲವು ಸೆಕ್ಷನ್ಗಳು ತಮಗೆ ಅನ್ವಯವಾಗುವುದಿಲ್ಲ ಎಂದು ಆಕ್ಷೇಪಿಸಿ ದೆಹಲಿಯಲ್ಲಿ ಕಚೇರಿ ಹೊಂದಿರುವ ಇಂಡಿಯನ್ ಬ್ರಾಡ್ಕಾಸ್ಟಿಂಗ್ ಅ್ಯಂಡ್ ಡಿಜಿಟಿಲ್ ಫೌಂಡೇಷನ್, ಬೆಂಗಳೂರಿನಲ್ಲಿ ಕಚೇರಿ ಹೊಂದಿರುವ ಜಿಯೋಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಝೀ ಎಂಟರ್ಟೇನ್ಮೆಂಟ್ ಎಂಟರ್ಪ್ರೈಸೆಸ್ ಲಿಮಿಟೆಡ್, ಝೀ ಕನ್ನಡ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿವೆ.
ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ. ನರೇಂದ್ರಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆಗೆ ನೋಟಿಸ್ ಜಾರಿಗೊಳಿಸಿತು. ಜತೆಗೆ, ಕಾಯ್ದೆಯಡಿ ಅರ್ಜಿದಾರ ಸಂಸ್ಥೆಗಳ ವಿರುದ್ಧ ಮುಂದಿನ ವಿಚಾರಣೆವರೆಗೆ ಯಾವುದೇ ಕಠಿಣ ಕ್ರಮ ಜರುಗಿಸದಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿತು.




