ಸರ್ಕಾರಿ-ಅನುದಾನಿತ ಶಾಲೆಗಳಲ್ಲಿ ರಂಗಶಿಕ್ಷಕರ ನೇಮಕಾತಿ; ಮನವಿ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶನ

ಬೆಂಗಳೂರು : ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ‘ರಂಗ ಶಿಕ್ಷಕ‘ (ಡ್ರಾಮಾ ಟೀಚರ್) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ನಿಯಮಗಳನ್ನು ಅಂತಿಮಗೊಳಿಸಿ, ಸೂಕ್ತ ಮೀಸಲಾತಿ ನಿಗದಿಪಡಿಸುವ ಕುರಿತ ಅರ್ಜಿದಾರರ ಮನವಿಯನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಪರಿಗಣಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ನಿರ್ದೇಶಿಸಿದೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ರೌಡಕುಂದ ಗ್ರಾಮದ ಮಹೇಶ, ಲಿಂಗಸೂಗೂರು ತಾಲೂಕು ಚಿಕ್ಕಹೆಸರೂರಿನ ಪ್ರಭುರಾಜ ಸೇರಿದಂತೆ ಮ್ಯಾನತೆ ಪಡೆದ ಸಂಸ್ಥೆಗಳಲ್ಲಿ ರಂಗ ಭೂಮಿ ಮತ್ತು ನಾಟಕ ಕಲೆಗಳ ಶಿಕ್ಷಣ ಪಡೆದ ರಂಗ ಶಿಕ್ಷಕರ ಹುದ್ದೆಗೆ ಅರ್ಹತೆ ಪಡೆದಿರುವ ರಾಜ್ಯದ ಕೆಲ ಅಭ್ಯರ್ಥಿಗಳು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಲೇವಾರಿ ಮಾಡಿದೆ.
ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಪ್ರೌಢಶಾಲೆಗಳಲ್ಲಿ ರಂಗಶಿಕ್ಷಕರ ನಿಯಮಿತ ನೇಮಕಾತಿಗಾಗಿ ಕೋಟಾ ಮತ್ತು ಹಂಚಿಕೆ ಸೇರ್ಪಡೆ ಮಾಡುವ ಮೂಲಕ ಕರಡು ನೇಮಕಾತಿ ನಿಯಮಗಳನ್ನು ಅಂತಿಮಗೊಳಿಸಬೇಕು ಎಂಬ ಅರ್ಜಿದಾರರ ಕೋರಿಕೆಯನ್ನು ಕಾನೂನಿನ ಪ್ರಕಾರ ಪರಿಗಣಿಸಬೇಕು ಎಂದು ನ್ಯಾಯಪೀಠ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿದೆ.
ನೇಮಕಾತಿ ನಿಯಮಗಳನ್ನು ಮರುರಚಿಸುವ ಕುರಿತು ಸರ್ಕಾರ ಸೂಕ್ತ ಪರಿಶೀಲನೆ ನಡೆಸಬೇಕು. ಈ ನಿಟ್ಟಿನಲ್ಲಿನ ಅರ್ಜಿದಾರರ ಮನವಿಯನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ, ಆ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಅಗತ್ಯ ಮತ್ತು ಅನುಕೂಲಕರ ಎಂದು ಕಂಡಬಂದರೆ, ಅರ್ಜಿದಾರರಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅಥವಾ ಸ್ಪಷ್ಟನೆ ನೀಡಲು ಸೂಕ್ತ ಅವಕಾಶ ಕಲ್ಪಿಸಬೇಕು ಎಂದೂ ನ್ಯಾಯಾಲಯ ಸೂಚಿಸಿದೆ.
ಅರ್ಜಿದಾರರ ಮನವಿ:
ರಾಜ್ಯದ ಎಲ್ಲ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಪ್ರೌಢಶಾಲೆಗಳಲ್ಲಿನ ರಂಗ ಶಿಕ್ಷಕರ ನೇಮಕಾತಿಗಾಗಿ 2026ರ ಜುಲೈ 14ರಂದು ಪ್ರಕಟಿಸಲಾಗಿರುವ ಅಧಿಸೂಚನೆಗೆ ನಿರ್ದಿಷ್ಟ ಹಾಗೂ ಕಡ್ಡಾಯ ಮೀಸಲಾತಿ ಮತ್ತು ರಚನಾತ್ಮಕ ಹಂಚಿಕೆ ಸೂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ನೇಮಕಾತಿ ನಿಯಮಗಳ ಕರಡನ್ನು ಅಂತಿಮಗೊಳಿಸಲು ನಿರ್ದೇಶಿಸಬೇಕು. ನೇಮಕಾತಿ ಪ್ರಕ್ರಿಯೆಯಲ್ಲಿ ರಂಗಭೂಮಿ ಪದವೀಧರರನ್ನು ಗುರುತಿಸಲಾಗಿಲ್ಲ. ಆದ್ದರಿಂದ, 'ರಂಗ ಶಿಕ್ಷಕರು' (ನಾಟಕ/ರಂಗಭೂಮಿ ಪದವೀಧರರು) ಹುದ್ದೆಗಳನ್ನು ಸೇರ್ಪಡೆ ಮಾಡುವ ಮೂಲಕ ನೇಮಕಾತಿ ಚೌಕಟ್ಟನ್ನು ಮಾರ್ಪಾಡು ಮಾಡಬೇಕು ಎಂದು ಅರ್ಜಿದಾರರು ಕೋರಿದ್ದರು.






